ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಕೆಎ-20 ವಾಹನಗಳಿಂದ ಟೋಲ್ ಆರಂಭ-ಪ್ರತಿಭಟನಾಕಾರರ ಬಂಧನ,ಬಿಡುಗಡೆ26

ಪಡುಬಿದ್ರಿ: ಅಭೂತಪೂರ್ವ ಪೋಲೀಸ್ ಬಂದೋಬಸ್ತ್‍ನೊಂದಿಗೆ ಸೋಮವಾರ ಹೆಜಮಾಡಿ ನವಯುಗ್ ಟೋಲ್‍ಪ್ಲಾಝಾದಲ್ಲಿ ಕೆಎ-20 ವಾಹನಗಳಿಂದ ಬೆಳಿಗ್ಗೆ ಟೋಲ್ ವಸೂಲಾತಿ ಆರಂಭಗೊಂಡಿದ್ದು,ಸಾಂಕೇತಿಕ ಪ್ರತಿಭಟನೆ ನಡೆಸಿದ ರಾಹೆ ಹೋರಾಟ ಸಮಿತಿಯ ಸದಸ್ಯರನ್ನು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ನಡೆದಿದೆ.

ಡಿವೈಎಸ್‍ಪಿಗಳಾದ ಬೆಳ್ಳಿಯಪ್ಪ ಕೆಯು ಮತ್ತು ದಿನೇಶ್ ಕುಮಾರ್,ಕಾರ್ಕಳ ತಹಶೀಲ್ದಾರ್ ಮೊಹಮ್ಮದ್ ಇಸಾಕ್,ಆರ್‍ಟಿಒ ಸಂತೋಷ್ ಶೆಟ್ಟಿ, ಕಾಪು ಸಿಪಿಐ ಮಹೇಶ್ ಪ್ರಸಾದ್,ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಪಿ. ನೇತೃತ್ವದಲ್ಲಿ 500ಕ್ಕೂ ಅಧಿಕ ಪೋಲೀಸ್ ಪಡೆ ಹೆಜಮಾಡಿ ಟೋಲ್‍ನಲ್ಲಿ ಮುಂಜಾನೆಯಿಂದಲೇ ನಿಯುಕ್ತಿಗೊಂಡಿದ್ದು,ಬೆಳಿಗ್ಗೆ 9 ಗಂಟೆಯಿಂದ ಸ್ಥಳೀಯ ವಾಹನಗಳಿಂದ ಟೋಲ್ ವಸೂಲಾತಿ ಆರಂಭಗೊಂಡಿತ್ತು.ಇದರ ಅರಿವಿರದ ಅನೇಕ ವಾಹನ ಮಾಲೀಕರು ಟೋಲ್ ನೀಡಲು ನಿರಾಕರಿಸಿದ್ದು,ಪೋಲೀಸ್ ಮಧ್ಯ ಪ್ರವೇಶದಿಂದ ಟೋಲ್ ಸಂಗ್ರಹ ಮಾಡಲಾಗಿತ್ತು.ಹೆಜಮಾಡಿಯಲ್ಲಿ ಮತ್ತು ಸುರತ್ಕಲ್ ಎರಡೂ ಕಡೆ ಟೋಲ್ ನೀಡುವುದು ಕಷ್ಟಕರ ಎಂದು ಹಲವರ ಅನಿಸಿಕೆಯಾಗಿತ್ತು.ಸುರತ್ಕಲ್‍ನಲ್ಲಿ ಕೆಎ19 ವಾಹನಗಳಿಗೆ ಟೋಲ್ ವಿನಾಯಿತಿ ಇದ್ದು ಹೆಜಮಾಡಿಯಲ್ಲಿ ಕೆಎ20 ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕೆಂದು ಅವರ ಅಭಿಪ್ರಾಯವಾಗಿತ್ತು.

ಬೆಳಿಗ್ಗೆ ಸುಮಾರು 11 ಗಂಟೆಗೆ ಹೋರಾಟ ಸಮಿತಿಯ ಸುಮಾರು 50 ಮಂದಿ ಟೋಲ್ ಪ್ಲಾಝಾಗೆ ಆಗಮಿಸಿ ಶಾಂತಿಯುತ ಪ್ರತಿಭಟನೆ ಆರಂಭಿಸಿದರು.ಈ ಸಂದರ್ಭ ಮಾತನಾಡಿದ ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ,ಶಾಸಕರು ಮತ್ತು ಸಂಸದರ ವಿರುದ್ಧ ಹರಿಹಾಯ್ದರು.ಜನರ ಸಮಸ್ಯೆ ಪರಿಹರಿಸಬೇಕಾದ ಜನಪ್ರತಿನಿಧಿಗಳು ಮೌನವಾಗಿರುವುದು ಸಂಶಯಕ್ಕೆಡೆ ಮಾಡಿದೆ.ಅವರು ತಮ್ಮ ನಿಲುವನ್ನು ಪ್ರಕಟಿಸಬೇಕು.ತಪ್ಪಿದಲ್ಲಿ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವರ್ಯವಾಗಿದೆ ಎಂದರು.

ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ,ಟೋಲ್ ಸಮಮಸ್ಯೆಗೆ ಜಿಲ್ಲಾಡಳಿತವೇ ಕಾರಣ.ರಾಜ್ಯದ ಬೇರೆಡೆ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ಇದೆ.ಆದರೆ ಇಲ್ಲಿ ಜಿಲ್ಲಾಧಿಕಾರಿಯವರು ಏಕಾಏಕಿ ನವಯುಗ್ ಕಂಪನಿಗೆ ಪೋಲೀಸ್ ಬಲ ಪ್ರಯೋಗದಿಂದ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಿದ್ದಾರೆ.ಶೇ.100ರಷ್ಟು ಕಾಮಗಾರಿ ನಡೆಸದೆ ಟೋಲ್ ಸಂಗ್ರಹ ಸಿಂಧುವಲ್ಲ.ಇಂತಹ ಜಿಲ್ಲಾಧಿಕಾರಿ ನಮಗೆ ಬೇಡವೇ ಬೇಡ.ಜಿಲ್ಲಾಧಿಕಾರಿಗಳು ಮೊದಲು ಇಲ್ಲಿನ ಮರಳು ಸಮಸ್ಯೆಯನ್ನು ಮತ್ತು ವಸತಿ ಸಮಸ್ಯೆಯನ್ನು ಬಗೆಹರಿಸಲಿ. ಸ್ಥಳಿಯ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ನಮ್ಮ ತೀವ್ರ ವಿರೋಧವಿದೆ.ನಮ್ಮ ಹೋರಾಟ ನಿರಂತರ.ತುರ್ತು ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಿದ್ದೇವೆ.ಹೆಜಮಾಡಿ ಟೋಲ್‍ನಲ್ಲಿ ಕಾಮಾಗಿ ಶೇ.100ರಷ್ಟು ಆಗುವವರೆಗೆ ಕೆಎ 19 ಮತ್ತು 20 ವಾಹನಗಳಿಂದ ಟೋಲ್ ಪಡೆಯಬಾರದು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದಿದ್ದಾರೆ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಮಾತನಾಡಿ,ಯಾವುದೇ ಕಾರಣಕ್ಕೂ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ ಸಾಧ್ಯವಿಲ್ಲ ಉಗ್ರ ಹೋರಾಟದಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತೇವೆ ಎಂದರು.

ಹೋರಾಟ ಸಮಿತಿಯ ಉಪಾಧ್ಯಕ್ಷ ಗುಲಾಮ್ ಮೊಹಮ್ಮದ್ ಮಾತನಾಡಿ,ದಬ್ಬಾಳಿಕೆ ಮೂಲಕ ಟೋಲ್ ಸಂಗ್ರಹದ ವಿರುದ್ಧ ನಮ್ಮ ವಿರೋಧವಿದೆ.ಯಾವುದೇ ಬೆಲೆ ತೆತ್ತಾದರೂ ಟೋಲ್ ಸಂಗ್ರಹ ನಿಲ್ಲಿಸುತ್ತೇವೆ ಎಂದರು.

ಇದೇ ಸಂದರ್ಭ ಜಿಲ್ಲಾಧಿಕಾರಿ,ಜನಪ್ರತಿನಿಧಿಗಳು,ಟೋಲ್ ಪ್ಲಾಝಾ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಸುಮಾರು 15-20 ಪ್ರತಿಭಟನಾಕಾರರನ್ನು ಬಂಧಿಸಿ ಪಡುಬಿದ್ರಿ ಪೋಲೀಸ್ ಠಾಣೆಗೆ ಕೊಂಡೊಯ್ದು ಹಾಜರಾತಿ ಬಳಿಕ ಬಿಡುಗಡೆಗೊಳಿಸಲಾಯಿತು.

ಟೋಲ್ ನೀಡಲು ನಿರಾಕರಿಸಿದ ವಾಹನವೊಂದರ ದಾಖಲಾತಿ ಪಡೆದು ಆರ್‍ಟಿಒರವರು ಪ್ರಕರಣ ದಾಖಲಿಸಿಕೊಂಡರು.ವಾಹನ ಅಡ್ಡವಿಟ್ಟಲ್ಲಿ ಜೆಸಿಬಿ ಮೂಲಕ ಎತ್ತೊಯ್ಯಲು 3 ಜೆಸಿಬಿಗಳನ್ನು ತಂದಿಡಲಾಗಿತ್ತು.ಸೋಮವಾರದಿಂದಲೇ ಹೆಜಮಾಡಿ ವಾಸಿಗಳಿಗೆ ಟೋಲ್ ವಸೂಲಾತಿಯಿಂದ ವಿನಾಯಿತಿ ನೀಡಲಾಗಿದ್ದು,ಪ್ರತಿಭಟನೆಯ ಕಾವು ಕಡಿಮೆಯಾಗಲು ಕಾರಣವಾಗಿತ್ತು.
ನವಯುಗ್ ಟೋಲ್‍ನಿಂದ ವಿನಾಯಿತಿ:ಹೆಜಮಾಡಿ ಟೋಲ್‍ನಲ್ಲಿ ಹೆಜಮಾಡಿ ವಾಸಿಗಳಿಗೆ ಸಂಪೂರ್ಣ ವಿನಾಯಿತಿ ಘೋಷಿಸಲಾಗಿದೆ.ಹೆಜಮಾಡಿಯ ಬಿಳಿ ನಂಬರ್ ಪ್ಲೇಟ್ ಹೊಂದಿದ ವಾಹನ ಮಾಲೀಕರು ಸೂಕ್ತ ದಾಖಲೆಗಳನ್ನು ಒದಗಿಸಿ ಸಂಪೂರ್ಣ ವಿನಾಯಿತಿಯ ಪಾಸ್ ಪಡೆದುಕೊಳ್ಳುವಂತೆ ನವಯುಗ್ ತಿಳಿಸಿದೆ.

ಟೋಲ್ ಪ್ಲಾಝಾದ ಎರಡೂ ಕಡೆ 20 ಕಿಮೀ ವ್ಯಾಪ್ತಿಯ ಬಿಳೀ ನಂಬರ್ ಪ್ಲೇಟ್ ಹೊಂದಿದ ವಾಹನಗಳಿಗೆ ಫೋಟೋ,ಆರ್‍ಸಿ,ಮತ್ತು ವಿಳಾಸ ದಾಖಲಾತಿ ನೀಡಿದಲ್ಲಿ ಮಾಸಿಕ ರಾ.250 ರ ಪಾಸ್ ನೀಡಲಾಗುವುದು.ಇದಲ್ಲಿ ತಿಂಗಳಲ್ಲಿ ಎಷ್ಟು ಬಾರಿ ಬೇಕಾದರೂ ಪ್ರಯಾಣಿಸಬಹುದಾಗಿದೆ.
ಈ ಎರಡೂ ಪಾಸ್‍ಗಳ ಮೊತ್ತವನ್ನು ನವಯುಗ್ ಕಂಪನಿಯೇ ಸಾಲ ನೀಡಿದ ಬ್ಯಾಂಕ್‍ಗಳಿಗೆ ಪಾವತಿಸಲಿದೆ.

ಎಲ್‍ಸಿವಿ ವಾಹನಗಳಿಗೆ ತಿಂಗಳಿಗೆ ರೂ.1850 ಪಾವತಿಸಿದಲ್ಲಿ ಮಾಸಿಕ 50 ಟ್ರಿಪ್ ಪ್ರಯಾಣಿಸಬಹುದು.ಬಸ್ ಮತ್ತು ಟ್ರಕ್‍ಗಳು ರೂ.3880 ಪಾವತಿಸಿದಲ್ಲಿ ಮಾಸಿಕ 50 ಟ್ರಿಪ್ ಪ್ರಯಾಣಿಸಬಹುದಾಗಿದೆ.ಎಮ್‍ಎವಿ ವಾಹನಗಳು ರೂ.6085 ಪಾವತಿಸಿದಲ್ಲಿ ಮಾಸಿಕ 50 ಟ್ರಿಪ್ ಪ್ರಯಾಣಿಸಬಹುದು ಎಂದು ನವಯುಗ್ ಪ್ರಕಟಣೆ ತಿಳಿಸಿದೆ. ಹಳದಿ ನಂಬರ್ ಪ್ಲೇಟ್ ಉಳ್ಳ ಸ್ಥಳೀಯ ವಾಹನಗಳ ಪಾಸ್ ಬಗ್ಗೆ ಕಂಪನಿಯೊಂದಿಗೆ ಮಾತನಾಡಿ ಶೀಘ್ರ ಪರಿಹಾರ ನೀಡಲಾಗುವುದೆಂದೂ ತಿಳಿಸಲಾಗಿದೆ.