ಹೆಜಮಾಡಿ ಟೋಲ್‍ಗೇಟ್ ಬಳಿ ಬೈಕ್‍ಗೆ ಬೆಂಕಿ: ಸಂಪೂರ್ಣ ಭಸ್ಮ

ಪಡುಬಿದ್ರಿ: ಇಲ್ಲಿನ ಠಾಣಾ ವ್ಯಾಪ್ತಿಯ ಹೆಜಮಾಡಿ ನವಯುಗ್ ಟೋಲ್ ಪ್ಲಾಝಾ ಬಳಿ ಶುಕ್ರವಾರ ಬುಲೆಟ್ ಬೈಕ್ ಒಂದಕ್ಕೆ ಅಕಸ್ಮಿಕ ಬೆಂಕಿ ಹೊತ್ತಿಕೊಂಡು ಬೈಕ್ ಸಂಪೂರ್ಣ ಭಸ್ಮಗೊಂಡು ಅದರಲ್ಲಿದ್ದ ಎಲ್ಲಾ ದಾಖಲೆಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಗೋವಾದಿಂದ ಕೇರಳಕ್ಕೆ ಹೋಗುತ್ತಿದ್ದ ರೋಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್‍ಗೆ ಟೋಲ್ ಪ್ಲಾಝಾದ ದ್ವಿಚಕ್ರ ಪಥದಲ್ಲಿ ಅಕಸ್ಮಿಕ ಬೆಂಕಿ ತಗುಲಿತ್ತು.ಈಸಂದರ್ಭ ಬೈಕ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು,ಅದರಲ್ಲಿದ್ದ ಬಟ್ಟೆಬರೆ ಸಹಿತ ಮಹತ್ವಪೂರ್ಣ ದಾಖಲೆಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.

ಕೇರಳದ ಎರ್ನಾಕುಲಂ ನಿವಾಸಿ ಫೆಬಿನ್ ಫೈಜಾಲ್ ಎಂಬವರು ಚಲಾಯಿಸುತ್ತಿದ್ದ ರೋಯಲ್ ಎನ್‍ಫೀಲ್ಡ್ ಬೈಕ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಹೆಜಮಾಡಿ ಟೋಲ್‍ಗೇಟ್ ಬಳಿ ದುರಂತಕ್ಕೀಡಾಗಿದೆ.
ಗೋವಾದ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕಿದ್ದ ಫೆಬಿನ್ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಕೇರಳದ ಎರ್ನಾಕುಲಂನಲ್ಲಿ ಇರುವ ತಮ್ಮ ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಬೈಕ್‍ನಲ್ಲಿ ಸವಾರಿ ಬೆಳೆಸಿದ್ದರು. ಮಧ್ಯಾಹ್ನ ಸುಮಾರು 12:30ರ ವೇಳೆಗೆ ಪಡುಬಿದ್ರಿ ಸಮೀಪದ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮಂಗಳೂರು ಕಡೆ ಪ್ರಯಾಣಿಸುತ್ತಿದ್ದ ವೇಳೆ ಹೆಜಮಾಡಿ ಟೋಲ್‍ಗೇಟ್ ಪರಿಸರದಲ್ಲಿ ಬೈಕ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಟೋಲ್‍ಗೇಟ್ ಸಿಬ್ಬಂದಿಗಳು ಅಗ್ನಿಶಾಮಕ ಪರಿಕರದೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದ್ದು ಬಳಿಕ ನೀರಿನ ಸಹಾಯದಿಂದ ಬೆಂಕಿಯನ್ನು ಹತೋಟಿಗೆ ತರಲು ಸಫಲರಾಗಿದ್ದಾರೆ.

ಆದರೆ ಇಷ್ಟೊತ್ತಿಗೆ ಬೈಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಫೆಬಿನ್‍ನ ಬಳಿಯಿದ್ದ ಬ್ಯಾಗ್ ಕೂಡ ಬೆಂಕಿಯಲ್ಲಿ ಆಹುತಿಯಾಗಿದ್ದು ಅವರ ಬಳಿ ಇದ್ದ ಹಣ, ಬಟ್ಟೆ ಮತ್ತು ದಾಖಲೆಗಳು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಬೈಕ್‍ಗೆ ಬೆಂಕಿ ಹತ್ತುವ ವೇಳೆ ಪಕ್ಕದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಮತ್ತೆರಡು ದ್ವಿಚಕ್ರ ವಾಹನಗಳೂ ಬೆಂಕಿಯ ಹಬೆಗೆ ತುತ್ತಾಗಿದ್ದು ಭಾಗಶಃ ಹಾನಿಗೆ ಒಳಗಾಗಿದೆ. ಈ ಅಗ್ನಿ ದುರಂತದಿಂದಾಗಿ ಟೋಲ್‍ಗೇಟ್ ಕಟ್ಟಡದ ಕಿಟಕಿಯ ಗಾಜು ಮತ್ತು ಗೋಡೆಗೂ ಹಾನಿಯುಂಟಾಗಿದೆ.ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.ದೂರ ಪ್ರಯಾಣದ ವೇಳೆ ಬೈಕ್‍ನ ಉಷ್ಣತಾ ಪ್ರಮಾಣ ಹೆಚ್ಚಾಗಿದ್ದು,ಇದೇ ವೇಳೆ ಬೈಕ್‍ಗೆ ಭರ್ತಿ ಪೆಟ್ರೋಲ್ ತುಂಬಿಸದ ಕಾರಣ ಉಷ್ಟಾಂಶದಲ್ಲಿ ಏರುಪೇರಾದ ಕಾರಣ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನಾ ಸ್ಥಳ ಪರಿಶೀಲಿಸಿದ್ದಾರೆ.