ಹೆಜಮಾಡಿ ಗ್ರಾಪಂ ಸಾಮಾಜಿಕ ಲೆಕ್ಕಪರಿಶೋಧನೆ ಸಭೆ

ಪಡುಬಿದ್ರಿ: ಹೆಜಮಾಡಿ ಗ್ರಾಪಂನ 2019-20ನೇ ಸಾಲಿನ ದ್ವಿತೀಯ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯು ಗ್ರಾಪಂ ಸಭಾಂಗಣದಲ್ಲಿ ನಡೆಯಿತು.

ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಶ್ವೇತಾ ಹಿರೇಮಠ್ ಸಭಾಧ್ಯಕ್ಷತೆ ವಹಿಸಿದ್ದರು.
ನಿರುದ್ಯೋಗಿಗಳಿಗೆ ಕೂಲಿ ಕೆಲಸ ನೀಡುವುದರೊಂದಿಗೆ ಹೊಸ ಆಸ್ತಿ ಸೃಜನೆಗೆ ಈ ಯೋಜನೆಯಲ್ಲಿ ಒಳ್ಳೆ ಅವಕಾಶವಿದ್ದು, ಗ್ರಾಮ ಪಂಚಾಯಿತಿ ಮಾತ್ರವಲ್ಲದೆ ಅನುಷ್ಟಾನ ಇಲಾಖೆಯಿಂದಲೂ ಈ ಯೋಜನೆಯ ಸವಲತ್ತು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಮಾತನಾಡಿ, ಈ ಯೋಜನೆಯ ಸವಲತ್ತನ್ನು ಕಾನೂನಿನ ಚೌಕಟ್ಟಿನೊಳಗೆ ಅರ್ಹರೆಲ್ಲರೂ ಪಡೆದುಕೊಳ್ಳುವಂತೆ ಕರೆಯಿತ್ತರು. ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಕರ್ಕೇರರು ಯೋಜನೆ ಅನುಷ್ಠಾನಗೊಳಿಸುವಲ್ಲಿ ಕೆಲವೊಂದು ಕಾನೂನನ್ನು ಸಡಿಲಿಕೆ ಮಾಡಿದಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಅನುಕೂಲವಾಗುವುದಾಗಿ ತಿಳಿಸಿದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಮತಾ ವೈ. ಶೆಟ್ಟಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಸುಮತಿ ಆಹ್ವಾನ ಪತ್ರ ಓದಿದರು. ಪ್ರಾಸ್ತಾವಿಕವಾಗಿ ಯೋಜನೆಯ ಬಗ್ಗೆ ಮಾಹಿತಿ, ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯಕ್ರಮದ ಬಗ್ಗೆ ತಾಲೂಕು ಸಂಯೋಜಕರಾದ ರಾಜು ಮೂಲ್ಯರವರು ವಿವರಿಸಿದರು.

2019.20ನೇ ಸಾಲಿನ ಅಂದಾಜು ಆಯವ್ಯಯ ಮತ್ತು ಕಾಮಗಾರಿಗೆ ಆದ ಖರ್ಚಿನ ವಿವರವನ್ನು ಲೆಕ್ಕ ಸಹಾಯಕಿ ರಜನಿ ಸಭೆಗೆ ಮಂಡಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮ ನಿರೂಪಿಸಿ, ಲೆಕ್ಕ ಸಹಾಯಕಿ ರಜನಿ ವಂದಿಸಿದರು.