ಹೆಜಮಾಡಿ ಕರಾವಳಿ ವೃಂದದಿಂದ ಸ್ವಚ್ಛತಾ ಪಾಕ್ಷಿಕ

ಪಡುಬಿದ್ರಿ: ಕಳೆದ ಮಾಸಿಕದಲ್ಲಿ ಸ್ವಚ್ಛ ಭಾರತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹೆಜಮಾಡಿಯ ಕರಾವಳಿ ಯುವಕ-ಯುವತಿ ವೃಂದವು ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ರಾಷ್ಟ್ರೀಯ ಕಾರ್ಯಕ್ರಮದ ಉಡುಪಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಗೆ ಭಾಜನವಾಗಿದೆ ಎಂದು ಉಡುಪಿ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜಾ ಹೇಳಿದರು.

ಹೆಜಮಾಡಿಯ ಅಮವಾಸ್ಯೆಕರಿಯ ಕಡಲ ಕಿನಾರೆಯಲ್ಲಿ ಶನಿವಾರ ಸಂಜೆ ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದ ಮತ್ತು ಉಡುಪಿ ನೆಹರೂ ಯುವ ಕೇಂದ್ರದ ವತಿಯಿಂದ ಹಮ್ಮಿಕೊಂಡ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮ-2019ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಜಮಾಡಿ ಗ್ರಾಮದ ಕಡಲ ಕಿನಾರೆಯನ್ನು ಬಯಲು ಶೌಚ ಮುಕ್ತವನ್ನಾಗಿಸಲು ಗ್ರಾಪಂ ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮುಖ್ಯ ಅತಿಥಿ ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಯು.ಪುತ್ರನ್ ಹೇಳಿದರು.

ಎಸ್‍ಎಲ್‍ಆರ್‍ಎಮ್ ಘಟಕ ಸ್ಥಾಪಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಹಿನ್ನೆಲೆಯಲ್ಲಿ ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್‍ರವರು ಉಡುಪಿ ಜಿಲ್ಲೆಯ ಏಕೈಕ ಪ್ರತಿನಿಧಿಯಾಗಿ ಅ.2 ರಂದು ಗುಜರಾತ್‍ನಲ್ಲಿ ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.

ಜೇಸಿಐ ಪಡುಬಿದ್ರಿಯ ಪೂರ್ವಾಧ್ಯಕ್ಷ ಹರೀಶ್ ಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರತಿ ವರ್ಷ ಬೀಚ್‍ಗಳಲ್ಲಿ ತ್ಯಾಜ್ಯ ಸಂಗ್ರಹಣೆ ಪ್ರಮಾಣ ಅಧಿಕವಾಗುತ್ತಿದೆ. ಈ ಬಗ್ಗೆ ಸಂಘ ಸಂಸ್ಥೆಗಳು ಜನರ ಮನವೊಲಿಸುವ ಕಾರ್ಯ ಹಮ್ಮಿಕೊಳ್ಳಬೇಕೆಂದರು.
ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ ಮಾತನಾಡಿ, ಗ್ರಾಪಂ ಎಸ್‍ಎಲ್‍ಆರ್‍ಎಮ್ ಘಟಕವು ಜಿಲ್ಲೆಗೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಶೇ.75 ಕ್ಕೂ ಅಧಿಕ ಸಾರ್ವಜನಿಕರು ಘಟಕದ ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಶೇ.100 ರ ಸಾಧನೆಗೆ ಗ್ರಾಪಂ ಮುಂದಡಿಯಿಟ್ಟಿದೆ ಎಂದರು.

ಕರಾವಳಿ ವೃಂದದ ಗೌರವಾಧ್ಯಕ್ಷ ಗೋವರ್ಧನ ಕೋಟ್ಯಾನ್, ಯುವತಿ ವೃಂದದ ಅಧ್ಯಕ್ಷೆ ಪವಿತ್ರಾ ಗಿರೀಶ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಜಿತೇಂದ್ರ ವಿ.ರಾವ್ ವಂದಿಸಿದರು.