ಹೆಜಮಾಡಿ ಒಳ ರಸ್ತೆಗೆ ಟೋಲ್ ವಿರೋಧಿಸಿ ಪ್ರತಿಭಟನೆ

ಹೆಜಮಾಡಿ ಒಳ ರಸ್ತೆಗೆ ಟೋಲ್ ವಿರೋಧಿಸಿ ಪ್ರತಿಭಟನೆ

ಸೆ.30ರವರೆಗೆ ಸ್ಥೆಳೀಯ ವಾಹನಗಳಿಗೆ ಟೋಲ್ ರಿಯಾಯತಿಗೆ ಒಪ್ಪಿಗೆ

ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಹೆಜಮಾಡಿಯ ಹಳೆ ಎಮ್‍ಬಿಸಿ ರಸ್ತೆಗೆ ಟೋಲ್ ಪ್ಲಾಝಾ ಅಳವಡಿಸಿ ಟೋಲ್ ಸಂಗ್ರಹ ಆರಂಭಿಸಿದ್ದನ್ನು ಪ್ರತಿಭಟಿಸಿ ಭಾನುವಾರ ಅವಿಭಜಿತ ದಕ ಜಿಲ್ಲಾ ಹೆದ್ದಾರಿ ಹೋರಾಟ ಸಮಿತಿಯು ಪ್ರತಿಭಟನೆ ನಡೆಸಿದ್ದು,ತಹಶೀಲ್ದಾರ್ ಹಾಗೂ ಹಿರಿಯ ಪೋಲೀಸ್ ಅಧಿಕಾರಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯ ಬಳಿಕ ಸೆ.30ರವರೆಗೆ ಸ್ಥಳೀಯ ವಾಹನಗಳಿಗೆ ಯಾವುದೇ ಟೋಲ್ ಪಡೆಯದಿರಲು ನಿರ್ಧರಿಸಲಾಗಿದೆ.


ಹೆಜಮಾಡಿ ಟೋಲ್ ಪ್ಲಾಝಾ ಸುತ್ತಲ 7ಕಿಮೀ ವ್ಯಾಪ್ತಿಯ ಎಲ್ಲಾ ವಾಹನಗಳಿಗೆ,ಹೆಜಮಾಡಿ ಒಳ ರಸ್ತೆಯಲ್ಲಿ ಸಂಚರಿಸುವ ಸರ್ವಿಸ್ ಬಸ್ಸು ಮತ್ತು ಶಾಲಾ ವಾಹನಗಳಿಗೆ ಟೋಲ್ ಪಡೆಯದಿರಲು ಸಂಧಾನ ಸಭೆಯಲ್ಲಿ ಟೋಲ್ ಮ್ಯಾನೇಜರ್ ರವಿಬಾಬು ಒಪ್ಪಿಗೆ ನೀಡಿದರು.ಸೆ.30ರಂದು ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳು ಟೋಲ್ ಕಂಪನಿ ನವಯುಗ್ ಜತೆ ಸಮಾಲೋಚನಾ ಸಭೆ ನಿಗದಿಯಾಗಿದ್ದು ಅಲ್ಲಿವರೆಗೆ ಟೋಲ್ ವಿನಾಯತಿಗೆ ಒಪ್ಪಿಗೆ ನೀಡಲಾಯಿತು.


ಬೆಳ್ಳಂಬೆಳಿಗ್ಗೆ ಸರ್ವಿಸ್ ಬಸ್‍ಗಳ ದಿಢೀರ್ ಮುಷ್ಕರ:ಹೆಜಮಾಡಿಯಲ್ಲಿ ಸಂಚರಿಸುವ ಎಲ್ಲಾ ಸರ್ವಿಸ್ ಬಸ್ಸುಗಳು ಹೆಜಮಾಡಿ ಒಳ ರಸ್ತೆಯಲ್ಲಿ ಸಂಚರಿಸುತ್ತವೆ.ಈ ತನಕ ಈ ಬಸ್ಸುಗಳಿಗೆ ಟೋಲ್ ವಿನಾಯಿತಿ ಅನಾಯಾಸವಾಗಿ ಲಭ್ಯವಾಗಿತ್ತು.ಇದೀಗ ಒಳ ರಸ್ತೆಯಲ್ಲಿ ನವಯುಗ್ ಟೋಲ್ ಆರಂಭಿಸಿದ್ದು,ಸರ್ವಿಸ್ ಬಸ್ಸುಗಳಿಗೆ ನುಂಗಲಾರದ ತುಪ್ಪವಾಗಿತ್ತು.ಶನಿವಾರ ಹಣ ಕಟ್ಟಿ ಸಂಚರಿಸಿದ್ದ ಬಸ್ಸುಗಳು ಭಾನುವಾರ ಬೆಳಿಗ್ಗೆ 6 ಗಂಟೆಯಿಂದಲೇ ಟೋಲ್ ಪ್ಲಾಝಾ ಬಳಿ ಮುಷ್ಕರ ಆರಂಭಿಸಿದರು.ಟೋಲ್ ವಿನಾಯಿತಿ ನೀಡಿದಲ್ಲಿ ಮಾತ್ರ ಬಸ್ಸು ಸಂಚಾರ ಆರಂಭಿಸುವುದಾಗಿ ಪಟ್ಟು ಹಿಡಿದರು.ಈ ಭಾಗದಲ್ಲಿ ಬರುವ ಎಲ್ಲಾ ಬಸ್ಸುಗಳೂ ತಮ್ಮ ಟ್ರಿಪ್ ಸ್ಥಗಿತಗೊಳಿಸಿದರು.ಇದರಿಂದ ಬಸ್ಸಲ್ಲಿ ಬೇರೆಡೆ ಸಂಚರಿಸುತ್ತಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.ಪ್ರಯಾಣಿಕರ ಯಾವುದೇ ಮನವಿಗೆ ಚಾಲಕರು ಸ್ಪಂದಿಸಲಿಲ್ಲ.ಹಲವು ಪ್ರಯಾಣಿಕರು ತುರ್ತಾಗಿ ಹೋಗಬೇಕಿದ್ದು,ತೀವ್ರ ಸಂಕಷ್ಟ ಅನುಭವಿಸಿದರು.

ಬಳಿಕ ಡಿವೈಎಸ್‍ಪಿ ಬೆಳ್ಳಿಯಪ್ಪ,ಕಾಪು ನಿರೀಕ್ಷಕ ಹಾಲಮೂರ್ತಿ ರಾವ್,ಹೋರಾಟ ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ ಜತೆಗೆ ಬಸ್ಸು ಮಾಲೀಕರು ಹಾಗೂ ಟೋಲ್ ಮ್ಯಾನೇಜರ್ ರವಿಬಾಬು ಮಾತುಕತೆ ನಡೆಸಿದ್ದು,ಬಸ್ಸು ಮಾಲೀಕರ ಮನವಿಗೆ ಸ್ಪಂದಿಸಿ 2 ದಿನ ಟೋಲ್ ಫ್ರೀ ಮಾಡಲು ಒಪ್ಪಿಗೆ ಪಡೆಯಲಾಯಿತು.ಬೆಳಿಗ್ಗೆ 10 ಗಂಟೆಯ ಬಳಿಕ ಬಸ್ಸು ಸಂಚಾರ ಪುನರಾರಂಭಿಸಲಾಯಿತು.ಸುರತ್ಕಲ್ ಟೋಲ್‍ನಲ್ಲಿ ಮಾಸಿಕ 5ಸಾವಿರ ರೂ.ಕಟ್ಟಿದ ಮೇಲೆ ಹೆಜಮಾಡಿಯಲ್ಲಿಯೂ ಟೋಲ್ ಕಟ್ಟಲು ಸಾಧ್ಯವಿಲ್ಲ ಎಂದು ಬಸ್ಸು ಮಾಲೀಕರ ವಾದವಾಗಿತ್ತು.

ಬಳಿಕ ರಾಹೆ ಹೋರಾಟ ಸಮಿತಿಯು ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಯಿತು.ಈ ಸಂದರ್ಭ ಕಾಪು ತಹಶೀಲ್ದಾರ್ ಗುರು ಹಿರೇಮಠ,ಹಾಲಮೂರ್ತಿ ರಾವ್,ಎಸ್‍ಐ ಸತೀಶ್ ಹಾಗೂ ಟೋಲ್ ಮ್ಯಾನೇಜರ್ ರವಿಬಾಬು ಜತೆ ಸಮಾಲೋಚನಾ ಸಭೆ ನಡೆಸಲಾಯಿತು.

ದೇವಿಪ್ರಸಾದ್ ಶೆಟ್ಟಿ,ಶೇಖರ್ ಹೆಜ್ಮಾಡಿ,ಗುಲಾಂ ಮೊಹಮ್ಮದ್,ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‍ರವರು ಯಾವುದೇ ಕಾರಣಕ್ಕೂ ಹೆಜಮಾಡಿ ಒಳ ರಸ್ತೆಗೆ ಟೋಲ್ ಸಲ್ಲದು.ಲೋಕೋಪಯೋಗಿ ಇಲಾಖಾ ರಸ್ತೆಗೆ ಟೋಲ್ ಸಂಗ್ರಹಿಸಲು ನವಯುಗ್‍ಗೆ ಅನುಮತಿ ಇಲ್ಲ ಎಂದು ವಾದಿಸಿದರು.ಅಲ್ಲದೆ ಟೋಲ್ ಪರವಾನಗಿಗಾಗಿ ನವಯುಗ್ ಸಲ್ಲಿಸಿದ ಅರ್ಜಿಯಲ್ಲಿ ಎಲ್ಲಿಯೂ ಒಳ ರಸ್ತೆಯ ಪ್ರಸ್ತಾಪ ಇರಲಿಲ್ಲ ಎಂಬುದನ್ನು ಅವರು ಮನಗಾಣಿಸಿದರು.ಈ ಬಗ್ಗೆ ಟೋಲ್ ಮ್ಯಾನೇಜರ್ ರವಿಬಾಬುರವರನ್ನು ತಹಶೀಲ್ದಾರ್‍ರವರೂ ತರಾಟೆಗೆ ತೆಗೆದುಕೊಂಡರು.

ಬಳಿಕ ಹೈದರಾಬಾದ್‍ನ ನವಯುಗ್ ಮುಖ್ಯಸ್ಥರೊಂದಿಗೆ ಸಮಾಲೋಚಿಸಿದ ರವಿಬಾಬು ಸೆ.30ರವರೆಗೆ ಟೋಲ್ ವಿನಾಯಿತಿಗೆ ಮನ್ನಣೆ ನೀಡಿದರು.

ಸೆ 20 ಸಾಂಕೇತಿಕ ಪ್ರತಿಭಟನೆ:ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹ ಸಕ್ರಮವಲ್ಲ ಎಂದು ಪ್ರತಿಪಾದಿಸಿ ಅವಿಭಜಿತ ದಕ ಜಿಲ್ಲಾ ಹೆದ್ದಾರಿ ಹೋರಾಟ ಸಮಿತಿಯು ಸೆ.20ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ತಲಪಾಡಿ,ಸುರತ್ಕಲ್,ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಮುಂಭಾಗ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುವಂತಿಲ್ಲ.ಹಲವೆಡೆ ಸೇತುವೆ ಕಾಮಗಾರಿ ನಡೆದಿಲ್ಲ.ಎಲ್ಲಿಯೂ ಸರ್ವಿಸ್ ರಸ್ತೆ ಕಾಮಗಾರಿ ನಡೆಸಿಲ್ಲ.ದಾರಿದೀಪ ಉರಿಯುತ್ತಿಲ್ಲ.ಪಡುಬಿದ್ರಿ ರಸ್ತೆ ಕಾಮಗಾರಿ ನಡೆದಿಲ್ಲ.ಅವೆಲ್ಲವನ್ನೂ ಪೂರ್ಣಗೊಳಿಸಿದ ಬಳಿಕವಷ್ಟೇ ಟೋಲ್ ಸಂಗ್ರಹಿಸಬೇಕು.ಆಗ ಸ್ವಯಂಪ್ರೇರಿತರಾಗಿ ಟೋಲ್ ನೀಡಲು ಸಿದ್ಧರಿದ್ದೇವೆ ಎಂದವರು ಹೇಳಿದ್ದಾರೆ.

ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ಕೈವಾಕ್ ಅಳವಡಿಸುವದಾಗಿ ಹೇಳಿದ್ದು,ಈವರೆಗೂ ಕಾಮಗಾರಿ ಆರಂಭಿಸಿಲ್ಲ.ಹೆಜಮಾಡಿ ಗ್ರಾಮ ವ್ಯಾಪ್ತಿಯ ಕುಡಿಯುವ ನೀರಿನ ಪೈಪ್ ಒಡೆದು ಹಾಕಿದ್ದು ಸರಿಪಡಿಸಿಲ್ಲ.ಒಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಅದನ್ನು ಸರಿಪಡಿಸಬೇಕು ಎಂದು ಶೇಖರ್ ಹೆಜ್ಮಾಡಿ ಹೇಳಿದರು.ಮೂಲ್ಕಿಯಿಂದ ಹೆಜಮಾಡಿಗೆ ಟೆಂಪೋವೊಂದು 200 ರೂ.ಬಾಡಿಗೆಗೆ ಬಂದಿದ್ದು,ಅವರು 110 ರೂ.ಟೋಲ್ ನೀಡಿದ್ದಾರೆ.ಇಂತಹ ಸಂದರ್ಭಗಳಿಗೆ ಟೋಲ್ ವಿನಾಯಿತಿ ಅಗತ್ಯವಾಗಿದೆ ಎಂದು ಸುನಿಲ್ ಆಳ್ವ ವಾದಿಸಿದರು.

ಆರ್‍ಐ ರವಿಶಂಕರ್,ಸ್ಥಳೀಯರಾದ ಸುಧೀರ ಕರ್ಕೇರ,ಪಾಂಡುರಂಗ ಕರ್ಕೇರ,ಎಚ್.ರವಿ ಕುಂದರ್,ರವೀಂದ್ರ ಹೆಜ್ಮಾಡಿ,ಖಾದರ್ ಹೆಜ್ಮಾಡಿ,ಮೋಹನ್ ಶೆಟ್ಟಿ ಮೂಲ್ಕಿ,ಚಂದ್ರಶೇಖರ್ ಮೂಲ್ಕಿ,ನಾರಾಯಣ ನಾಯಕ್,ಗೋವರ್ಧನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.