ಹೆಜಮಾಡಿ ಅಕ್ರಮ ಟೋಲ್ ವಿರುದ್ದ ಫೆ.5 ಮೂಲ್ಕಿ ಬಂದ್ ಎಚ್ಚರಿಕೆ ಮೂಲ್ಕಿ ಅಭಿವೃದ್ಧಿ ನಾಗರಿಕರ ಸಮಿತಿ ಸಭೆಯಲ್ಲಿ ನಿರ್ಣಯ

ಮೂಲ್ಕ: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿ ಸ್ಥಾಪಿಸಿರುವ ಟೋಲ್‍ಗೇಟಿನಿಂದ ಕೇವಲ ಅರ್ಧ ಕಿಮೀ ದೂರದಲ್ಲಿರುವ ಮೂಲ್ಕಿ ನಾಗರಿಕರ ವಾಹನಗಳಿಗೆ ಅಕ್ರಮವಾಗಿ ಟೋಲ್ ತೆಗೆದುಕೊಳ್ಳುವ ವಿರುದ್ದ ಫೆ.5ರಂದು ಮೂಲ್ಕಿ ಹೋಬಳಿ ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮೂಲ್ಕಿ ಅಭಿವೃದ್ಧಿ ನಾಗರಿಕರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬುಧವಾರ ಸಂಜೆ ಬಪ್ಪನಾಡು ಶ್ರೀ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ನಡೆದ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಸಮಿತಿ ಅಧ್ಯಕ್ಷ ಹರೀಶ್ ಪುತ್ರನ್ ಮಾತನಾಡಿ ಹೆಜಮಾಡಿ ಅಕ್ರಮ ಟೋಲ್‍ನಿಂದ ಕೇವಲ ಅರ್ಧ ಕಿಮೀ ದೂರವಿರುವ ಮೂಲ್ಕಿ ಜನತೆಗೆ ಟೋಲ್ ವಿನಾಯಿತಿಯಲ್ಲಿ ಅನ್ಯಾಯವಾಗಿದೆ.ಈ ಬಗ್ಗೆ ಮೂಲ್ಕಿಯಲ್ಲಿ ಅನೇಕ ಬಾರಿ ಟೋಲ್ ವಿರೋಧವಾಗಿ ಸಭೆ ನಡೆದು ಮನವಿ ಸಲ್ಲಿಸಿದರೂ ಟೋಲ್ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ಫೆ.ಒಂದು(ಇಂದು)ರಂದು ಸಂಸದ ಹಾಗೂ ಉಭಯ ಜಿಲ್ಲೆಗಳ ಶಾಸಕರ ಮುಖಾಂತರ ಸಭೆ ನಡೆದು ಅಂತಿಮ ನಿರ್ದಾರ ಕೈಗೊಳ್ಳಲಾಗುವುದು. ಮಾತುಕತೆ ವಿಫಲವಾದಲ್ಲಿ ಫೆ.5ರಂದು ಹೆಜಮಾಡಿ ಟೋಲ್ ವಿರುರ್ದದ ಸಂಸದ ನಳಿನ್ ಕುಮಾರ್ ಕಟೀಲು,ಉಭಯ ಜಿಲ್ಲೆಯ ಶಾಸಕರಾದ ಉಮಾನಾಥ ಕೋಟ್ಯಾನ್,ಲಾಲಾಜಿ ಮೆಂಡನ್ ನೇತೃತ್ವದಲ್ಲಿ ಮೂಲ್ಕಿ ಹೋಬಳಿ ಬಂದ್ ಮಾಡಿ ಹೆಜಮಾಡಿ ಟೋಲ್ ಸಂಗ್ರಹ ಕೇಂದ್ರಕ್ಕೆ ಪಾದಯಾತ್ರೆ ನಡೆಸಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.

ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ ಮೂಲ್ಕಿ ಹೋಬಳಿ ಬಂದ್ ಮುಖಾಂತರ ಹೆಜಮಾಡಿ ಅಕ್ರಮ ಟೋಲ್ ವಿರುದ್ದ ರಾಜಕೀಯ ರಹಿತ ಹೋರಾಟ ನಡೆಸಲಾಗುವುದು.ರಾಷ್ಟ್ರೀಯ ಹೆದ್ದಾರಿಯ ಮೂಲ್ಕಿಯಲ್ಲಿ ಅರೆಬರೆ ಕಾಮಗಾರಿ ನಡೆಸಿ ಅನೇಕ ಅಪಘಾತಗಳಿಗೆ ಕಾರಣವಾಗಿರುವ ನವಯುಗ್ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಗೆ ಅನೇಕ ಅಮಾಯಕರು ಬಲಿಯಾಗಿದ್ದರೂ ಟೋಲ್ ಸಂಸ್ಥೆ ಅಕ್ರಮ ಟೋಲ್ ವಸೂಲಿ ಮಾಡುವುದರಲ್ಲಿ ನಿರತವಾಗಿದೆ.ಮೂಲ್ಕಿ ಜನತೆ ಹೋರಾಟ ನಡೆಸಿದರೆ ಮಾತ್ರ ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಾಧ್ಯ ಎಂದು ಹೇಳಿ ಫೆ.5ರ ಹೋರಾಟಕ್ಕೆ ಮೂಲ್ಕಿ ಜನತೆ ಬೆಂಬಲ ಅಗತ್ಯ ಎಂದು ಹೇಳಿದರು.

ಉದ್ಯಮಿ ಮುನೀರ್ ಕಾರ್ನಾಡು ಮಾತನಾಡಿ ಮೂಲ್ಕಿ ಜನತೆಗೆ ಪ್ರತಿಯೊಂದು ಸೌಕರ್ಯದಲ್ಲಿಯೂ ಅನ್ಯಾಯವಾಗಿದ್ದು ಪ್ರತಿಭಟನೆ ಮುಖಾಂತರವೇ ಬಿಸಿ ಮುಟ್ಟಿಸಬೇಕಾಗಿದೆ.ಫೆ.5ರಂದು ಬೃಹತ್ ಪ್ರತಿಭಟನೆ ಜಾಥಾದ ಮೂಲಕ ಅಕ್ರಮ ಟೋಲ್ ಸಂಗ್ರಹಕ್ಕೆ ಕಡಿವಾಣ ಹಾಕಲು ಮುಂದಾಗಬೇಕಾಗಿದೆ ಎಂದು ಹೇಳಿದರು.
ಫೆ.5ರ ಮೂಲ್ಕಿ ಬಂದ್‍ಗೆ ಪೂರ್ವಭಾವಿಯಾಗಿ ಕರಪತ್ರ ಮುದ್ರಣ, ಬಂಟಿಗ್ಸ್ ಅಳವಡಿಕೆ,ಭಿತ್ತಿ ಪತ್ರ ಮುಖಾಂತರ ನಾಗರಿಕರಿಗೆ ತಿಳಿಸುವ ಪ್ರಯತ್ನ ಮಡುವುದಾಗಿ ಸಮಿತಿಯಲ್ಲಿ ತೀರ್ಮಾನಿಸಲಾಯಿತು.

ಹೆಜಮಾಡಿ ಅಕ್ರಮ ಟೋಲ್ ಹಾಗೂ ಸುರತ್ಕಲ್ ಅಕ್ರಮ ಟೋಲ್‍ನಿಂದ ಮೂಲ್ಕಿ ವಲಯ ಕಾರು ಚಾಲಕ ಮಾಲಕರಿಗೆ ಆಗಿರುವ ಅನ್ಯಾಯವಾಗಿರುವ ಬಗ್ಗೆ ಕಾರು ಮಾಲಕಚಾಲಕ ಸಂಘದ ಮಧು ಆಚಾರ್ಯ ಆಸಮಾಧಾನ ವ್ಯಕ್ತಪಡಿಸಿ ಹೆಜಮಾಡಿ ಅಕ್ರಮ ಟೋಲ್ ಬಂದ್ ಮಾಡುವವರೆಗೂ ಮೂಲ್ಕಿ ಜನತೆ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಈ ಸಂಧರ್ಭ ಸಮಿತಿಯ ಸದಸ್ಯರಾದ ಮೂಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ,ರವೀಶ್ ಕಾಮತ್,ನೂತನ್ ಶೆಟ್ಟಿ,ವೆಂಕಟೇಶ ಹೆಬ್ಬಾರ್,ಶಶಿ ಅಮೀನ್,ದಯಾನಂದ ಮಟ್ಟು,ರಂಗನಾಥ ಶೆಟ್ಟಿ,ಅಬ್ದುಲ್ ರಜಾಕ್,ಉತ್ತಮ್ ಮೊೈಲೊಟ್ಟು,ವಿಶ್ವನಾಥ ಅತಿಕಾರಿಬೆಟ್ಟು,ಸುರೇಶ ಬಪ್ಪನಾಡು,ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.

ಇದೇ ಸಂದರ್ಭದಲ್ಲಿ ನಿಧನರಾದ ದಿ.ಜಾರ್ಜ್ ಫೆರ್ನಾಂಡೀಸ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.