ಹೆಜಮಾಡಿಯ ಸುಂದರ ಕಡಲ ಕಿನಾರೆಯನ್ನು ಉಳಿಸಿ ಬೆಳೆಸುವ ತುರ್ತು ಅಗತ್ಯವಿದೆ-ವಿಲ್ಫ್ರೆಡ್ ಡಿಸೋಜಾ

ಪಡುಬಿದ್ರಿ: ಶುಭ್ರ ಪರಿಸರ,ಸುಂದರ ಕಡಲ ಕಿನಾರೆಯ ಹೆಜಮಾಡಿಯ ಅಮವಾಸ್ಯೆಕರಿಯ ಬೀಚ್‍ನ್ನು ಉಳಿಸಿ ಬೆಳೆಸುವ ತುರ್ತು ಅಗತ್ಯವಿದೆ ಎಂದು ಉಡುಪಿ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜಾ ಹೇಳಿದರು.

ಹೆಜಮಾಡಿಯ ಅಮವಾಸ್ಯೆಕರಿಯ ಬಳಿ ಭಾನುವಾರ ಕೇಂದ್ರ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ,ಉಡುಪಿ ನೆಹರೂ ಯುವ ಕೇಂದ್ರ,ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ್ ಯುವ ಗ್ರಾಮೀಣ ಕ್ರೀಡಾಕೂಟ ಮತ್ತು ಕರಾವಳಿ ಯುವಕ-ಯುವತಿ ವೃಂದದ 34ನೇ ವಾರ್ಷಿಕೋತ್ಸವ ಸಮಾರಂಭದ ಧ್ವಜಾರೋಹಣಗೈದು ಅವರು ಮಾತನಾಡಿದರು.

ಹೆಜಮಾಡಿ ಗ್ರಾಪಂ ಮೂಲಕ ಸರಕಾರಕ್ಕೇ ಈ ಕೂಡಲೇ ಪ್ರಸ್ತಾವನೆ ಕಳಿಸಿಕೊಡಬೇಕು.ಇಲ್ಲಿನ ಬೀಚ್ ಅಭಿವೃದ್ಧಿಗೆ ತಾನೂ ಇಲಾಖೆಯೊಂದಿಗೆ ಸಮಾಲೋಚನೆ ನಡೆಸುತ್ತೇನೆಂದು ಅವರು ಭರವಸೆ ನೀಡಿದರು.

ಹೆಜಮಾಡಿ ಗ್ರಾಪಂ ಪಿಡಿಒ ಮಮತಾ ವೈ.ಶೆಟ್ಟಿ ಮಾತನಾಡಿ,2 ವರ್ಷಗಳ ಹಿಂದೆಯೇ ಬೀಚ್ ಅಭಿವೃದ್ಧಿಗೆ ಪ್ರಸ್ತಾವನೆ ಕಳಿಸಲಾಗಿದ್ದು,ಹೆಜಮಾಡಿ ಬಂದರು ಯೋಜನೆ ಜಾರಿಯ ಬಳಿಕ ಬೀಚ್ ಅಭಿವೃದ್ಧಿ ನಡೆಯುವ ಸಾಧ್ಯತೆ ಇದೆ ಎಂದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಹೆಜಮಾಡಿಯ ಹಿರಿಯ ಮೀನುಗಾರ ಮುಖಂಡ ನಾರಾಯಣ ಕೆ.ಮೆಂಡನ್ ಮಟ್ಟು ಮಾತನಾಡಿ,ಕರಾವಳಿ ಯುವಕ ವೃಂದವು ಈಗಾಗಲೇ ಗ್ರಾಮಕ್ಕೆ ಕೀರ್ತಿ ತರುವಂತಹ ಕಾರ್ಯ ನಡೆಸಿದ್ದು,ಮುಂದೆಯೂ ಗ್ರಾಮಾಭಿವೃದ್ಧಿಗೆ ಶ್ರಮಿಸುವಂತಾಗಬೇಕೆಂದರು.
ಗ್ರಾಪಂ ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿ,ಹಳಬರೊಂದಿಗೆ ಯುವ ಪ್ರತಿಭೆಗಳನ್ನು ಸೇರಿಸಿಕೊಂಡು ವೃಂದವು ನೂರಾರು ಜನಪರ ಕಾರ್ಯಗಳನ್ನು ನಿರ್ವಹಿಸಿದೆ.ಗ್ರಾಮಸ್ಥರೆಲ್ಲರೂ ಅವರನ್ನು ಪ್ರೋತ್ಸಾಹಿಸಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಗಂಗಾಧರ ಕರ್ಕೇರ ಹೊಸಬೆಟ್ಟು ಮಾತನಾಡಿ,ಸಾಧನೆಯತ್ತ ಮಕ್ಕಳ ಚಿತ್ತವಿರಬೇಕು.ಮೊಬೈಲ್ ಮೇನಿಯಾದಿಂದ ಹೊರಬರಲು ಪೋಷಕರು ಪರಿಣಾಮಕಾರಿಯಾಗಿ ವರ್ತಿಸಬೇಕು ಎಂದರು.

ಡಯಾನಾ ಫೆರ್ನಾಂಡೀಸ್,ತಾಪಂ ಸದಸ್ಯೆ ರೇಣುಕಾ ಪುತ್ರನ್,ಮಟ್ಟು ಮೊಗವೀರ ಸಭಾದ ಮಾಜಿ ಅಧ್ಯಕ್ಷ ಸದಾನಂದ ವಿ.ಸುವರ್ಣ,ಮತ್ಯೋದ್ಯಮಿ ವಿನೋದ್ ಕೋಟ್ಯಾನ್ ಪಲಿಮಾರು,ಗ್ರಾಪಂ ಸದಸ್ಯರಾದ ವಾಸು ಬಿ.ಕೋಟ್ಯಾನ್,ಶಿವರಾಮ ಶೆಟ್ಟಿ ಮತ್ತು ಶೈಲೇಶ್ ಕುಂದರ್,ಮಾಜಿ ಸದಸ್ಯರಾದ ಮಾಧವ ಸನಿಲ್ ಮತ್ತು ಚಂದ್ರಕಾಂತ್ ಶ್ರೀಯಾನ್,ಮಸ್ಕತ್ ಉದ್ಯಮಿ ಯಾದವ ಕೋಟ್ಯಾನ್ ಆಚೆಮಟ್ಟು,ಉದ್ಯಮಿ ಅಮಿತ್ ಕುಮಾರ್,ವೃಂದದ ಅಧ್ಯಕ್ಷ ಅಶೋಕ್ ವಿ.ಕೆ.,ಗೌರವಾಧ್ಯಕ್ಷ ದಿನೇಶ್ ಸುವರ್ಣ,ಯುವತಿ ವೃಂದದ ಅಧ್ಯಕ್ಷೆ ಪವಿತ್ರಾ ಗಿರೀಶ್,ಕಾರ್ಯದರ್ಶಿಗಳಾದ ಶರಣ್‍ಕುಮಾರ್ ಮಟ್ಟು ಮತ್ತು ರೂಪಾ ಹೇಮಾನಂದ್ ವೇದಿಕೆಯಲ್ಲಿದ್ದರು.

ಶ್ರೇಯಸ್ ಡಿ.ಸಾಲ್ಯಾನ್ ಸ್ವಾಗತಿಸಿದರು.ಜಿತೇಂದ್ರ ವಿ.ಭಟ್ ಕಾರ್ಯಕ್ರಮ ನಿರ್ವಹಿಸಿದರು.ಎಸ್.ದಿವಾಕರ್ ಹೆಜ್ಮಾಡಿ ವಂದಿಸಿದರು.
ಬಳಿಕ ಪುರುಷರ ಬೀಚ್ ಕಬಡ್ಡಿ,ಗುಂಡೆಸೆತ,ಬೀಚ್ ಮ್ಯಾರಥಾನ್,200 ಮೀಟರ್ ಓಟ ಇತ್ಯಾದಿ ಸ್ಪರ್ಧೆಗಳು ನಡೆದವು.