ಹೆಜಮಾಡಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಮತ್ತು ಎಸ್‍ಎಲ್‍ಆರ್‍ಎಮ್ ಘಟಕ ಉದ್ಘಾಟನೆ

ಶೌಚಾಲಯ ನಿರ್ಮಾಣ ಸಂದರ್ಭ ಜೋಡಿ ಗುಂಡಿ ನಿರ್ಮಾಣದ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್

ಪಡುಬಿದ್ರಿ: ಇಂದು ಜಾಗತಿಕವಾಗಿ ಶೌಚಾಲಯ ನಿರ್ವಹಣೆ ಅತೀ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು,ಉಡುಪಿ ಜಿಲ್ಲೆಯಾದ್ಯಂತ ಶೌಚಾಯಲಕ್ಕೆ ಜೋಡಿ ಗುಂಡಿ(ಟ್ವಿನ್ ಪಿಟ್) ನಿರ್ಮಿಸುವ ಮೂಲಕ ಸಮಸ್ಯೆಯ ಪರಿಹಾರಕ್ಕೆ ಕೈಜೋಡಿಸಬೇಕು.ಆರಂಭಿಕವಾಗಿ ಹೆಜಮಾಡಿಯಲ್ಲಿ ಈ ಜೋಡಿ ಗುಂಡಿ ಪ್ರಕ್ರಿಯೆ ಆರಂಭಿಸಲಾಗಿದ್ದು,ಎಲ್ಲಾ ಮನೆಗಳಲ್ಲೂ ಜೋಡಿ ಗುಂಡಿ ನಿರ್ಮಾಣ ಮಾಡಬೇಕೆಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.

ಹೆಜಮಾಡಿ ಗ್ರಾಪಂ ಸಭಾಂಗಣದಲ್ಲಿ ಸೋಮವಾರ ವಿಶ್ವ ಶೌಚಾಲಯ ದಿನಾಚರಣೆ ಮತ್ತು ಎಸ್‍ಎಲ್‍ಆರ್‍ಎಮ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಬಟ್ಟೆ ಬ್ಯಾಗ್ ಬಿಡುಗಡೆಗೊಳಿಸಿದ ಬಳಿಕ ಹೆಜಮಾಡಿಯ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿಶ್ವ ಶೌಚಾಲಯ ದಿನದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಶೌಚಾಲಯ ಬಳಕೆಯ ಬಳಿಕ ಕೈತೊಳೆಯುವ ವಿಧಾನ ಅತೀ ಮುಖ್ಯವಾದುದು.ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕೈಯಿಂದಲೇ ದೇಹಕ್ಕೆ ಪ್ರವೇಶಿಸುತ್ತದೆ.ಈ ಬಗ್ಗೆ ಮಕ್ಕಳೇ ಜಾಗ್ರತೆ ವಹಿಸಿ ಪೋಷಕರಿಗೆ ತಿಳಿಹೇಳಬೇಕು ಎಂದವರು ಹೇಳಿದರು.

ನೂತನ ತ್ಯಾಜ್ಯ ವಿಲೇವಾರಿ: ಹೆಜಮಾಡಿ ಸಹಿತ ಜಿಲ್ಲೆಯ 43 ಗ್ರಾಪಂಗಳಲ್ಲಿ ನೂತನ ಎಸ್‍ಎಲ್‍ಆರ್‍ಎಮ್((ಘನ ದ್ರವ ಸಂಪನ್ಮೂಲ ಘಟಕ)ಘಟಕ ಸ್ಥಾಪಿಸಲಾಗಿದ್ದು,ಇಲ್ಲಿ ಒಣ ಕಸಗಳನ್ನು ಸಂಗ್ರಹಿಸಿ ಸಂಸ್ಕರಿಸಲಾಗುವುದು.ಹಸಿ ಕಸಗಳನ್ನು ಸ್ವಯಂ ಸಂಸ್ಕರಣೆಗೆ ಮುಂದಡಿಯಿಡಬೇಕು.ಸಣ್ಣ ಗುಂಡಿ ನಿರ್ಮಿಸಿ ಕಂಪೋಸ್ ಮಾಡಬೇಕು.ಒಣ ಕಸಗಳನ್ನು ಮಾತ್ರ ಗ್ರಾಪಂ ವಿಲೇವಾರಿ ಮಾಡುತ್ತದೆ.ಈ ಬಗ್ಗೆ ಮಕ್ಕಳು ಹಿರಿಯರನ್ನು ಉತ್ತೇಜಿಸಬೇಕು ಎಂದು ಅವರು ಹೇಳಿದರು.

ಪ್ಲಾಸ್ಟಿಕ್ ನಿಷೇಧ ಅನಿವಾರ್ಯ: ಪ್ಲಾಸ್ಟಿಕ್ ಸಮಸ್ಯೆಯು ಪರಿಹಾರವಿಲ್ಲದ ಸಮಸ್ಯೆಯಾಗಿದೆ.ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ.ಬಟ್ಟೆ ಬ್ಯಾಗ್‍ಗಳ ಬಳಕೆ ಅಧಿಕವಾಗಬೇಕಿದೆ.ಮನೆಯಿಂದ ಮಾರುಕಟ್ಟೆಗೆ ತೆರಳುವಾಗ ಮಕ್ಕಳೇ ಹಠ ಹಿಡಿದು ಬಟ್ಟೆ ಬ್ಯಾಗ್ ಕೊಂಡೊಯ್ಯಲು ಒತ್ತಾಯಿಸಬೇಕು.ಮಕ್ಕಳ ಹೋರಾಟದಿಂದ ಇದು ಖಂಡಿತ ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

7 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಎಸ್‍ಎಲ್‍ಆರ್‍ಎಮ್ ಘಟಕವನ್ನು ಉದ್ಘಾಟಿಸಿದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ,ಸ್ವಚ್ಛತೆಯಲ್ಲಿ ಉಡುಪಿ ಜಿಲ್ಲೆ ರಾಷ್ಟ್ರಕ್ಕೇ ಮಾದರಿಯಾಗಿದೆ.ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಾರ್ಯದಕ್ಷತೆಯೇ ಕಾರಣ.ಪ್ಲಾಸ್ಟಿಕ್ ನಿಷೇಧದಲ್ಲಿ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿದೆ.ಮುಂದೆ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಗುರುತಿಸಿಕೊಳ್ಳಲು ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಸನ್ಮಾನ: ಹೆಜಮಾಡಿ ಸಹಿತ ಪಡುಬಿದ್ರಿ,ತೆಂಕ ಮತ್ತು ಪಲಿಮಾರು ಗ್ರಾಪಂಗಳ ತ್ಯಾಜ್ಯ ವಿಲೇವಾರಿಗಾಗಿ ಉಚಿತವಾಗಿ ತ್ಯಾಜ್ಯ ಸಂಗ್ರಹ ವಾಹನಗಳನ್ನು ನೀಡಿದ ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್‍ಕುಮಾರ್‍ರವರನ್ನು ಹೆಜಮಾಡಿ ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಅವರು,ಜಿಲ್ಲೆಯ ಎಲ್ಲಾ ಸಹಕಾರಿ ಸಂಸ್ಥೆಗಳಿಗೆ ಧನ ಸಂಗ್ರಹಕ್ಕೆ ಅವಕಾಶ ನೀಡಿದಲ್ಲಿ ಗ್ರಾಮಾಭಿವೃದ್ಧಿಗೆ ಸಹಕಾರ ನೀಡಲು ಅವಕಾಶ ದೊರೆಯುತ್ತದೆ.ಅದೇ ರೀತಿ ಗ್ರಾಪಂ ಖಾತೆಗಳನ್ನು ಸಹಕಾರಿ ಸಂಸ್ಥೆಗಳಲ್ಲೂ ಆರಂಭಿಸುವಂತೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದರು.
ಪ್ರತಿ ಮನೆಗೆ ತ್ಯಾಜ್ಯ ಸಂಗ್ರಹ ಬಕೆಟ್: ತ್ಯಾಜ್ಯಗಳನ್ನು ವಿಂಗಡಿಸಿ ಸಂಗ್ರಹಿಸಲು ಅನುಕೂಲವಾಗುವಂತೆ ಗ್ರಾಪಂ ವತಿಯಿಂದ ಪ್ರತಿ ಮನೆಗೆ ಎರಡು ಬಕೆಟ್‍ಗಳನ್ನು ನೀಡಲು ನಿರ್ಧರಿಸಿದ್ದು,ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಸಾಂಕೇತಿಕ ಬಕೆಟ್ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು,ಜೋಡಿ ಗುಂಡಿ ಪದ್ಧತಿ ಅನಿವಾರ್ಯವಾಗಿದ್ದು,ಒಂದು ಗುಂಡಿ ತುಂಬಿದ ಬಳಿಕ ಎರಡನೇ ಗುಂಡಿ ಉಪಯೋಗವಾಗುತ್ತದೆ.ಎರಡನೇ ಗುಂಡಿ ತುಂಬುವುದರೊಳಗೆ ಮೊದಲ ಗುಂಡಿಯ ತ್ಯಾಜ್ಯ ಡ್ರೈಯಾಗಿ ಗೊಬ್ಬರವಾಗಿ ಬಳಸಬಹುದಾಗಿದೆ.ಪ್ರತಿಯೊಬ್ಬರೂ ಜೋಡಿ ಗುಂಡಿ ಪದ್ಧತಿಗೆ ಬದಲಾಗಬೇಕು ಎಂದರು.
ಈ ಸಂದರ್ಭ ಬೀಚ್ ಬದಿ ದಿನನಿತ್ಯ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ನೀಲಾಧರ,ಸ್ವಚ್ಛತಾ ಸ್ವಯಂಸೇವಕರಾದ ಪದ್ಮಾ ಟೀಚರ್ ಮತ್ತು ಅನುರಾಧಾ,ಪೌರ ಕಾರ್ಮಿಕರಾದ ಕುಮಾರ್ ಮತ್ತು ರವಿ,ಹಾಗೂ ಹೆಜಮಾಡಿ ಗ್ರಾಪಂಗೆ ಎರಡನೇ ತ್ಯಾಜ್ಯ ಸಂಗ್ರಹ ವಾಹನ ನೀಡಲಿರುವ ಸುಜ್ಲಾನ್ ಘಟಕ ಪರವಾಗಿ ಅಧಿಕಾರಿ ಪ್ರಸಾದ್ ಕುಮಾರ್‍ರವರನ್ನು ಗೌರವಿಸಲಾಯಿತು.

ಕಸ ಬಿಸಾಡಿದರೆ 5 ಸಾವಿರ ರೂ.ದಂಡ: ಇನ್ನು ಮುಂದೆ ಹೆಜಮಾಡಿ ಗ್ರಾಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳನ್ನು ಬೇಕೆಂದರಲ್ಲಿ ಬಿಸಾಡಿದಲ್ಲಿ ಅಂಥವರನ್ನು ಪತ್ತೆಹಚ್ಚಿ ರೂ.5ಸಾವಿರ ದಂಡ ವಸೂಲು ಮಾಡಲಾಗುವುದು ಎಂದು ಹೆಜಮಾಡಿ ಗ್ರಾಪಂ ಪಿಡಿಒ ಮಮತಾ ಶೆಟ್ಟಿ ಸಭೆಯಲ್ಲಿ ಪ್ರಕಟಿಸಿದರು.ಕಸ ಬಿಸಾಡುವವರ ಬಗ್ಗೆ ಸೂಕ್ತ ಮಾಹಿತಿ ನೀಡಿದವರಿಗೆ ರೂ.ಒಂದು ಸಾವಿರ ಬಹುಮಾನ ನೀಡಲಾಗುವುದು ಎಂದವರು ಹೇಳಿದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ,ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ಜಿಪಂ ಸದಸ್ಯೆ ಶಿಲ್ಪಾ ಜಿ.ಸುವರ್ಣ,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ತಾಪಂ ಸದಸ್ಯೆ ರೇಣುಕಾ ಪುತ್ರನ್,ಜಿಫಂ ಸಿಪಿಒ ಶ್ರೀನಿವಾಸ ರಾವ್,ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‍ರಾಜ್,ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ,ಪಿಡಿಒಗಳಾದ ಪಂಚಾಕ್ಷರಿ ಕೆರಿಮಠ ಮತ್ತು ಸತೀಶ್,ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮರಾವ್ ಮುಖ್ಯ ಅತಿಥಿಗಳಾಗಿದ್ದರು.

ಹೆಜಮಾಡಿ ಗ್ರಾಪಂ ಪಿಡಿಒ ಮಮತಾ ವೈ.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಸದಸ್ಯ ವಾಮನ ಕೋಟ್ಯಾನ್ ನಡಿಕುದ್ರು ವಂದಿಸಿದರು.
ಬಳಿಕ ಹೆಜಮಾಡಿಯ ಎಲ್ಲಾ 6 ಶಾಲೆಗಳ ಮಕ್ಕಳು ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಹೆಜಮಾಡಿಯ ಮುಖ್ಯ ಬೀದಿಗಳಲ್ಲಿ ವಿವಿಧ ಘೋಷಣೆ ಕೂಗುತ್ತಾ ಜಾಥಾ ನಡೆಸಿದರು.

ಜನಪ್ರತಿನಿಧಿಗಳ ಗೈರು: ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಎಲ್ಲಾ ಶಾಸಕರು,ಇಬ್ಬರು ಸಂಸದರು,ರಾಜ್ಯ ಸಭಾ ಸದಸ್ಯರು,ವಿಧಾನಪರಿಷತ್ ಸದಸ್ಯರ ಹೆಸರು ಹಾಕಲಾಗಿತ್ತು.ಆದರೆ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಭಾಗವಹಿಸಲಿಲ್ಲ.ಸರಕಾರಿ ಕಾರ್ಯಕ್ರಮಗಳಲ್ಲಿ ಯಾವುದೇ ಆಮಂತ್ರಣ ಪತ್ರಿಕೆಗಳಲ್ಲಿ ಹೆಸರು ಹಾಕದಿದ್ದರೆ ದೊಡ್ಡ ರಂಪಾಟ ಮಾಡುವ ಜನಪ್ರತಿನಿಧಿಗಳು ಹೆಸರು ಹಾಕಿದ ಸಮಾರಂಭಕ್ಕೆ ಗೈರು ಹಾಜರಾಗುವ ಬಗ್ಗೆ ಗ್ರಾಮಸ್ಥರನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.