ಹಿಂಬದಿಯಿಂದ ಟ್ಯಾಂಕರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರೆ ದಾರುಣ ಸಾವು

ಮೂಲ್ಕಿ: ಅಪಘಾತ ತಿರುವು ಎಂದೇ ಕುಖ್ಯಾತಿ ಪಡೆದ ಮೂಲ್ಕಿ ಬಸ್ಸು ನಿಲ್ದಾಣ ಬಳಿಯ ಹೆದ್ದಾರಿ ತಿರುವಿನಲ್ಲಿ ಸ್ಕೂಟರ್ ಒಂದಕ್ಕೆ ಹಿಂಬದಿಯಿಂದ ಟ್ಯಾಂಕರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರೆ ಧಾರುಣ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಜೇಸಿಐ ಪಡುಬಿದ್ರಿಯ ಪೂರ್ವಾಧ್ಯಕ್ಷ ಹಾಗೂ ನಿವೃತ್ತ ಉಪನ್ಯಾಸಕ ವೈ.ಬಿ.ಜಯಚಂದ್ರ ಅವರ ಪತ್ನಿ, ಮೂಲ್ಕಿ ದೂರವಾಣಿ ಕೇಂದ್ರದ ಸಿಬ್ಬಂದಿ ಉಷಾ ಜಯಚಂದ್ರ ಬಲ್ಲಾಳ್(56) ತಲೆ,ಹೊಟ್ಟೆ,ಕಾಲುಗಳಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟವರು.

Scooter rider dies of road accident in Mulki

ದೂರವಾಣಿ ಕಛೇರಿಯಿಂದ ಮಧ್ಯಾಹ್ನ ಬ್ಯಾಂಕ್ ಕೆಲಸಕ್ಕೆಂದು ತಮ್ಮ ಸ್ಕೂಟರ್ ಮೂಲಕ ಆಗಮಿಸಿದ್ದ ಉಷಾರವರು ಮೂಲ್ಕಿ ಬಸ್ಸು ನಿಲ್ದಾಣ ಬಳಿಯ ತಿರುವಿನಲ್ಲಿ ಬಲಭಾಗದ ರಸ್ತೆಗೆ ತೆರಳಲು ವಾಹನ ನಿಧಾನಗೊಳಿಸಿದ ಸಂದರ್ಭ ಹಿಂಬದಿಯಿಂದ ವೇಗವಾಗಿ ಬಂದ ಟ್ಯಾಂಕರ್ ಸ್ಕೂಟರ್‍ಗೆ ಢಿಕ್ಕಿ ಹೊಡೆದಿತ್ತು.ಈ ಸಂದರ್ಭ ಟ್ಯಾಂಕರ್ ಅಡಿಗೆ ಬಿದ್ದ ಉಷಾರವರು ತೀವ್ರವಾಗಿ ಗಾಯಗೊಂಡಿದ್ದರು.ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸದಿದರೂ ಫಲಕಾರಿಯಾಗಲಿಲ್ಲ.

ಕುಬೆವೂರು ನಿವಾಸಿಯಾಗಿರುವ ಉಷಾರವರಿಗೆ ಪತಿ,ಎರಡು ವಿವಾಹಿತ ಪುತ್ರಿ ಇದ್ದಾರೆ.ನಿವೃತ್ತಿ ಬಳಿಕ ಉಷಾರ ಪತಿ ಬೆಂಗಳೂರಿನಲ್ಲಿ ಅತಿಥಿ ಉಪಾನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು,ಅಂತ್ಯಕ್ರಿಯೆಗಾಗಿ ಅವರನ್ನು ಕಾಯಲಾಗಿದೆ.
ಸುರತ್ಕಲ್ ಸಂಚಾರಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಪಾಯಕಾರಿ ತಿರುವು:ಹೆದ್ದಾರಿ ಚತುಷ್ಪಥ ಕಾಮಗಾರಿ ಸಂದರ್ಭ ಸ್ಥಳೀಯ ಪ್ರಭಾವಿಗಳ ಒತ್ತಡಕ್ಕೆ ಮಣಿದು ಇಲ್ಲಿ ಹೆದ್ದಾರಿ ವಿಭಾಜಕ ನಿರ್ಮಿಸಲಾಗಿದೆ.ಬೇರೆಡೆ ಹೆದ್ದಾರಿ ವಿಭಾಜಕಗಳಿಗಿಂತ ಇಲ್ಲಿನ ವಿಭಾಜಕ ಕಡಿಮೆ ಅಗಲ ಇದ್ದು ವಾಹನಗಳು ತಿರುವು ತೆಗೆದುಕೊಳ್ಳುವಾಗ ನಿತ್ಯ ಸಮಸ್ಯೆಗಳು ಸಂಭವಿಸುತ್ತಿದೆ.ಅಲ್ಲದೆ ದಿನನಿತ್ಯ ಅಪಘಾತಗಳು ನಡೆಯುತ್ತಲೇ ಇದೆ.ಹಲವು ಬಾರಿ ಹೆದ್ದಾರಿ ಇಲಾಖೆ ಮತ್ತು ಕಾಮಗಾರಿ ನಿರ್ವಹಿಸುವ ನವಯುಗ್ ಕಂಪನಿಗೆ ಮನವಿ ಮಾಡಿ ವಿಭಾಜಕವನ್ನು ತೆರವುಗೊಳಿಸಿ ಆರ್‍ಆರ್ ಟವರ್ ಬಳಿಗೆ ಸ್ಥಳಾಂತರಿಸುವಂತೆ ಹೇಳಿದ್ದರೂ ಈವರೆಗೂ ತೆರವುಗೊಳಿಸಿಲ್ಲ.ಪಾದಚಾರಿಗಳಿಗಂತೂ ಇಲ್ಲಿ ರಸ್ತೆ ದಾಟುವುದೇ ದುಸ್ಸಾಹಸವೆನಿಸಿದೆ.ನಾಲ್ಕು ರಸ್ತೆ ಸೇರುವ ಜಾಗವಾದ್ದರಿಂದ ಈ ವಿಭಾಜಕದಲ್ಲಿ ನಿರಂತರ ಸಾವಿರಾರು ವಾಹನಗಳು ಸಂಚರಿಸುತ್ತದೆ.ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ವಿಭಾಜಕವನ್ನು ಮುಚ್ಚಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.