ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ವಿಸ್ತರಣೆಗೆ ಸರಕಾರಕ್ಕೆ ಮನವಿ-ಶಾಸಕ ಮೆಂಡನ್

ಪಡುಬಿದ್ರಿ: ಕಾಪು, ಹಿರಿಯಡ್ಕ ಹಾಗೂ ಪಡುಬಿದ್ರಿಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ವಿಸ್ತರಣೆಗಾಗಿ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಕರ್ನಾಟಕ ಪಬ್ಲಿಕ್ ಶಾಲೆಯಾಗಿ ರೂಪಾಂತರಗೊಂಡ ಪಡುಬಿದ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಹಾಗೂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಪು ಕ್ಷೇತ್ರದಲ್ಲಿ ಹನ್ನೆರಡು ವಿದ್ಯಾರ್ಥಿ ನಿಲಯಗಳಿದ್ದು, ಹೊರ ಜಿಲ್ಲೆಗಳ 1,150 ವಿದ್ಯಾರ್ಥಿಗಳು ಈ ನಿಲಯಗಳಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮಲ್ಲಿನ ಗುಣಮಟ್ಟದ ಶಿಕ್ಷಣದಿಂದಾಗಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿನ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಮುಂದೆ ಬರುತ್ತಿದ್ದಾರೆ. ಆದರೆ ವಿದ್ಯಾರ್ಥಿ ನಿಲಯಗಳ ಕೊರತೆಯಿಂದ ತೊಂದರೆಯಾಗಿದೆ ಎಂದರು.

ಕರ್ನಾಟಕ ಪಬ್ಲಿಕ್ ಶಾಲೆಯ ನಾಮಫಲಕ ಅನಾವರಣಗೊಳಿಸಿದ ಅವರು,ಉದ್ಯೋಗ ಖಾತರಿ ಯೋಜನೆಯಡಿ ಶಾಲೆಯ ಆವರಣಗೋಡೆ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಸಚಿವರು ಸೂಚನೆ ನೀಡಿದ್ದು, ಒಂದು ಪಾಶ್ರ್ವದಲ್ಲಿ ಆವರಣಗೋಡೆ ನಿರ್ಮಾಣ ಮಾಡಲಾಗುವುದು. ಸ್ಥಳೀಯರು ಇದಕ್ಕೆ ಸಹಕಾರ ನೀಡಬೇಕು. ಶಾಲಾ ಮೈದಾನದಲ್ಲಿ ನಿರಂತರವಾಗಿ ಕ್ರಿಕೆಟ್ ಪಂದ್ಯಾಕೂಟಗಳು ನಡೆಯುತ್ತಿರುವುದರಿಂದ ಶಾಲಾ ಸಮಯದಲ್ಲಿ ತೊಂದರೆಯಾಗುತ್ತಿದೆ. ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ಕಡಿವಾಣ ಹಾಕಬೇಕು ಎಂದರು.

ಪಬ್ಲಿಕ್ ಶಾಲೆಯಾಗಿರುವ ಪಡುಬಿದ್ರಿಯ ಈ ಶಾಲೆಗೆ ಪ್ರಯೋಗಾಲಯ, ಕಟ್ಟಡ ಸಹಿತ ಮೂಲ ಸೌಕರ್ಯ ಕಲ್ಪಿಸಲು 1.70 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಂಡಿದೆ. ಇಲ್ಲಿನ ವಿದ್ಯಾರ್ಥಿಗಳ ಕೊರತೆ ನೀಗಿಸಲು ಕ್ರಮಕೈಗೊಳ್ಳಲಾಗುವುದು. ಶಾಲೆಯಲ್ಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವ ಭರವಸೆಯನ್ನು ಶಿಕ್ಷಕರು ನೀಡಿದ್ದು, ವಿದ್ಯಾರ್ಥಿಗಳು ಕಠಿಣ ಅಭ್ಯಾಸ ನಡೆಸಬೇಕು. ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಪಬ್ಲಿಕ್ ಶಾಲೆಯ ನಾಮಫಲಕದ ಅನಾವರಣ ಹಾಗೂ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಕೊಡಮಾಡಿದ ಸೈಕಲ್‍ಗಳನ್ನು ಶಾಸಕರು ಹಸ್ತಾಂತರಿಸಿದರು. ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಾರ್ಷಿಕೋತ್ಸವದ ಅಂಗವಾಗಿ ನಡೆದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ರವೀಂದ್ರನಾಥ್ ಜಿ ಹೆಗ್ಡೆ, ತಾಪಂ ಮಾಜಿ ಸದಸ್ಯ ನವೀನಚಂದ್ರ ಜೆ ಶೆಟ್ಟಿ, ಉದ್ಯಮಿಗಳಾದ ಸಂತೋಷ್‍ಕುಮಾರ್ ಶೆಟ್ಟಿ ಪಲ್ಲವಿ,ಪಿ.ಕೆ.ಸದಾನಂದ ಪೂಜಾರಿ, ಸಮಾಜ ಸೇವಕ ಶಬ್ಬೀರ್ ಹುಸೇನ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ವಿಷ್ಣುಮೂರ್ತಿ ಆಚಾರ್ಯ, ದಯಾನಂದ ಶೆಟ್ಟಿ, ಅಶೋಕ್ ಪೂಜಾರಿ, ಪ್ರೌಢಶಾಲಾ ಎಸ್‍ಡಿಎಂಸಿ ಸದಸ್ಯ ಲೋಕೇಶ್ ಕಂಚಿನಡ್ಕ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸರಿತಾ ವೇಗಸ್ ವರದಿ ವಾಚಿಸಿದರು. ಕಾಲೇಜು ಪ್ರಭಾರ ಪ್ರಾಂಶುಪಾಲೆ ಯಶೋದಾ ಕೆ. ಸ್ವಾಗತಿಸಿದರು.