ಹಿಂದುತ್ವದ ಉಳಿವಿಗಾಗಿ ಶ್ರಮಿಸುವ ಸರಕಾರವನ್ನು ಬೆಂಬಲಿಸಿ: ಉತ್ತರಾದಿ ಶ್ರೀ ಸತ್ಯಾತ್ಮ ತೀರ್ಥರು

ಪಡುಬಿದ್ರಿ: ಹಿಂದೂ ಧರ್ಮದ,ಧಾರ್ಮಿಕ ಆಚರಣೆಗಳ ರಕ್ಷಣೆ ಅತ್ಯವಶ್ಯಕ.ಹಿಂದೂ ರಾಷ್ಟ್ರ,ಹಿಂದೂ ಧರ್ಮಗಳ ಉಳಿವಿಗಾಗಿ ಕೇಂದ್ರದಲ್ಲಿ ಹಿಂದೂಸ್ತಾನದ ಸಮಗ್ರತೆಯನ್ನು ಉಳಿಸಿ,ಬೆಳೆಸಬಲ್ಲ ಹಿಂದೂ ಪರ ಸರಕಾರವನ್ನ ಮುಂದಿನ ಮಹಾಚುನಾವಣೆಯಲ್ಲಿ ಬೆಂಬಲಿಸಬೇಕು.ಹಿಂದುತ್ವದ ಬೇರು ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಂತಹ ಧಾರ್ಮಿಕ ಕ್ಷೇತ್ರಗಳಿಂದಲಷ್ಟೇ ಉಳಿದಿದೆ ಎಂದು ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.

ಅವರು ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ನಡೆಯುತ್ತಿರುವ ದ್ವೈ ವಾರ್ಷಿಕ ನಡಾವಳಿ ಢಕ್ಕೆಬಲಿಯ ಸಂದರ್ಭ ಕ್ಷೇತ್ರ ಸಂದರ್ಶನಕ್ಕಾಗಿ ಮಂಗಳವಾರ ಆಗಮಿಸಿದ ವೇಳೆ ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣರ ವತಿಯಿಂದ ನೀಡಲಾದ ಸ್ವಾಗತ ಹಾಗೂ ಪಾದಪೂಜೆಯ ಬಳಿಕ ಆಶೀರ್ವಚಿಸಿದರು.

ಶ್ರೀಪಾದರು ಶ್ರೀ ಖಡ್ಗೇಶ್ವರೀ ಜ್ಞಾನಮಂದಿರಕ್ಕೆ ಆಗಮಿಸಿದ ಸಂದರ್ಭ ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಗುರಿಕಾರ ಕೊರ್ನಾಯ ಶ್ರೀಪತಿ ರಾವ್ ಪಾದಪ್ರಕ್ಷಾಳನೆ ಪೂರ್ವಕವಾಗಿ ಸ್ವಾಗತಿಸಿ ಸಮಾಜದ ವತಿಯಿಂದ ಪಾದಪೂಜೆಯನ್ನು ನೆರವೇರಿಸಿದರು.

ಶ್ರೀ ಪಾದರು ಬಳಿಕ ಶ್ರೀ ಬ್ರಹ್ಮಸ್ಥಾನಕ್ಕೆ ತೆರಳಿ ರಾತ್ರಿಯ ವೇಳೆಯೂ ಸೊಗಸಾದ ಹೂವಿನ ಅಲಂಕಾರಗಳೊಂದಿಗೆ ಶೋಭಿಸುತ್ತಿದ್ದ ಶ್ರೀ ವನದುರ್ಗಾ ಸೌಂದರ್ಯವನ್ನು ವೀಕ್ಷಿಸಿ,ಶ್ರೀ ದೇವರ ದರ್ಶನವನ್ನು ಗೈದರು. ವನದುರ್ಗಾ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಪ್ರಥಮ ಬಾರಿ ಸನ್ನಿಧಾನಕ್ಕೆ ಭೇೀಟಿ ನೀಡಿರುವ ಶ್ರೀ ಸತ್ಯಾತ್ಮ ತೀರ್ಥರಿಗೆ ಇಲ್ಲಿನ ವಿಶೇಷತೆಗಳ ಬಗೆಗೆ ವಿವರಿಸಿದರು.

ಈ ಸಂದರ್ಭ ಶ್ರೀ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಪಿ.ಜಿ.ನಾರಾಯಣ ರಾವ್,ಎರಡನೇ ಪಾತ್ರಿ ಸುರೇಶ್ ರಾವ್,ವೇದಮೂರ್ತಿ ಕೊಲೆಕಾಡಿ ವಾದಿರಾಜ ಉಪಾಧ್ಯಾಯ,ಟ್ರಸ್ಟ್‍ನ ಕೋಶಾಧಿಕಾರಿ ವೈ.ಸುರೇಶ್ ರಾವ್,ಟ್ರಿಸ್ಟಿಗಳಾದ ಶ್ರೀನಿವಾಸ ರಾವ್,ಬಾಲಕೃಷ್ಣ ರಾವ್, ಬ್ರಾಹ್ಮಣ ಯುವಕ ವೃಂದದ ಸದಸ್ಯರು ಉಪಸ್ಥಿತರಿದ್ದರು.