ಸ್ವಾರ್ಥ ರಹಿತ ಸೇವೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯವಿದೆ

ಮೂಲ್ಕಿ: ಸ್ವಾರ್ಥ ರಹಿತ ಸೇವೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯವಿದೆ ಎಂದು ಮೂಲ್ಕಿ ತೋಕೂರು ತಪೋವನ ಎಂ.ಆರ್. ಪೂಂಜಾ ತಾಂತ್ರಿಕ ತರಬೇತಿ ಕೇಂದ್ರದ ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್ ಹೇಳಿದರು.

ಮೂಲ್ಕಿ ಸ್ವಾಗತ್ ಸಂಕೀರ್ಣದಲ್ಲಿ ಬುಧವಾರ ನಡೆದ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಪರಿಸರದಲ್ಲಿ ಹಲವು ದಶಕಗಳಿಂದ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುವ ವ್ಯಕ್ತಿಗಳ ಹೆಸರು ಜನ ಮಾನಸದಲ್ಲಿ ಹಸಿರಾಗಿ ಉಳಿಯುತ್ತದೆ. ಇಂತಹಾ ವ್ಯಕ್ತಿಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಅಭಿನಂದನೀಯ ಎಂದರು.

ಅತಿಥಿ ಕೆನರಾ ಬ್ಯಾಂಕ್ ವಿಶ್ರಾಂತ ಹಿರಿಯ ಪ್ರಭಂದಕ ಕೆ.ಸತೀಶ್ ಭಂಡಾರಿ ಅಭಿನಂದನಾ ನುಡಿಗಳನ್ನಾಡಿ, ಹಲವು ದಶಕಗಳಿಂದ ಮೂಲ್ಕಿ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾಮಾಣಿಕ ಸೇವೆ ನಡೆಸುತ್ತಾ ಬರುತ್ತಿರುವ ಪ್ರಕಾಶ್ ಶೇರಿಗಾರ್‍ರವರ ವಿದ್ವತ್ತು ಅಪೂರ್ವವಾಗಿದ್ದು ಉತ್ಸವ ಕಾಲದಲ್ಲಿ ಬಂಗಾರದ ನಾಗಸ್ವರ ನುಡಿಸುವ ಅವರ ಕಲಾ ನೈಪುಣ್ಯತೆ ಸ್ತುತ್ಯರ್ಹ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಸನ್ಮಾನಿತರಿಗೆ ಪುನಃ ಸನ್ಮಾನ ನಡೆಯುವ ಕಾಲಘಟ್ಟದಲ್ಲಿ ಪ್ರತೀ ತಿಂಗಳು ಹೊಸ ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಅಭಿನಂದನೀಯ ಎಂದರು.

ಸನ್ಮಾನ: ಈ ಸಂದರ್ಭ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಶೇರಿಗಾರ್‍ರವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಮೂಲ್ಕಿ ರೋಟರಿ ಅಧ್ಯಕ್ಷ ಲಿಯಾಖತ್ ಆಲಿ, ಸಾಹಿತಿ ಡಾ. ಹರಿಶ್ಚಂದ್ರ ಪಿ.ಸಾಲ್ಯಾನ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಗೌ.ರವ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು, ರೋಟರಿ ಜಿಲ್ಲಾ ಉಪ ರಾಜ್ಯಪಾಲ ರವಿಚಂದ್ರ, ಹಿರಿಯ ಪ್ರಗತಿಪರ ಕೃಷಿಕರಾದ ಐಕಳ ಜಯಪಾಲ ಶೆಟ್ಟಿ ಮತ್ತು ರವೀಂದ್ರ ಶೆಟ್ಟಿ, ಹೆಜಮಾಡಿ ಗ್ರಾ. ಪಂ. ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಉಪಸ್ಥಿತರಿದ್ದರು.

ಹರಿಶ್ಚಂದ್ರ.ಪಿ.ಸಾಲ್ಯಾನ್ ಸ್ವಾಗತಿಸಿದರು. ವಿಜಯ ಕುಮಾರ್ ಕುಬೆವೂರು ಸಾಧಕರನ್ನು ಪರಿಚಯಿಸಿದರು. ರವಿಚಂದ್ರ ನಿರೂಪಿಸಿದರು. ವಾಮನ ಕೋಟ್ಯಾನ್ ವಂದಿಸಿದರು.

ಫೋಟೋ:
ಕ್ಯಾ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಶೇರಿಗಾರ್ ರವರನ್ನು ಸನ್ಮಾನಿಸಲಾಯಿತು.