ಸ್ವಚ್ಛತೆ ಇದ್ದಲ್ಲಿ ದೈವತ್ವ ನೆಲೆಸುತ್ತದೆ – ಮಹೇಶ್

ಇಂದಿನ ದಿನಗಳಲ್ಲಿ ಸ್ವಚ್ಛತೆ ಅತೀ ಹೆಚ್ಚು ಆದ್ಯತೆ ನೀಡುವ ಕ್ಷೇತ್ರವಾಗಿದ್ದು,ಸ್ವಚ್ಚತೆ ಇದ್ದಲ್ಲಿ ದೈವತ್ವ ನೆಲೆಸುತ್ತದೆ ಎಂದು ನಂಬಿರುವವರು ನಾವು ಎಂದು ಕಾಡೂರು ಪಿಡಿಒ ಮಹೇಶ್ ಹೇಳಿದರು.

ಪಡುಬಿದ್ರಿ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ಸ್ವಚ್ಛ ಭಾರತ್ ಮಿಶನ್ ಗ್ರಾಮೀಣ ಯೋಜನೆಯಡಿ ಸ್ವಚ್ಛ ಉಡುಪಿ ಮಿಶನ್ ಬ್ಯಾನರ್‍ನೊಂದಿಗೆ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 ಕಾರ್ಯಕ್ರಮದಲ್ಲಿ ಅವರು ನೋಡಲ್ ಅಧಿಕಾರಿಯಾಗಿ ಮಾತನಾಡಿದರು.
ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಸ್ವಚ್ಛತೆಗೆ ಪ್ರಥಮ ರ್ಯಾಂಕ್ ಹೊಂದಿದ್ದು,ಈ ಬಾರಿ ದೇಶದಲ್ಲಿಯೇ ಒಂದನೇ ರ್ಯಾಂಕ್ ಗಳಿಸುವಂತಾಗಲು ಸಾರ್ವಜನಿಕರ ಭಾಗವಹಿಸುವಿಕೆ ಅಗತ್ಯವಾಗಿದೆ.ಈ ಬಾರಿ ಕೇಂದ್ರ ಸರಕಾರವು ಜಿಲ್ಲೆಗಳನ್ನು ಕೇಂದ್ರೀಕರಿಸಿ ಪರಿವೀಕ್ಷಣೆ ನಡೆಸಲಿದ್ದು,ಸರಕಾರಿ ಶಾಲೆ,ಖಾಸಗಿ ಶಾಲೆ,ಆಸ್ಪತ್ರೆ,ಪಂಚಾಯಿತಿ

ಆವರಣ,ಶೌಚಾಲಯ,ಸಂತೆ,ಪೇಟೆ,ಅಂಗನವಾಡಿಗಳನ್ನು ಕೂಲಂಕುಷವಾಗಿ ವೀಕ್ಷಸಲಿದೆ.ಈ ಸಂದರ್ಭ ಅವೆಲ್ಲವನ್ನೂ ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದವರು ಹೇಳಿದರು.

ಮಕ್ಕಳಿಗೆ ಸತ್ಸಂಗಗಳನ್ನು ಕಲಿಸುವ ಜತೆಗೆ ಕಸ ವಿಲೇವಾರಿ ಬಗ್ಗೆಯೂ ಕಲಿಸಬೇಕು.ವೈಜ್ಞಾನಿಕವಾಗಿ ಕಸ ವಿಲೇವಾರಿಯಿಂದ ಹಲವು ಸ್ಥಳೀಯಾಡಳಿತಗಳು ಆದಾಯವನ್ನೂ ಪಡೆಯುತ್ತಿದ್ದು,ಕಸ ಸಂಪತ್ತಿಗೆ ಸಮಾನವಾಗಿದೆ ಎಂಬುದನ್ನು ಎಳೆಯರಿಗೆ ತಿಳಿಸಿಕೊಡಬೇಕು ಎಂದವರು ಹೇಳಿದರು.

ದ್ರವ ತ್ಯಾಜ್ಯ ನಿವಾರಣೆಗೆ ಕಾಬಾಳೆ ಗಿಡ ನೆಡುವ ಮೂಲಕ ಸಮಸ್ಯೆ ಪರಿಹರಿಕೊಳ್ಳಬಹುದಾಗಿದೆ ಎಂದವರು ಮಾಹಿತಿ ನೀಡಿದರು.
ವಾಟ್ಸ್‍ಆಪ್ ಮೂಲಕ ಗೋಗ್‍ಲ್ ಪ್ಲೇ ಸ್ಟೋರ್‍ಗೆ ಹೋಗಿ ಎಸ್‍ಎಸ್‍ಜಿ 2018 ನಲ್ಲಿ ಸ್ವಚ್ಛ ಸರ್ವೇಕ್ಷಣೆಯ ಲೋಗೋ ಇನ್‍ಸ್ಟಾಲ್ ಮಾಡಿಕೊಂಡು ಉಡುಪಿ ಜಿಲ್ಲೆಯ ಬಗ್ಗೆ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವ ಮೂಲಕ ಜಿಲ್ಲೆಯನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿಕೊಂಡರು.

ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್ ಮಾತನಾಡಿ,ಅಭಿವೃದ್ಧಿ ಹೊಂದಿದ ದೇಶಗಳು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿದ ಕಾರಣವೇ ತ್ವರಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು.ಜಪಾನ್ ದೇಶದಲ್ಲಿ ಪ್ರತಿಭಟನೆಯಲ್ಲೂ ಹೆಚ್ಚು ಕೆಲಸ ಮಾಡುವ ಮೂಲಕ ಅಭಿವೃದ್ಧಿ ವೇಗ ಪಡೆದಿದೆ.ನಾವದನ್ನು ಅನುಕರಿಸಬೇಕಾಗಿದೆ ಎಂದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಮಾತನಾಡಿ,ಕಸ ಬಿಸಾಡುವವರ ಮನಸ್ಸಲ್ಲಿ ಅದು ತಪ್ಪು ಎಂಬ ಪರಿಕಲ್ಪನೆ ಬಂದಾಗ ಸ್ವಚ್ಛ ಭಾರತ್ ಯಶಸ್ಸು ಸಾಧಿಸುತ್ತದೆ ಎಂದರು.
ತಾಪಂ ಸದಸ್ಯರಾದ ನೀತಾ ಗುರುರಾಜ್ ಮತ್ತು ದಿನೇಶ್ ಕೋಟ್ಯಾನ್ ಪಲಿಮಾರು ಮಾತನಾಡಿದರು.ಪಿಡಿಒ ಪಂಚಾಕ್ಷರಿ ಸ್ವಾಮಿ ಸ್ವಾಗತಿಸಿ ವಂದಿಸಿದರು.

ಪ್ಲಾಸ್ಟಿಕ್ ನಿಷೇಧ,ಘನ-ದ್ರವ ತ್ಯಾಜ್ಯ ನಿರ್ವಹಣೆಯ ಕರಡು ಬೈಲಾ ಸಿದ್ಧಗೊಂಡಿದ್ದು ಶೀಘ್ರ ಮಂಡನೆಯಾಗಲಿದೆ ಎಂದು ಪಂಚಾಕ್ಷರಿ ಸ್ವಾಮಿ ಸಭೆಗೆ ಮಾಹಿತಿ ನೀಡಿದರು.

ಬಾಕ್ಸ್: ಜನಪ್ರತಿನಿಧಿಗಳು,ಅಧಿಕಾರಿಗಳು ಪ್ಲಾಸ್ಟಿಕ್ ನಿಷೇಧ ಹಾಗೂ ವಿಷಕಾರಿ ಎಂಬ ಬಗ್ಗೆ ಮಾತನಾಡುತ್ತಾರೆಯೇ ಹೊರತು ಪ್ಲಾಸ್ಟಿಕ್ ತಯಾರಿಯನ್ನು ನಿಷೇಧಿಸುವುದಿಲ್ಲವೇಕೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಮಹೇಶ್,ಪ್ಲಾಸ್ಟಿಕ್ ಲಾಬಿ ಎಷ್ಟೊಂದು ಬಲಿಷ್ಠವಾಗಿದೆಯೆಂದರೆ ಸರಕಾರವನ್ನೇ ಬುಡಮೇಲು ಮಾಡಬಹುದಾದಷ್ಟು ಬಲಿಷ್ಠವಾಗಿದೆ.ಆದಾಗ್ಯೂ ಕೇಂದ್ರ ಸರಕಾರ ಪ್ಲಾಸ್ಟಿಕ್ ನಿಷೇಧಕ್ಕೆ ಶಾಸನವನ್ನೇ ಮಾಡಿದೆ.ಅದರ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.ಪ್ಲಾಸ್ಟಿಕ್ ತಯಾರಿಯೇ ನಿಂತು ಹೋದರೆ 10 ಲಕ್ಷದಷ್ಟು ನಿರುದ್ಯೋಗಿಗಳಿಗೆ ಬದಲಿ ವ್ಯವಸ್ಥೆ ಮಾಡಬೇಕಾಗಿದೆ.ಅದರ ಬದಲು ಪ್ಲಾಸ್ಟಿಕ್ ಬಳಸುವುದನ್ನೇ ಕಡಿಮೆ ಮಾಡಿದರೆ ಪರಿಕಲ್ಪನೆ ಯಶಸ್ಸು ಗಳಸಬಹುದು ಎಂದರು.