ಸೌದಿ ಅಪಘಾತದಲ್ಲಿ ಪಡುಬಿದ್ರಿ ಯುವಕ ಮೃತ್ಯು

ಪಡುಬಿದ್ರಿ: ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಡುಬಿದ್ರಿಯ ಯುವಕ ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ.
ಪಡುಬಿದ್ರಿ ಕಂಚಿನಡ್ಕ ನಿವಾಸಿ ಹಂಝರವರ ಪುತ್ರ ಅಬ್ದುಲ್ ಖಾದರ್(35) ಮೃತಪಟ್ಟ ದುರ್ದೈವಿ.

ಅಬ್ದುಲ್ ಖಾದರ್‍ರವರು ಸೌದಿ ಅರೇಬಿಯಾದಲ್ಲಿ ವ್ಯಾಪಾರ ನಡೆಸುತ್ತಿದ್ದು, ಅ.16ರಂದು ಕಾರ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಹೈಲ್‍ನ 180 ಕಿಮೀ ದೂರದಲ್ಲಿ ಕಾರ್‍ನ ಟಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿತ್ತು. ಈ ಸಂದರ್ಭ ತೀವ್ರ ಗಾಯಗೊಂಡ ಅಬ್ದುಲ್ ಖಾದರ್‍ರವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತರಿಗೆ ತಂದೆ, ಪತ್ನಿ, 2 ಪುತ್ರರು ಹಾಗೂ ಮೂವರು ಸಹೋದರರು ಇದ್ದಾರೆ.
ಸೌದಿಯ ಜಿದ್ದಾದಲ್ಲಿ ವ್ಯಾಪಾರ ನಡೆಸುತ್ತಿದ್ದ ಅವರು ಜಿದ್ದಾದಲ್ಲೇ ನೆಲೆಸಿದ್ದರು. ವ್ಯಾಪಾರ ನಿಮಿತ್ತ ಹೈಲ್‍ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವರ ಮೃತದೇಹವನ್ನು ಸೌದಿಯಲ್ಲಿಯೇ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.