ಸೆ 29- ಪಡುಬಿದ್ರಿ ಬಂಟರ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ ಸೋಶಿಯಲ್ ವೆಲ್‍ಫೇರ್ ಕಾರ್ಯಕ್ರಮ

ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘದ ವತಿಯಿಂದ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಸಿರಿಮುಡಿ ದತ್ತಿನಿಧಿ ಯೋಜನೆಯ ಸಹಭಾಗಿತ್ವದಲ್ಲಿ ಪಡುಬಿದ್ರಿ ಬಂಟರ ಭವನದಲ್ಲಿ ಸೆ. 29ರ ಭಾನುವಾರ ಬಂಟ್ಸ್ ಸೋಶಿಯಲ್ ವೆಲ್‍ಫೇರ್ ಕಾರ್ಯಕ್ರಮ ಬೆಳಿಗ್ಗೆ 8.30ರಿಂದ ಸಂಜೆ 6.00ರವರೆಗೆ ಜರಗಲಿದೆಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ರೂ.10ಲಕ್ಷಕ್ಕೂ ಮಿಕ್ಕಿ ವಿವಿಧ ಸವಲತ್ತು ವಿತರಣೆ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬುದ್ಧಿಮಾಂದ್ಯ ಮತ್ತು ವಿಶೇಷಚೇತನ ಮಕ್ಕಳಿಗೆ ಸಹಾಯಧನ, ವಿಧವೆಯರಿಗೆ ವಿಧವಾ ವೇತನ, ಬಡ ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ ಹಸ್ತ, ಮನೆ ರಿಪೇರಿ ಮತ್ತು ಮನೆ ನಿರ್ಮಾಣಕ್ಕೆ ಸಹಕಾರ, ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ಮದುವೆಗೆ ಆರ್ಥಿಕ ಸಹಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನೀಡುವ ಕಾರ್ಯಕ್ರಮದೊಂದಿಗೆ ಸುಮಾರು 10 ಲಕ್ಷಕ್ಕೂ ಮಿಕ್ಕಿ ಬಂಟ ಸಮಾಜ ಬಾಂಧವರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಗುವುದು.

ಗಣ್ಯರಿಗೆ ಅಭಿನಂದನೆ: ಬಂಟ ಸಮಾಜಕ್ಕೆ ವಿಶೇಷ ಸಹಕಾರ ನೀಡಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಮತ್ತು ನಿವೃತ್ತ ಕಸ್ಟಮ್ಸ್ ಸೂಪರಿಂಡೆಂಟ್ ರಘು ಎನ್. ಶೆಟ್ಟಿಯವರಿಗೆ ಅಭಿನಂದನಾ ಕಾರ್ಯಕ್ರಮವಿದೆ. ಸಿರಿಮುಡಿ ದತ್ತಿನಿಧಿಯ ಸಂಸ್ಥಾಪಕರಾದ ಸಾಂತೂರು ಭಾಸ್ಕರ ಶೆಟ್ಟಿಯವರನ್ನು ಗೌರವಿಸಲಾಗುವುದೆಂದು ತಿಳಿಸಿದ್ದಾರೆ.

ಕಾರ್ಯಕ್ರಮ ಸೆ. 29ರಂದು ಬೆಳಿಗ್ಗೆ 8.30ಕ್ಕೆ ಪ್ರಾರಂಭವಾಗಲಿದೆ. ಖ್ಯಾತ ಎಲುಬು ತಜ್ಞರಾದ ಡಾ.ಅಜಿತ್ ಕುಮಾರ್ ಶೆಟ್ಟಿ, ಮಾತೃ ಬಂಟರ ಸಂಘದ ಕಾರ್ಯದರ್ಶಿಯವರಾದ ವಸಂತ ಶೆಟ್ಟಿಯವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ದುಬೈಯ ಫಾರ್ಚೂನ್ ಗ್ರೂಪ್‍ನ ಎಂ. ಡಿ. ವಕ್ವಾಡಿ ಪ್ರವೀಣ್ ಶೆಟ್ಟಿ, ಉದ್ಯಮಿ ವಿರಾರ್ ಶಂಕರ ಶೆಟ್ಟಿ, ಮುಂಬಯಿಯ ಮುಲುಂಡು ಬಂಟರ ಸಂಘದ ಅಧ್ಯಕ್ಷರಾದ ಫಲಿಮಾರು ವಸಂತ ಶೆಟ್ಟಿ, ಹೆಂಟರ್ಕಿ ಸುಧಾಕರ ಶೆಟ್ಟಿ ಉದ್ಯಮಿ ಬಹರೈನ್, ಸಿರಿಮುಡಿ ದತ್ತಿ ನಿಧಿಯ ಗೌರವಾಧ್ಯಕ್ಷರಾದ ಸಾಂತೂರು ಭಾಸ್ಕರ ಶೆಟ್ಟಿ, ಬಂಟ್ಸ್ ವೆಲ್‍ಫೇರ್ ಟ್ರಸ್ಟ್‍ನ ಅಧ್ಯಕ್ಷರಾದ ವೈ.ಶಶಿಧರ್ ಶೆಟ್ಟಿಯವರು ಉಪಸ್ಥಿತರಿರುವರು.

ಸಮಾಜದ ಅಶಕ್ತರ ನೆರವಿಗೆ ಸಿರಿಮುಡಿ ದತ್ತಿನಿಧಿ: ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಹಸ್ತ ನೀಡಬೇಕೆಂಬ ಉದ್ದೇಶದೊಂದಿಗೆ ಸಿರಿಮುಡಿ ದತ್ತಿನಿಧಿಯ ಸಂಸ್ಥಾಪಕರಾದ ಸಾಂತೂರು ಭಾಸ್ಕತ ಶೆಟ್ಟಿಯವರು ದಾನಿಗಳ ಸಹಾಕರ ಪಡೆದು ವಿಶೇಷವಾಗಿ ಮುಂಬಯಿಯ ಸಮಾಜದ ಉದ್ಯಮಿಗಳ ನೆರವಿನೊಂದಿಗೆ ರೂ.75 ಲಕ್ಷಕ್ಕೂ ಮಿಕ್ಕಿ ಶಾಶ್ವತ ನಿಧಿಯನ್ನು ಸ್ಥಾಪಿಸಿ ಆ ಮೂಲಕ ಬಂಟ ಸಮಾಜದ ಅಶಕ್ತರಿಗೆ ನೆರವು ನೀಡುವ ಯೋಜನೆಯಾಗಿದೆ.

ಸಂಘದ ಅಭಿವೃದ್ಧಿಗೆ ಹತ್ತಾರು ಯೋಜನೆ; ಪಡುಬಿದ್ರಿ ಬಂಟರ ಸಂಘದಲ್ಲಿ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಬಂಟ ಗ್ರಾಮಸಭೆ, ಧಾರ್ಮಿಕ ಶ್ರದ್ಧೆಗಾಗಿ ಮಾಸಿಕ ಸತ್ಯನಾರಾಯಣ ಪೂಜೆ, ಸಾಂಸ್ಕøತಿಕ ಸರಣಿ ಕಾರ್ಯಕ್ರಮ, ಯುವಕರನ್ನು ಸಂಘಟಿಸುವ ಯುವವಿಭಾಗ, ಮಹಿಳೆಯರ ಸಂಘಟನೆಗಾಗಿ ಮಹಿಳಾ ವಿಭಾಗದ ಕ್ರೀಡಾ ಕಾರ್ಯಕ್ರಮ, ಸಂಘದಲ್ಲಿ ಗುರು ನಿತ್ಯಾನಂದ ಸ್ವಾಮೀಜಿಗಳ ಮೂರ್ತಿ ಪ್ರತಿಷ್ಠಾಪನೆ, ಸಂಘವನ್ನು ಹವಾನಿಯಂತ್ರಣ ವ್ಯವಸ್ಥೆಗೊಳಿಸುವುದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಗೆ ಯೋಜನೆ, ಬಂಟ ಶಿಕ್ಷಣ ಪ್ರತಿಷ್ಠಾನ ಸ್ಥಾಪನೆಯ ಉದ್ದೇಶದೊಂದಿಗೆ ಸಮಾಜದಲ್ಲಿ ಬಡವ-ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರನ್ನು ಸಂಘದಲ್ಲಿ ಸಕ್ರಿಯಗೊಳಿಸುವುದು. ಸಂಘದಿಂದ ನೆರವು ಯಾಚಿಸುವ ಆರ್ಥಿಕ ಹಿಂದುಳಿದ ಕುಟುಂಬಕ್ಕೆ ಸಹಾಯ ಹಸ್ತ ನೀಡುವುದು. ಯುವಕರಿಗೆ ಸ್ವ ಉದ್ಯೋಗ ಸ್ಥಾಪನೆಗೆ ಉತ್ತೇಜನ ನೀಡುವುದು ನಮ್ಮ ಮುಂದಿನ ಉದ್ದೇಶವೆಂದು ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿಯವರ ಮನದಾಳದ ಮಾತು.
ಸಾಂಸ್ಕøತಿಕ ವೈಭವ: ಸಮಾರಂಭದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಬೆಳಿಗ್ಗೆ 8.30ಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಲನಚಿತ್ರ ಪ್ರದರ್ಶನ, ಬೆಳಿಗ್ಗೆ 10 ಗಂಟೆಗೆ ಸಂಘದ ಮಹಿಳಾ ವಿಭಾಗದ ಸದಸ್ಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಮಧ್ಯಾಹ್ನ 3 ರಿಂದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ “ನಮಸ್ಕಾರ ಮಾಸ್ಟ್ರೇ” ತುಳುನಾಟಕ ಪ್ರದರ್ಶನವಾಗಲಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.