ಸೆ.20: ರಾಹೆ 66ರ ನಾಲ್ಕು ಟೋಲ್‍ಗಳಲ್ಲಿ ಸಾಂಕೇತಿಕ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಅಪೂರ್ಣಗೊಂಡಿದ್ದು,ಮೂಲ ನಕಾಶೆ ತಿರುಚಿ ನಿಧಾನಗತಿಯಲ್ಲಿ ನಡೆಯುತ್ತಿರುವ ಯೋಜನೆಯ ವಿರುದ್ಧ ಸೆಪ್ಟಂಬರ್ 20 ಗುರುವಾರ ತಲಪಾಡಿಯಿಂದ ಸಾಸ್ತಾನದವರೆಗೆ ನಾಲ್ಕು ಟೋಲ್ ಪ್ಲಾಝಾ ಮುಂಭಾಗ ಅವಿಭಜಿತ ದಕ ಜಿಲ್ಲೆಯ ಹೆದ್ದಾರಿ ಹೋರಾಟ ಸಮಿತಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದೆ.

ಶುಕ್ರವಾರ ಪಡುಬಿದ್ರಿ ಅಮರ್ ಕಂಫರ್ಟ್ಸ್ ಹೋಟೆಲ್ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಡ.ದೇವಿಪ್ರಸಾದ್ ಶೆಟ್ಟಿ ಬೆಳಪು ಈ ಬಗ್ಗೆ ಮಾಹಿತಿ ನೀಡಿದರು.

ರಾಹೆ ಕಾಮಗಾರಿ ಸಂಪೂರ್ಣಗೊಳಿಸಬೇಕು.ಅಲ್ಲಿತನಕ ಸುಂಕ ವಸೂಲಾತಿ ಸ್ಥಗಿತಗೊಳಿಸಬೇಕು.ಸ್ಥಳೀಯ ವಾಹನಗಳಿಗೆ ಖಾಂಯಂ ಸುಂಕ ವಿನಾಯಿತಿ ನೀಡಬೇಕು.ಹೆದ್ದಾರಿ ಕಾಮಗಾರಿಯನ್ನು 2010ರ ಮೂಲ ನಕಾಶೆಯಂತೆ ನಿರ್ಮಿಸಬೇಕು.ರಾಹೆ ಇಲಾಖೆ ಕಾನೂನು ಮೀರಿ 90 ಕಿಮೀ ಅಂತರದಲ್ಲಿ ನಾಲ್ಕು ಟೋಲ್ ನಿರ್ಮಿಸಿದ್ದು,ಈ ಪೈಕಿ ಸುರತ್ಕಲ್ ಟೋಲ್‍ನ್ನು ತಕ್ಷಣ ರದ್ದುಪಡಿಸಬೇಕು ಎಂದವರು ಹೇಳಿದರು.

ಹೆದ್ದಾರಿ ತಿರುವುಗಳು ಅವೈಜ್ಞಾನಿಕವಾಗಿದ್ದು,ಮಳೆ ನೀರು ಸರಾಗ ಹರಿದುಹೋಗಲು ವ್ಯವಸ್ಥೆ ಕಲ್ಪಿಸಿಲ್ಲ.ಹೆದ್ದಾರಿಯ ಮಧ್ಯೆಯೇ ಮಳೆ ನೀರು ನಿಂತು ಹಲವು ಅಪಘಾತಗಳು ಸಂಭವಿಸಿವೆ.ಅಪಘಾತ ವಲಯದಲ್ಲಿ ಎಚ್ಚರಿಕೆ ಫಲಕಗಳನ್ನೂ ಅಳವಡಿಸಿಲ್ಲ.ರಸ್ತೆ ವಿಭಾಜಕಗಳು ಅಸಮರ್ಪಕವಾಗಿದೆ.ಸಂಪರ್ಕ ರಸ್ತೆಗೆ ಹೊಂದಿಕೊಂಡು ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ.ಕಳಪೆ ಗುಣ ಮಟ್ಟದ ಬಸ್ಸು ತಂಗುದಾಣಗಳನ್ನು ಬದಲಿಸಬೇಕು.ದಾರಿದೀಪ ವ್ಯವಸ್ಥೆಯೂ ಕಳಪೆಯಾಗಿದೆ.ಹೆಜಮಾಡಿ ಒಳ ರಸ್ತೆಯ ಟೋಲ್‍ನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದವರು ಹೇಳಿದ್ದಾರೆ.

ತಲಪಾಡಿಯಿಂದ ಕುಂದಾಪುರ ತನಕ ಅಸಮರ್ಪಕ ಕಾಮಗಾರಿಯಿಮದ ಹಲವಾರು ಅಪಘಾತಗಳು ಸಂಭವಿಸಿವೆ.ಇದಕ್ಕೆ ಮುಕ್ತಿ ನೀಡಬೇಕು.ತಪ್ಪಿದಲ್ಲಿ ಹೆದ್ದಾರಿ ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಲಾಗುವುದು.ಅಗತ್ಯವಿದ್ದಲ್ಲಿ ಕಪ್ಪ ಪಟ್ಟಿಗೆ ಸೇರಿಸಲು ಆಗ್ರಹಿಸಲಾಗುವುದು.ಹೆದ್ದಾರಿ ಇಲಾಖಾ ಇಂಜಿನಿಯರ್‍ಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ ಎಂದವರು ಆರೋಪಿಸಿದ್ದಾರೆ.

ಸರಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ.ಕೆಲವೆಡೆ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಿ ಟೋಲ್ ಸಂಗ್ರಹಿಸಲಾಗುತ್ತಿದೆ.ಹಾಗಾಗಿ ಸೆ.20 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಹೆಜಮಾಡಿ,ಸುರತ್ಕಲ್,ತಲಪಾಡಿ ಮತ್ತು ಸಾಸ್ತಾನ ಟೋಲ್ ಪ್ಲಾಝಾ ಬಳಿ ಪೆಂಡಾಲ್ ಹಾಕಿ ಬ್ಯಾನರ್ ಪ್ರದರ್ಶನದೊಂದಿಗೆ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಈ ಸಂದರ್ಭ ಯಾವುದೇ ವಾಹನ ತಡೆ ಅಥವಾ ಟೋಲ್ ತಡೆ ಹಮ್ಮಿಕೊಂಡಿಲ್ಲ ಎಂದವರು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು,ಸಂಸದರು ಹಾಗೂ ಎಲ್ಲಾ ಜನಪ್ರತಿನಿಧಿಗಳು ಸ್ಥಳೀಯರಿಗೆ ಟೋಲ್ ಸಂಗ್ರಹ ವಿರುದ್ಧ ಧ್ವನಿ ಎತ್ತಿದ್ದಾರೆ.ಹಾಗಾಗಿ ಎಲ್ಲಾ ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಲಾಗುವುದು.ಸೆ.30ರ ಬಳಿಕವೂ ನಮಗೆ ಎಲ್ಲಾ ನಾಲ್ಕು ಟೋಲ್‍ಗಳಲ್ಲಿ ಸ್ಥಳೀಯ ಎಲ್ಲಾ ವಾಹನಗಳಿಗೆ ಟೋಲ್ ವಿನಾಯಿತಿ ಖಾಯಂಗೊಳಿಸಬೇಕೆಂದು ಒತ್ತಾಯಿಸಲಾಗುವುದು.ಇದರಲ್ಲಿ ಯಾವುದೇ ರಾಜಿ ಇಲ್ಲ.ನಾವು ಯಾವುದಕ್ಕೂ ಸಿದ್ಧ ಎಂದವರು ಎಚ್ಚರಿಸಿದ್ದಾರೆ.

ಈ ಸಂದರ್ಭ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ,ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ,ಕಾಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಕಾಪು ಜೆಡಿಎಸ್ ಬ್ಲಾಕ್ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಹೆಜಮಾಡಿ,ಸಾಸ್ತಾನ ಟೋಲ್ ಹೋರಾಟ ಸಮಿತಿಯ ಅಧ್ಯಕ್ಷ ಪ್ರತಾಪ್ ರೈ,ತಲಪಾಡಿ ಸಮಿತಿಯ ಅಧ್ಯಕ್ಷ ಸಿದ್ದಿಕ್,ಸುರತ್ಕಲ್ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಭಂಡಾರಿ,ಹೆಜಮಾಡಿ ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ,ಕಾಪು ದಿವಾಕರ ಶೆಟ್ಟಿ,ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯೆ ನೀತಾ ಗುರುರಾಜ್,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ವಾಸುದೇವ ರಾವ್,ರಮೇಶ್ ಕೋಟ್ಯಾನ್,ಮಧು ಆಚಾರ್ಯ ಮೂಲ್ಕಿ,ರವಿ ಶೆಟ್ಟಿ ಪಡುಬಿದ್ರಿ,ಹರೀಶ್ ಶೆಟ್ಟಿ ಪಾದೆಬೆಟ್ಟು,ಉದಯ ಶೆಟ್ಟಿ,ಪಾಂಡುರಂಗ ಕರ್ಕೇರ,ರಘುವೀರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.