ಸುರತ್ಕಲ್ ಟೊಲ್ ವಿನಾಯಿತಿಗೆ ಆಗ್ರಹಿಸಿ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯಂದ ಸಚಿವ ಖಾದರ್‍ಗೆ ಮನವಿ

ಮೂಲ್ಕಿ: ಸುರತ್ಕಲ್ ಎನೆಐಟಿಕೆ ಬಳಿ ಕಾರ್ಯಾಚರಿಸುತ್ತಿರುವ ಟೋಲ್ ಪ್ಲಾಝಾದಲ್ಲಿ ಮಾರ್ಚ್ ಒಂದರಿಂದ ಕೆಎ19 ನೋಂದಣಿಯ ವಾಹನಗಳಿಗೆ ಟೋಲ್ ಸಂಗ್ರಹ ಮಾಡುವ ನಿಧಾರದ ವಿರುದ್ಧ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯು ದಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‍ಗೆ ಮನವಿ ಸಲ್ಲಿಸಿದೆ.

ಶನಿವಾರ ಮೂಲ್ಕಿ ಪ್ರಗತಿ ಪರಿಶೀಲನೆಗಾಗಿ ಆಗಮಿಸಿದ್ದ ಸಚಿವರನ್ನು ಅಭಿವೃದ್ಧಿ ಸಮಿತಿಯ ಪದಾದಿಕಾರಿಗಳು ಅಧ್ಯಕ್ಷ ಹರೀಶ್ ಎನ್.ಪುತ್ರನ್ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಹಿಂದೆ ಕೆಎ19 ನೋಂದಣಿಯ ವಾಹನಗಳಿಗೆ ಸುರತ್ಕಲ್ ಟೋಲ್‍ನಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿತ್ತು.ಇದೀಗ ನಷ್ಟದ ನೆಪ ಹೇಳಿ ಟೋಲ್ ವಿನಾಯಿತಿ ರದ್ದು ಪಡಿಸಲು ನಿರ್ಧರಿಸಿದ್ದು ಕಾನೂನುಬಾಹಿರವಾಗಿದೆ.ಈ ಬಗ್ಗೆ ತಾವು ತಕ್ಷಣ ಕ್ರಮ ಕೈಗೊಂಡು ಟೋಲ್ ವಿನಾಯಿತಿಗೆ ಸಹಕರಿಸಬೇಕೆಂದು ಸದಸ್ಯರು ಮನವಿ ಮಾಡಿದರು.

ಈ ಬಗ್ಗೆ ಸೂಕ್ತವಾಗಿ ಸ್ಪಂದಿಸುವುದಾಗಿ ಸಚಿವರು ಭರವಸೆ ನೀಡಿದರು.
ಮೂಲ್ಕಿ ಅಭಿವೃದ್ಧಿಗೆ ಮನವಿ: ಇದೇ ವೇಳೆ ಮೂಲ್ಕಿಯ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸಚಿವರಿಗೆ ಸಮಿತಿಯು ಮನವಿ ಸಲ್ಲಿಸಿತು.ಮೂಲ್ಕಿ ತಾಲೂಕು ರಚನೆಗೆ ಶೀಘ್ರ ಸ್ಪಂದಿಸುವಂತೆ ಮನವಿ ಮಾಡಿದ ಸಮಿತಿಯು,ಮೂಲ್ಕಿಯ ಪ್ರಮುಖ ಸಮಸ್ಯೆಯಾದ ಒಳಚರಂಡಿ ಯೋಜನೆಯ ಶೀಘ್ರ ಜಾರಿಗೆ ಸರಕಾರದ ವತಿಯಿಂದ ರೂ.400 ಕೋಟಿ ಅನುದಾನವನ್ನು ಒದಗಿಸುವಂತೆ ಬೇಡಿಕೆ ಮಂಡಿಸಿದರು.

ಈ ಸಂದರ್ಭ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್,ಸಮಿತಿಯ ಪದಾಧಿಕಾರಿಗಳಾದ ಜೀವನ್ ಕೆ.ಶೆಟ್ಟಿ,ಧನಂಜಯ ಮಟ್ಟು,ಸುನಿಲ್ ಆಳ್ವ,ವೆಂಕಟೇಶ್ ಹೆಬ್ಬಾರ್,ಶಶಿ ಅಮೀನ್,ಎಮ್.ನಾರಾಯಣ್,ಶಶಿಕಾಂತ್ ಶೆಟ್ಟಿ,ಸದಾಶಿವ ಹೊಸದುರ್ಗ,ಅಬ್ದುಲ್ ರಜಾಕ್,ಜೋಯಲ್ ಡಿಸೋಜಾ,ಯೋಗೀಶ್ ಕೋಟ್ಯಾನ್,ಉದಯ ಶೆಟ್ಟಿ,ಮತ್ತಿತರರು ಉಪಸ್ಥಿತರಿದ್ದರು.