ಸುಪ್ರ ಪ್ರಿಂಟರ್ಸ್ ಮುಂಬಯಿ ತಂಡಕ್ಕೆ ಕೆಸಿಎಲ್ ಚಾಂಪಿಯನ್ಸ್ ಲೀಗ್ ಟ್ರೋಫಿ

ಪಡುಬಿದ್ರಿ: ಹೆಜಮಾಡಿ ಕೋಡಿಯ ವಿದ್ಯಾಪ್ರಸಾರ ಹಳೇ ವಿದ್ಯಾರ್ಥಿ ಸಂಘದ ಕ್ರೀಡಾಂಗಣದಲ್ಲಿ ಕೋಡಿ ಕ್ರಿಕೆಟರ್ಸ್ ವತಿಯಿಂದ ನಡೆದ ಕೋಡಿ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸತೀಶ್ ಪುತ್ರನ್ ಮಾಲಕತ್ವದ ಬಲಿಷ್ಠ ಮುಂಬಯಿ ಸುಪ್ರ ಪ್ರಿಂಟರ್ಸ್ ತಂಡವು ಕೆಸಿಎಲ್ ಚಾಂಪಿಯನ್ಸ್ ಲೀಗ್ ಟ್ರೋಫಿ-2019ರ ಜತೆಗೆ ನಗದು ರೂ.30,00 ಪಡೆಯಿತು.

ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯಾಟದಲ್ಲಿ ಶರತ್ ಪುತ್ರನ್ ಮಾಲಕತ್ವದ ದುಬಾಯಿ ಮಿತಾಂಶ್ ಇಲೆವೆನ್ ತಂಡವನ್ನು ಏಕಪಕ್ಷೀಯವಾಗಿ 9 ವಿಕೆಟ್‍ಗಳಿಂದ ಮಣಿಸಿ ಪ್ರಶಸ್ತಿ ಪಡೆಯಿತು.ಫೈನಲ್‍ನಲ್ಲಿ ಸೋತ ಮಿತಾಂಶ್ ಇಲೆವೆನ್ ತಂಡವು ದ್ವಿತೀಯ ಪ್ರಶಸ್ತಿಯೊಂದಿಗೆ ನಗದು ರೂ.20,00 ಪಡೆಯಿತು.

ಐಪಿಎಲ್ ಮಾದರಿಯಲ್ಲಿ ನಡೆದ ಪಂದ್ಯಾಟದ ಸೆಮಿಫೈನಲ್‍ಗಳಲ್ಲಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಸುಪ್ರ ಮತ್ತು ಮಿತಾಂಶ್ ತಂಡವು ಕಾದಾಡಿ ಸುಪ್ರ ತಂಡವು ಜಯ ಗಳಿಸಿತ್ತು. ಅಂಕಪಟ್ಟಿಯಲ್ಲಿ 3-4 ಸ್ಥಾನ ಗಳಿಸಿದ ಪುಣೆ ಯುರೋಪಿಯನ್ ಮೋಟಾರ್ಸ್ ಮತ್ತು ಶ್ರೇಯ ಸ್ಟ್ರೈಕರ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಶ್ರೇಯ ಸ್ಟ್ರೈಕರ್ಸ್ ವಿಜಯ ಗಳಿಸಿತ್ತು.ಬಳಿಕ ನಡೆದ ಎರಡನೇ ಸೆಮಿಫೈನಲ್‍ನಲ್ಲಿ ಮಿತಾಂಶ್ ಇಲೆವೆನ್ ರೋಮಾಂಚಕ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು.
ವೈಯಕ್ತಿಕ ಪ್ರಶಸ್ತಿ: ಲೀಗ್ ಪಂದ್ಯಾಟದ ಸರಣಿ ಶ್ರೇಷ್ಠರಾಗಿ ಸುಪ್ರ ಪ್ರಿಂಟ್ರರ್ಸ್ ಮುಂಬಯಿಯ ಸಂತೋಷ್, ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಅದೇ ತಂಡದ ಹರೀಶ್,ಅತ್ಯುತ್ತಮ ಬ್ಯಾಟ್ಸ್‍ಮೆನ್ ಆಗಿ ಮಿತಾಂಶ್ ದುಬಾಯಿ ತಂಡದ ಹಿತೇಶ್ ಮೆಂಡನ್, ಅತ್ಯುತ್ತಮ ಬೌಲರ್ ಆಗಿ ಅದೇ ತಂಡದ ದಯಾಕರ್ ಮತ್ತು ಉದಯೋನ್ಮುಖ ಆಟಗಾರರಾಗಿ ಮಿತಾಂಶ್ ತಂಡದ ರಚನ್ ವೈಯಕ್ತಿಕ ಪ್ರಶಸ್ತಿ ಪಡೆದರು.

ಪ್ರಶಸ್ತಿ ವಿತರಣೆ: ಕೋಡಿ ಕ್ರಿಕೆಟರ್ಸ್ ಸಂಚಾಲಕ ಸತೀಶ್ ಕೋಟ್ಯಾನ್, ಅಧ್ಯಕ್ಷ ಕಿರಣ್ ಪುತ್ರನ್, ಯಾದವ ಕೋಟ್ಯಾನ್ ಆಚೆಮಟ್ಟು, ವಿದ್ಯಾಪ್ರಸಾರ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಪಾಲ್ ಸುವರ್ಣ, ಪಡುಬಿದ್ರಿ ಕ್ರಿಕೆಟರ್ಸ್‍ನ ಹರೀಶ್ ಕುಮಾರ್, ಪತ್ರಕರ್ತ ಪುನೀತ್‍ಕೃಷ್ಣ, ವಿಠಲ ಪುತ್ರನ್, ಜಯಕರ್ ಹೆಜ್ಮಾಡಿ, ಹೇಮಂತ್ ಕುಮಾರ್ ಕಾಂಚನ್, ತಂಡಗಳ ಮಾಲಕರುಗಳಾದ ಶರತ್ ಪುತ್ರನ್, ಮುಖೇಶ್ ಬಂಗೇರ, ಸಂತೋಷ್ ಕೋಟ್ಯಾನ್, ಉದಯ ಅಮೀನ್, ಇಂದುಶೇಖರ ಸುವರ್ಣ ಮುಖ್ಯ ಅತಿಥಿಗಳಾಗಿದ್ದರು.

ವಿಜಯ್ ಕೋಡಿ ಕಾರ್ಯಕ್ರಮ ನಿರ್ವಹಿಸಿದರು.