ಸುಪ್ರಭಾ ಹರೀಶ್‍ರವರಿಗೆ ಮಂಗಳೂರು ವಿವಿಯಿಂದ ಪಿಎಚ್‍ಡಿ ಡಾಕ್ಟರೇಟ್

ಮೂಲ್ಕಿ: ಮೂಲ್ಕಿಯ ಸುಪ್ರಭಾ ಹರೀಶ್‍ರವರು ಮಂಗಳೂರಿನ ಸಾಗರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್‍ಡಿ ಡಾಕ್ಟರೇಟ್ ದೊರಕಿದೆ.

ಸಿಎಮ್‍ಎಫ್‍ಆರ್‍ಐನ ಪ್ರಿನ್ಪಿಪಾಲ್ ಸೈಂಟಿಸ್ಟ್ ಡಾ.ಎ.ಪಿ.ದಿನೇಶ್‍ಬಾಬು ಮಾರ್ಗದರ್ಶನದಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಯೋಸಯನ್ಸ್‍ನ “ಕ್ಲೈಮೇಟ್ ಡ್ರಿವನ್ ವೇರಿಯೇಶನ್ಸ್ ಇನ್ ಮೆರೈನ್ ಈಕೋಸಿಸ್ಟಮ್ ಎಂಡ್ ಇಟ್ಸ್ ಇಂಪ್ಯಾಕ್ಟ್ ಆನ್ ಸಮ್ ಆಫ್ ದ ಮೇಜರ್ ಕಮರ್ಷಿಯಲ್ ಪೆಲಾಜಿಕ್ ಫಿಶರೀಸ್ ಆಫ್ ಕರ್ನಾಟಕ” ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಗಳೂರು ವಿವಿಗೆ ಸಲ್ಲಿಸಿದ್ದರು.

ಪತ್ರಕರ್ತ ಹರೀಶ್ ಹೆಜ್ಮಾಡಿಯವರ ಪತ್ನಿಯಾಗಿರುವ ಸುಪ್ರಭಾರವರು ಕೇಂದ್ರೀಯ ಮೀನುಗಾರಿಕಾ ಇಲಾಖೆ ಸಿಫ್‍ನೆಟ್‍ನ ನಿವೃತ್ತ ನಿರ್ದೇಶಕ ಕ್ಯಾಪ್ಟನ್ ವಾಸು ಪುತ್ರನ್ ಹಾಗೂ ವಾರಿಜಾ ವಿ.ಪುತ್ರನ್ ದಂಪತಿಯ ಪುತ್ರಿ.  ಸುಪ್ರಭಾರವರ ಓರ್ವ ಸಹೋದರ ಡಾ.ಪ್ರವೀಣ್ ಪುತ್ರನ್ ಸಾಗರ ಮೀನುಗಾರಿಕಾ ವಿಭಾಗದಲ್ಲಿ ಪಿಎಚ್‍ಡಿ ಪಡೆದು ಐಸಿಎಆರ್(ಮೆರೈನ್ ಫಿಶರೀಸ್)ನ ಎಡಿಜಿಯಾಗಿ ಉನ್ನತ ಹುದ್ದೆಯಲ್ಲಿದ್ದಾರೆ.ಹಿರಿಯ ಸಹೋದರಿ ಡಾ.ಪ್ರತಿಭಾ ರೋಹಿತ್ ಅದೇ ವಿಭಾಗದಲ್ಲಿ ಪಿಎಚ್‍ಡಿ ಪಡೆದು ಮಂಗಳೂರಿನ ಸಿಎಮ್‍ಎಫ್‍ಆರ್‍ಐನ ಪ್ರಿನ್ಸಿಪಾಲ್ ಸೈಂಟಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಇನ್ನೋರ್ವ ಸಹೋದರಿ ಡಾ.ಪ್ರಫುಲ್ಲಾ ಗಣೇಶ್‍ರವರೂ ಮೀನುಗಾರಿಕಾ ವಿಭಾಗದಲ್ಲಿ ಪಿಎಚ್‍ಡಿ ಪಡೆದು ಪ್ರಸ್ತುತ ಉದ್ಯಮಿಯಾಗಿದ್ದಾರೆ.ಕಿರಿಯ ಸಹೋದರಿ ಕಮಾಂಡರ್ ಇಂದುಪ್ರಭಾ ವಿ.ಯವರು ಕರ್ನಾಟಕದ ಮೊತ್ತಮೊದಲ ಮಹಿಳಾ ಕಮಾಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸುಪ್ರಭಾರವರು ಪ್ರಸ್ತುತ ಎಕ್ವಾಕಲ್ಚರ್ ಸ್ಪೆಕ್ಟ್ರಮ್ ಮ್ಯಾಗಝಿನ್‍ನ ಅಸೋಸಿಯೇಟ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.