ಸುಜ್ಲಾನ್ ವಿಂಡ್ ಮಿಲ್:326 ಕಾರ್ಮಿಕರ ವರ್ಗಾವಣೆ ವಿವಾದ

ಬೇಡಿಕೆ ಈಡೇರದಿದ್ದಲ್ಲಿ ಡಿ.9ರಂದು ಘಟಕದೆದುರು ಧರಣಿ ಮುಷ್ಕರಕ್ಕೆ ನಿರ್ಧಾರ

ಪಡುಬಿದ್ರಿ: ಇಲ್ಲಿಗೆ ಸಮೀಪದ ಸುಜ್ಲಾನ್ ಪವನ ವಿದ್ಯುತ್ ಯಂತ್ರ ತಯಾರಿಕಾ ಘಟಕದಲ್ಲಿ ಮತ್ತೆ ಕಾರ್ಮಿಕ ವಿವಾದ ಮತ್ತೆ ಭುಗಿಲೆದ್ದಿದ್ದು,ದೂರದ ರಾಜಸ್ಥಾನದ ಜೈಸಲ್ಮೇರ್ ಮರುಭೂಮಿಗೆ 326 ಕಾರ್ಮಿಕರ ವರ್ಗಾವಣೆ ವಿವಾದ ಧರಣಿ ಮುಷ್ಕರ ನಡೆಸುವಲ್ಲಿಗೆ ತಲುಪಿದೆ.

ಕಳದ ವರ್ಷ ನಷ್ಟವೆಂದು ಲಾಕ್‍ಔಟ್ ಘೋಷಿಸಿ ಕಾಮಿರ್ಕರನ್ನು ಬೀದಿಗೆ ತಳ್ಳಿದ್ದ ಪ್ರಕರಣ ನಡೆದಿದ್ದು,ಕಾರ್ಮಿಕ ಸಂಘಟನೆಗಳ ಮಧ್ಯಸ್ಥಿಕೆಯಿಂದ ಹಲವು ಶರ್ತಗಳೊಂದಿಗೆ ಪುನರಾರಂಭಗೊಂಡಿತ್ತು.

ಇದೀಗ ಅಕ್ಟೋಬರ್ 9ರಂದು 326 ಕಾರ್ಮಿಕರನ್ನು ಪೂರ್ವಮಾಹಿತಿ ನೀಡದೆ ಜೈಸಲ್ಮೇರ್ ಘಟಕಕ್ಕೆ ವರ್ಗಾವಣೆ ಮಾಡಿತ್ತು.ಬಳಿಕ ಇಂಟಕ್ ಕಾರ್ಮಿಕ ಸಂಘಟನೆ ಮಧ್ಯಪ್ರವೇಶಿಸಿ ಕಂಪನಿಯೊಂದಿಗೆ ಎರಡು ಬಾರಿ ಸಭೆ ನಡೆಸಿ ಶರ್ತಬದ್ಧ ವರ್ಗಾವಣೆಗೆ ಒಪ್ಪಿಗೆ ನೀಡಿದ್ದರು.

ಈಗಿರುವ ವೇತನದ ಶೇ.30ರಷ್ಟು ಹೆಚ್ಚಳ,ವಸತಿ ಸೌಲಭ್ಯ ಮತ್ತು ಸೆಕ್ಯುರಿಟಿ ನೀಡಿದಲ್ಲಿ ಸಾಮೂಹಿಕ ವರ್ಗಾವಣೆಗೆ ಕಾರ್ಮಿಕರು ಒಪ್ಪಿಗೆ ನೀಡಿದ್ದರು.ಆದರೆ ಆಡಳಿತ ವರ್ಗ ನಷ್ಟದ ನೆಪ ಹೇಳಿ ಕೇವಲ ಶೆ.5 ವೇತನ ಹೆಚ್ಚಳಕ್ಕೆ ಮಾತ್ರ ಒಪ್ಪಿಗೆ ನೀಡಿದ್ದರು.

ಇದಕ್ಕೊಪ್ಪದ ಕಾರ್ಮಿಕರಿಗೆ ನ.19ರಂದು ಶೋಕಾಸ್ ನೋಟೀಸ್ ಜಾರಿ ಮಾಡಿ ನ.22ಕ್ಕೆ ಜೈಸಲ್ಮೇರ್‍ಗೆ ಹೋಗಿ ಕೆಲಸಕ್ಕೆ ಸೇರಲು ಆದೇಶ ನೀಡಿತ್ತು.ತಪ್ಪಿದಲ್ಲಿ ಕಾರ್ಮಿಕರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿತ್ತು.
ಇದರ ನಡುವೆ ಕೆಲವು ಕಾರ್ಮಿಕರನ್ನು ಸಂಪರ್ಕಿಸಿದ ಕಂಪನಿಯು ಶಾಶ್ವತ ಕೆಲಸಕ್ಕೆ ರಾಜೀನಾಮೆ ನೀಡಿ ಕಾಂಟ್ರಾಕ್ಟ್ ನೆಲೆಯಲ್ಲಿ ಮತ್ತೆ ಕೆಲಸಕ್ಕೆ ಸೇರುವಂತೆ ಆಮಿಷ ಒಡ್ಡಿತ್ತು.ವರ್ಗಾವಣೆಯಾಗಲು ಇಷ್ಟವಿಲ್ಲದಿದ್ದರೆ ಅತೀ ಕಡಿಮೆ ಮೊತ್ತದ ಸಪರೇಶನ್ ಪ್ಯಾಕೇಜ್ ಆಮಿಷವನ್ನೂ ಒಡ್ಡಿತ್ತು.
ಈ ಸಂದರ್ಭ ಇಂಟಕ್ ಸಂಘಟನೆಯನ್ನು ಭೇಟಿ ಮಾಡಿದ ಕಾರ್ಮಿಕರು ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ವಿನಂತಿಸಿದ್ದರು.

ಶನಿವಾರ ಸುಜ್ಲಾನ್ ಕಾರ್ಮಿಕ ಸಂಘಟನೆಯ ಮಹಾಸಭೆಯು ಪಡುಬಿದ್ರಿಯ ಸುಜಾತಾ ಆಡಿಟೋರಿಯಮ್‍ನ ಜಿಅರ್ ಸುಂದರಮ್ ವೇದಿಕೆಯಲ್ಲಿ ನಡೆದ ಸಂದರ್ಭ ಇಂಟಕ್ ಧುರೀಣರು ಪಾಲ್ಗೊಂಡು ಕಾರ್ಮಿಕರಿಗೆ ಧೈರ್ಯ ತುಂಬಿದರು.

ದಕ ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ ಶೆಟ್ಟಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ,ಕಳೆದ 12 ವರ್ಷಗಳಿಂದ ಸುಜ್ಲಾನ್ ಏಳಿಗೆಗಾಗಿ ದುಡಿದ 326 ಕಾರ್ಮಿಕರನ್ನು ದುರುದ್ದೇಶಪೂರಿತವಾಗಿ ವರ್ಗಾವಣೆ ಮಾಡಲಾಗಿದೆ.ಕಂಪನಿಯು ಹತ್ತೂವರೆ ಸಾವಿರ ಕೋಟಿ ರೂ.ನಷ್ವೆಂದು ಹೇಳುತ್ತಿದೆ.ಆರಂಭದಲ್ಲಿ ಬೇಕಾದಷ್ಟು ಲಾಭ ಮಾಡಿಕೊಂಡ ಕಂಪನಿಯು ಆವಾಗ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡಲಿಲ್ಲ.ಈಗ ನಷ್ಟವಾದಾಗ ಕಾರ್ಮಿಕರೇಕೆ ಬಲಿಪಶುವಾಗಬೇಕು.ಕಂಪನಿಯು ಈಗಾಗಲೇ ಭೂಮಾಫಿಯಾ ಹುನ್ನಾರ ನಡೆಸುತ್ತಿದೆ.ಬೇರೆಯವರಿಗೆ ಜಾಗ ಮಾರಾಟಕ್ಕೆ ಮುಂದಡಿಯಿಟ್ಟಿದೆ.ಅಲ್ಲಿ ಬೇರೆ ಘಟಕ ಬಂದಲ್ಲಿ ಇದೇ ಕಾರ್ಮಿಕರಿಗೆ ಉದ್ಯೋಗದ ಭರವಸೆ ನೀಡಬೇಕು.ತಪ್ಪಿದಲ್ಲಿ ಜೈಸಲ್ಮೇರ್‍ಗೆ ಹೋಗಲು ಅವರು ಕೇಳಿಕೊಂಡ ಬೇಡಿಕೆಗಳನ್ನು ಈಡೇರಿಸಬೇಕು.ಇಲ್ಲದಿದ್ದರೆ ಕಾರ್ಮಿಕ ಸಂಘಟನೆಗಳೊಂದಿಗೆ ಎಲ್ಲಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಘಟಕದೆದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಜೈಸಲ್ಮೇರ್‍ಗೆ ಹೋಗುವ ತನಕ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡಬೇಕು.ಡಿ.ಒಂದರಂದು ವೇತನ ಪಾವತಿಯಾಗದಿದ್ದಲ್ಲಿ ಡಿ.7ರವರೆಗೆ ಕಾದು ಡಿಸೆಂಬರ್ 9ರಂದು ಘಟಕದ ಮುಂಭಾಗದಲ್ಲಿ ತೀವ್ರ ಮುಷ್ಕರ ಆರಂಭಿಸಲಾಗುವುದು ಎಂದವರು ಎಚ್ಚರಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ ಮಾತನಾಡಿ,ಲ್ಯಾಂಡ್ ಮಾಫಿಯಾದ ಬೇಳೆ ಬೇಯಿಸಿಕೊಳ್ಳಲು ಸುಜ್ಲಾನ್ ಹುನ್ನಾರ ನಡೆಸಿದೆ.ನಾವು ಯಾವುದೇ ದಬ್ಬಾಳಿಕೆ ಬಗ್ಗಲಾರೆವು.ನಮ್ಮ ಹೊಟ್ಟೆಪಾಡಿಗಾಗಿ ನಿರ್ಣಾಯಕ ಹೋರಾಟ ನಡೆಸಲು ಸಿದ್ಧರಿದ್ದೇವೆ.ವಾರದೊಳಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್ ಮಾತನಾಡಿ,ಸಾಮೂಹಿಕವಾಗಿ ಶಾಶ್ವತ ಕಾರ್ಮಿಕರನ್ನು ದೂರದೂರಿಗೆ ವರ್ಗಾಯಿಸಿ ಇಲ್ಲಿ ಕಾಂಟ್ರಾಕ್ಟ್ ನೆಲೆಯಲ್ಲಿ ಈಗಾಗಲೇ ಬೇರೆ ಕಾರ್ಮಿಕರನ್ನು ಕರೆತರಲಾಗಿದೆ.ಇಲ್ಲಿ ಉತ್ಪಾದನೆ ಇಲ್ಲವಾದರೆ ಕಾಂಟ್ರಾಕ್ಟ್ ಕಾರ್ಮಿಕರ ಅವಶ್ಯಕತೆ ಇದೆಯೆ?.ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದಲ್ಲಿ ಜೈಸಲ್ಮೇರ್‍ಗೆ ಹೋಗಲು ತಯಾರಿದ್ದಾರೆ.ತಪ್ಪಿದಲ್ಲಿ ಅವರನ್ನು ಇಲ್ಲಿಯೇ ನಿಯುಕ್ತಿಗೊಳಿಸಬೇಕು ಎಂದರು.

ಇಂಟಕ್ ರಾಜ್ಯ ಸಂಘಟನೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ,ಯೂನಿಯನ್‍ಗೆ ಮಾಹಿತಿ ನೀಡದೆ ವರ್ಗಾವಣೆ ಮಾಡಲಾಗಿದೆ.ಸರಕಾರ ಅವರಿಗೆ ಜಾಗ ನೀಡಿದ್ದು ಉದ್ಯೋಗವಕಾಶ ಕಲ್ಪಿಸಲು.ಆದರೆ ಅವರು ಭೂಮಾಫಿಯಾ ಮಾಡುತ್ತಿದ್ದಾರೆ.ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಲು ನಾವು ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ.ಕಂಪನಿಯು ಯಾವುದೆ ಒಪ್ಪಂದ ಮಾಡುವುದಿದ್ದಲ್ಲಿ ಲೇಬರ್ ಕಮಿಷನ್ ಮತ್ತು ಯೂನಿಯನ್ ಮೂಲಕವೇ ಮಾಡಬೇಕೆಂದರು.

ಕಾರ್ಮಿಕರ ವಿವಾದ ಪರಿಹರಿಸಲು ಮಧ್ಯಪ್ರವೇಶಿಸುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ,ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.