ಸಿಬ್ಬಂದಿಗಳ ಕೊರತೆಯ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ

ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಒತ್ತಡ,108 ಅಂಬುಲೆನ್ಸ್‍ಗೆ ಬೇಡಿಕೆ

ಪಡುಬಿದ್ರಿ 2003ರಿಂದ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಲು ಸರಕಾರಕ್ಕೆ ಮನವಿಗಳನ್ನು ಮಾಡುತ್ತಾ ಬಂದಿರುವ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲವೂ ಸರಿ ಇದ್ದರೂ ಸಿಬ್ಬಂದಿಗಳ ಕೊರತೆಯಿಂದ ಜನಸಾಮಾನ್ಯರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ.

1962ರಲ್ಲಿ ಕಟ್ಟಿಸಲ್ಪಟ್ಟ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಪತ್ರೆಗೆ ನಿತ್ಯ 80ರಿಂದ 100ರಷ್ಟು ಹೊರರೋಗಿಗಳು ಬರುತ್ತಾರೆ.ನಿಯಮದಂತೆ 30 ಸಿಬ್ಬಂದಿಗಳು ಇರಬೇಕಿದ್ದು,ಸದ್ಯ 11 ಮಂದಿ ಸಿಬ್ಬಂದಿಗಳಿಂದ ಆಸ್ಪತ್ರೆ ಕಾರ್ಯಾಚರಿಸುತ್ತಿದೆ.ಮೂವರು ಹೊರಗುತ್ತಿಗೆ ಆಧಾರದಲ್ಲಿ ಸೇರ್ಪಡೆಗೊಳಿಸಲಾಗಿದೆ.


ಇಬ್ಬರು ವೈದರಿರಬೇಕಿದ್ದು ಒಬ್ಬರೇ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.ಫಾರ್ಮಾಸಿಸ್ಟ್ ಹುದ್ದೆ ಖಾಲಿ ಇದೆ.ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಖಾಲಿ ಇದೆ.ಡೆಲಿವರಿ ಸ್ಟಾಫ್ ಹುದ್ದೆ ಖಾಲಿ ಇರುವ ಕಾರಣ ಇಲ್ಲಿ ಯಾವುದೇ ಹೆರಿಗೆಗಳನ್ನು ಮಾಡುತ್ತಿಲ್ಲ.ಬಂದವರನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.ಈ ಹಿಂದೆ ತಿಂಗಳಿಗೆ 8ರಿಂದ 10 ಹೆರಿಗೆಯಾಗುತ್ತಿತ್ತು.

ಹಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆ ಖಾಲಿ ಇದೆ.4 ಕಿರಿಯ ಸಹಾಯಕರು ಇರಬೇಕಿದ್ದು ಒಬ್ಬರು ಮಾತ್ರ ಇದ್ದಾರೆ.ಕ್ಲಾರ್ಕ್ ಹುದ್ದೆ ಖಾಲಿ ಇದೆ.ಗ್ರೂಪ್ ಡಿ ನೌಕರರು 3 ಇರಬೇಕಿದ್ದು ಇಬ್ಬರನ್ನು ಹೊರಗುತ್ತಿಗೆ ಆಧಾರದಲ್ಲಿ ಸೇರ್ಪಡೆಗೊಳಿಸಲಾಗಿದೆ.ಭದ್ರತಾ ಸಿಬ್ಬಂದಿಯೂ ಇಲ್ಲ.

ಕುಡಿಯುವ ನೀರಿನ ಸಮಸ್ಯೆಯನ್ನು ಶಾಸಕರ ಅನುದಾನದಿಂದ ಕೊಳವೆಬಾವಿ ನಿರ್ಮಿಸುವ ಮೂಲಕ ಬಗೆಹರಿಸಲಾಗಿದೆ.ಔಷಧ ಕೊರತೆ ಇಲ್ಲ.ಕೊರತೆಯಾದಲ್ಲಿ ಖರೀದಿಸಲು ಇಲಾಖಾ ಅನುಮತಿ ದೊರಕಿದೆ.
ಶೀತಲೀಕೃತ ಶವಾಗಾರದ ಅವಶ್ಯಕತೆ: ಅತೀ ಹೆಚ್ಚು ಅಪಪಘಾತಗಳು ಸಂಭವಿಸುವ ಕೇಂದ್ರವಾಗಿರುವ ಪಡುಬಿದ್ರಿಯ ಆರೋಗ್ಯ ಕೇಂದ್ರಕ್ಕೆ ಶೀತಲೀಕೃತ ಶವಾಗಾರದ ತುರ್ತು ಅವಶ್ಯಕತೆ ಇದೆ.ಪ್ರತೀ ಬಾರಿ ಶವದ ಮಹಜರು ನಡೆಸಿದ ಬಳಿಕ ಶವವನ್ನು ಕಾಪಿಡಲು ದೂರದೂರಿಗೆ ಕೊಂಡೊಯ್ಯಬೇಕಿದೆ.ಈ ಬಗ್ಗೆ ಸರಕಾರ ಮತ್ತು ಖಾಸಗಿಯವರ ಮೂಲಕ ಶೀತಲೀಕೃತ ಶವಾಗಾರ ನಿರ್ಮಿಸಲು ನಿರ್ಧರಿಸಲಾಗಿತ್ತಾದರೂ ಯೋಜನೆ ಇನ್ನೂ ನೆನೆಗುದುಗೆ ಬಿದ್ದಿದೆ.

108 ಅಂಬುಲೆನ್ಸ್ ಅಗತ್ಯ: ಪಡುಬಿದ್ರಿ ಸುತ್ತಮುತ್ತು ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತದೆ.ಹಾಗಾಗಿ ಪಡುಬಿದ್ರಿಗೊಂದು 108 ಅಂಬುಲೆನ್ಸ್ ನೀಡಬೇಕೆಂದು ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ನಾಗರಿಕರು ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಬೇಡಿಕೆ ಮಂಡಿಸುತ್ತಾ ಬಂದಿದ್ದಾರೆ.ಆದರೆ ಮೂಲ್ಕಿ ಮತ್ತು ಕಾಪುವಿನಲ್ಲಿ 108 ಅಂಬುಲೆನ್ಸ್ ಇರುವ ಕಾರಣವೊಡ್ಡಿ ಬೇಡಿಕೆಯನ್ನು ನಿರಾಕರಿಸುತ್ತಾ ಬರಲಾಗಿದೆ.ಆದರೆ ಇಲ್ಲಿನ ಗಂಭೀರ ಸಮಸ್ಯೆಯನ್ನು ಗಮನಹರಿಸಿ ಶೀಘ್ರ ಅಂಬುಲೆನ್ಸ್ ನೀಡಬೇಕೆಂದು ಸ್ಥಳೀಯರ ಬೇಡಿಕೆಯಾಗಿದೆ.

ಸಮುದಾಯ ಆರೋಗ್ಯ ಕೇಂದ್ರದ  ಬೇಡಿಕೆ: ಸುಮಾರು 40 ಸಾವಿರ ಜನಸಂಖ್ಯೆಯ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 0 ಉಪಕೇಂದ್ರಗಳಿವೆ.ಸುತ್ತಮುತ್ತ ಬೃಹತ್ ಕೈಗಾರಿಕೆಗಳೂ ಕಾರ್ಯಾಚರಿಸುತ್ತಿವೆ.ಇಲ್ಲಿನ ಒತ್ತಡವನ್ನು ಪರಿಗಣಿಸಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು 2003ರಿಂದ ಪ್ರಸ್ತಾವನೆಗಳನ್ನು ಕಳಿಸುತ್ತಾ ಬರಲಾಗಿದೆ.ಇಲ್ಲಿಗೆ ಭೇಟಿ ನೀಡಿದ ಜನಪ್ರತಿನಿಧಿಗಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ.ಆದರೆ ಈವರೆಗೂ ಬೇಡಿಕೆ ಈಡೇರಿಲ್ಲ.

ಹಲವು ಪ್ರಶಸ್ತಿ ಪಡೆದ ಆಸ್ಪತ್ರೆ: ಇಲ್ಲಿನ ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್‍ರವರ ಅತ್ಯತ್ತಮ ಸೇವೆಯನ್ನು ಪರಿಗಣಿಸಿ 2017ರಲ್ಲಿ ರಾಜ್ಯ ಸರಕಾರ ಕೊಡಮಾಡಿದ ಜಿಲ್ಲಾಮಟ್ಟದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ದೊರಕಿತ್ತು.

ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಅತೀ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದ್ದು ಅರ್ಹವಾಗಿ 2016-17ರಲ್ಲಿ ಸ್ವಚ್ಛತೆ,ಸಮಗ್ರ ನಿರ್ವಹಣೆ,ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನೀಡಲಾಗುವ ಜಿಲ್ಲಾಮಟ್ಟದ ಕಾಯಕಲ್ಪ ಪ್ರಶಸ್ತಿ ಪಡೆದಿದ್ದರೆ,2017-18ರಲ್ಲಿ ದ್ವಿತೀಯ ಪ್ರಶಸ್ತಿ ಗಳಿಸಿದ ಹಿರಿಮೆ ಹೊಂದಿದೆ.

ಅನಿಸಿಕೆ ಸರಕಾರದ ಕಾರ್ಯಕ್ರಮಗಳೆನ್ನವನ್ನೂ ಕ್ರಮಬದ್ಧವಾಗಿ ನಡೆಸಲಾಗುತ್ತಿದೆ.ಸಿಬ್ಬಂದಿಗಳ ಕೊರತೆಯಿಂದ ಒತ್ತಡ ಜಾಸ್ತಿಯಾಗಿದೆ.ಸ್ವಲ್ಪವಾದರೂ ಭರ್ತಿ ಮಾಡಿದಲ್ಲಿ ಸಹಕಾರಿಯಾಗಲಿದೆ.ಕಾಲಕಾಲಕ್ಕೆ ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನು ನಡೆಸಿ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗಿದ್ದು ಸದಸ್ಯರಿಂದ ಉತ್ತಮ ಬೆಂಬಲ ದೊರಕಿದೆ.
-ಡಾ.ಬಿ.ಬಿ.ರಾವ್,ವೈದ್ಯಾಧಿಕಾರಿ,ಪ್ರಾಥಮಿಕ ಆರೋಗ್ಯ ಕೇಂದ್ರ,ಪಡುಬಿದ್ರಿ.

ಪಡುಬಿದ್ರಿಗೆ ಅತ್ಯಗತ್ಯವಾಗಿ 108 ಅಂಬುಲೆನ್ಸ್ ಬೇಕೇಬೇಕು.ಅಂಬುಲೆನ್ಸ್ ಇಲ್ಲದ ಕಾರಣ ಅತೀ ಹೆಚ್ಚು ಸಮಸ್ಯೆಗಳಾಗಿವೆ.ಅಪಘಾತಗಳು ಹೆಚ್ಚು ಸಂಭವಿಸುವ ಕಾರಣ ಆಸ್ಪತ್ರೆಯ ಆಧೂನೀಕರಣ ಸಹಿತ ಉತ್ತಮ ಸೇವೆ ಬೇಕು.ಮಂಗಳೂರು-ಉಡುಪಿ ನಡುವೆ ಪಡುಬಿದ್ರಿ ಅತೀ ಹೆಚ್ಚು ಜನ ಒತ್ತಡದ ಕೇಂದ್ರವಾಗಿದೆ.
-ಬಾಬು ಪೂಜಾರಿ,ಪತ್ರಿಕಾ ವಿತರಕರು,ಪಡುಬಿದ್ರಿ

 

ಎಚ್ಕೆ ಹೆಜ್ಮಾಡಿ,ಪಡುಬಿದ್ರಿ