ಸಾಸ್ತಾನ ಟೊಲ್ ವಿನಾಯಿತಿಯಂತೆ ಹೆಜಮಾಡಿ ಟೋಲ್‍ನಲ್ಲೂ ಪಡುಬಿದ್ರಿ ಜಿಪಂ ವ್ಯಾಪ್ತಿಗೆ ವಿನಾಯಿತಿಗೆ ಪ್ರಯತ್ನ

ಸಾಸ್ತಾನ ಟೊಲ್ ವಿನಾಯಿತಿಯಂತೆ ಹೆಜಮಾಡಿ ಟೋಲ್‍ನಲ್ಲೂ ಪಡುಬಿದ್ರಿ ಜಿಪಂ ವ್ಯಾಪ್ತಿಗೆ ವಿನಾಯಿತಿಗೆ ಪ್ರಯತ್ನ

ಪಡುಬಿದ್ರಿಯಲ್ಲಿ ಕರವೇ ಉಪವಾಸ ನಿರತರಿಗೆ ಸಚಿವೆ ಡಾ.ಜಯಮಾಲಾ ಭರವಸೆ

ಪಡುಬಿದ್ರಿ: ಸಾಸ್ತಾನದಲ್ಲಿ ಅಲ್ಲಿನ ಜಿಪಂ ವ್ಯಾಪ್ತಿಯ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿ ಲಭಿಸಲು ತಾನೇ ಮುತುವರ್ಜಿ ವಹಿಸಿ ಅಲ್ಲಿನ ಜನತೆಗೆ ನ್ಯಾಯ ಒದಗಿಸಿ ಕೊಟ್ಟಿದ್ದು,ಪಡುಬಿದ್ರಿ ಜಿಪಂ ಕ್ಷೇತ್ರ ವ್ಯಾಪ್ತಿಯ ವಾಹನಗಳಿಗೂ ಹೆಜಮಾಡಿ ಟೋಲ್‍ನಲ್ಲಿ ಸುಂಕ ವಿನಾಯಿತಿಗಾಗಿ ರಾಜ್ಯ ಸರಕಾರದೊಂದಿಗೆ ಚರ್ಚಿಸಿ ಕೂಡಲೇ ತಮ್ಮ ಹೋರಾಟಕ್ಕೆ ಜಯ ಲಭಿಸುವಂತೆ ಪ್ರಯತ್ನಗಳನ್ನು ನಡೆಸುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಪಡುಬಿದ್ರಿಯ ಕರವೇ ಟೋಲ್ ವಿರುದ್ಧದ ಧರಣಿ ನಿರತರಿಗೆ ಭರವಸೆ ನೀಡಿದ್ದಾರೆ.

ಟೋಲ್ ವಿನಾಯಿತಿ ಬಗ್ಗೆ ಜಿಲ್ಲಾಡಳಿತದ ಸಭೆಯಲ್ಲಿ ಯಾವುದೇ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಪಡುಬಿದ್ರಿಯ ಟೆಂಪೋ ನಿಲ್ದಾಣದಲ್ಲಿ ಕರವೇ ಪದಾಧಿಕಾರಿಗಳು ಅಮರಣಾಂತ ಉಪವಾಸ ಸತ್ಯಾಗ್ರಹ ಪುನರಾರಂಭಿಸಿದ್ದು,ಉಡುಪಿ ಜಿಲ್ಲಾ ಭೇಟಿಗೆ ಆಗಮಿಸಿದ್ದ ಡಾ.ಜಯಮಾಲಾ ಉಪವಾಸ ನಿರತರನ್ನು ಭೇಟಿ ಮಾಡಿದ್ದರು.

ಗುರುವಾರದಿಂದ ಪುನರಪಿ ಆರಂಭಿಸಿರುವ ಆಮರಣಾಂತ ಉಪವಾಸವನ್ನು ಈ ಕೂಡಲೇ ಹಿಂಪಡೆಯುವಂತೆ ಡಾ.ಜಯಮಾಲಾ ಅಮರಣಾಂತ ಉಪವಾಸ ನಿರತ ಕರವೇ ಪದಾಧಿಕಾರಿಗಳಿಗೆ ಈ ಸಂದರ್ಭ ಅವರು ಮನವಿ ಮಾಡಿ ಅತೀ ಶೀಘ್ರ ತಮ್ಮ ಬೇಡಿಕೆ ಈಡೇರಿಕೆಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಜಿಲ್ಲೆಯ ಒಂದೆಡೆ ಸ್ಥಳೀಯರಿಗೆ ವಿನಾಯಿತಿ ಹಾಗೂ ಮಗದೊಂದೆಡೆ ವಿನಾಯಿತಿಯನ್ನು ನೀಡದಿರುವುದು ಸರಿಯಲ್ಲ.ಸಾಸ್ತಾನದಂತೆಯೇ ಹೆಜಮಾಡಿ ಟೋಲ್‍ನಲ್ಲಿ ಪಡುಬಿದ್ರಿ ಜನತೆಗೂ ವಿನಾಯಿತಿಯನ್ನು ಒದಗಿಸಬೇಕು.ನವಯುಗ ನಿರ್ಮಾಣ ಕಂಪೆನಿ ಕಾಮಗಾರಿ ಪಡುಬಿದ್ರಿಯಲ್ಲಿ ತೀರಾ ಹಿಂದುಳಿದಿದ್ದು ಟೋಲ್ ಅಧಿಕಾರಿಗಳು ಪಡುಬಿದ್ರಿ ಜನತೆಗೆ ವಿನಾಯಿತಿಯನ್ನು ನೀಡಲಿದ್ದೇವೆ ಎಂದಿದ್ದರೂ ಪ್ರತೀ ಬಾರಿಯೂ ಪಡುಬಿದ್ರಿ ಜಿಪಂ ಕ್ಷೇತ್ರದ ವಾಹನಗಳು ಟೋಲ್‍ಗೇಟ್ ದಾಟುವ ವೇಳೆ ಸಾಮಾನ್ಯವಾಗಿ ಮಾತಿನ ಚಕಮಕಿ, ವಿನಾಯಿತಿಯನ್ನು ನೀಡದ ಕ್ಷಣಗಳು ಎದುರಾಗುತ್ತಿವೆ ಎಂಬುದನ್ನು ಪ್ರತಿಭಟನಕಾರರು ಸಚಿವೆ ಡಾ.ಜಯಮಾಲಾ ಅವರಿಗೆ ವಿವರಿಸಿದರು.

ಸಚಿವರ ಮನವಿಗೆ ಒಪ್ಪಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಗುರುವಾರದಿಂದ ಆರಂಭಿಸಲಾದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದರು.

ಸ್ಥಳೀಯರಿಗೆ ಟೋಲ್ ವಿನಾಯಿತಿ ಲಭಿಸುವವರೆಗೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರಿಸಿರುವುದಾಗಿಯೂ ಪಡುಬಿದ್ರಿ ನಾಗರಿಕ ಸಮಿತಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್,ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹೆಜಮಾಡಿ,ತಾಪಂ ಸದಸ್ಯ ದಿನೇಶ್ ಕೋಟ್ಯಾನ್,ಗ್ರಾಪಂ ಸದಸ್ಯ ಹಸನ್ ಬಾವ,ನವೀನ್ ಎನ್.ಶೆಟ್ಟಿ,ಅನ್ಸಾರ್ ಅಹಮದ್,ಸಚಿವರ ಪತ್ರಿಕಾ ಕಾರ್ಯದರ್ಶಿ ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು.