ಸಾರ್ವಜನಿಕರು ಸರಿಯಾಗಿ ಕಾನೂನು ಪಾಲಿಸದ ಕಾರಣ ಸಾರಿಗೆ ನಿಯಮ ತಿದ್ದಪಡಿ

ಪಡುಬಿದ್ರಿ: ಸಾರ್ವಜನಿಕರು ಸರಿಯಾಗಿ ಕಾನೂನು ಪಾಲಿಸದೆ ಹಲವಾರು ಪ್ರಾಂಣಾತಿಕ ಅಪಘಾತಗಳು ನಡೆಯುತ್ತಿರುವ ಕಾರಣದಿಂದಲೇ ಸಾರಿಗೆ ನಿಯಮಕ್ಕೆ ತಿದ್ದುಪಡಿ ತರಲಾಗಿದೆ ಎಂದು ಪಡುಬಿದ್ರಿ ಠಾಣಾ ಪ್ರೊಬೆಷನರಿ ಎಸ್‍ಐ ಸದಾಶಿವ ರಾ ಗವರೋಜಿ ಹೇಳಿದರು.

ಹೆಜಮಾಡಿಯ ನವಯುಗ್ ಉಡುಪಿ ಟೋಲ್‍ವೇಯಲ್ಲಿ ಶನಿವಾರ ನಡೆದ 31ನೇ ರಸ್ತೆ ಸುರಕ್ಷತಾ ಸಪ್ತಾಹ-2019 “ಸಡಕ್ ಸುರಕ್ಷಾ-ಜೀವನ್ ರಕ್ಷಾ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇದೀಗ ಸಂಚಾರಿ ಅಧಿನಿಯಮ-2019 ಸೆಪ್ಟೆಂಬರ್ 1ರಂದು ಜಾರಿಯಾಗಿದ್ದು, ವಾಹನ ಚಾಲಕರು ಕಟ್ಟುನಿಟ್ಟಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಕಟ್ಟುನಿಟ್ಟಾಗಿ ಹೆಲ್ಮೆಟ್ ಧರಿಸಲೇಬೇಕು ಎಂದವರು ಹೇಳಿದರು. ಕಳೆದ 4 ತಿಂಗಳಲ್ಲಿ ಪಡುಬಿದ್ರಿ ವ್ಯಾಪ್ತಿಯಲ್ಲಿ 10-12 ದ್ವಿಚಕ್ರ ವಾಹನ ಅಪಘಾತಗಳನ್ನು ಕಣ್ಣಾರೆ ಕಂಡಿದ್ದು, ಹೆಲ್ಮೆಟ್ ಧರಿಸದೆ ಪ್ರಾಣಾಂತಿಕ ಅಪಘಾತಗಳನ್ನು ಕಂಡಿದ್ದೇನೆ. ಕೆಲವೊಂದು ಸಂದರ್ಭಗಳಲ್ಲಿ ಹೆಲ್ಮೆಟ್ ಧರಿಸಿದ್ದರೆ ಪ್ರಾಣಾಪಾಯಾವಾಗುತ್ತಿರಲಿಲ್ಲ ಎಂದವರು ಹೇಳಿದರು.

ಜ.11ರಿಂದ 17ರ ತನಕ ನಡೆಯಲಿರುವ ರಸ್ತೆ ಸುರಕ್ಷತಾ ಸಪ್ತಾಹವನ್ನು ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ ಬಿ. ಮಾತನಾಡಿ, ಕಾನೂನಗಳನ್ನು ಸ್ವಯಂ ಪಾಲಿಸಿದಲ್ಲಿ ಅಪಘಾತ ನಿಯಂತ್ರಣವಾಗುವುದು ಖಚಿತ. ವಾಹನ ಚಾಲನಾ ಸಂದರ್ಭ ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಸಲ್ಲದು. ಅದೇ ರೀತಿ ಅಪ್ರಾಪ್ತರಿಗೆ ಯಾವುದೇ ಕಾರಣಕ್ಕೂ ವಾಹನ ಚಾಲನೆಗೆ ಅವಕಾಶ ನೀಡಬಾರದು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಕಳೆದ 7 ತಿಂಗಳಲ್ಲಿ ಪಡುಬಿದ್ರಿ ಭಾಗದಲ್ಲಿ ಸಾರಿಗೆ ನಿಯಮ ಪಾಲಿಸದ ವಾಹನಗಳಿಂದ ರೂ.14 ಲಕ್ಷ 86 ಸಾವಿರ ದಂಡ ಪಡೆಯಲಾಗಿದೆ ಎಂದರು.

ಎನ್‍ಎಚ್‍ಎ ಟೆಕ್ನಿಕಲ್ ಮ್ಯಾನೇಜರ್ ರಮೇಶ್ ಬಾಬು ಮುಖ್ಯ ಅತಿಥಿಯಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಂಡ ಕಟ್ಟುವುದು ಫ್ಯಾಶನ್ ಎಂದು ತಿಳಿದಿದ್ದಾರೆ. ವಾಹನ ಚಾಲನಾ ಸಂದರ್ಭ ನಮ್ಮ ಕುಟುಂಬ ಸದಸ್ಯರನ್ನು ಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು. ಅಜಾಗರೂಕತೆಯ ವಾನಹ ಚಾಲನೆ ಸಲ್ಲದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರಿಗೂ ಅವಶ್ಯವಾಗಿ ಮಾಹಿತಿ ನೀಡಬೇಕಾಗಿದೆ. ಗ್ರಾಮ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಮಾಹಿತಿ ನೀಡಲು ಗ್ರಾಪಂ ಸಹಕಾರ ನೀಡಲಿದೆ ಎಂದರು.

ಎನ್‍ಎಚ್‍ಎ ಇನ್‍ಡಿಪೆಂಡೆಂಟ್ ಇಂಜಿನಿಯರ್ ರಾಮಚಂದ್ರನ್, ಪಡುಬಿದ್ರಿ ಎಎಸ್‍ಐ ಸುದೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಹೆಜಮಾಡಿ, ಸಾಸ್ತಾನ ಮತ್ತು ತಲಪಾಡಿ ನವಯುಗ್ ಟೋಲ್‍ವೇಗಳಲ್ಲಿ ಏಕಕಾಲದಲ್ಲಿ ಸಪ್ತಾಹವನ್ನು ಆರಂಭಿಸಲಾಗಿದ್ದು, ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಭಿತ್ತಿಪತ್ರಗಳನ್ನು ವಿತರಿಸಲಾಯಿತು. ಮೂರೂ ಟೋಲ್‍ವೇಗಳ ಸುತ್ತಮುತ್ತ ಒಂದು ವಾರ ಕಾಲ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ನವಯುಗ್ ಟೋಲ್ ಮ್ಯಾನೇಜರ್ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.