ಸಾಮಾಜಿಕ ಅಸಮತೋಲನ ನಿವಾರಿಸದಿದ್ದರೆ ಗಂಡಾಂತರ ಖಚಿತ-ಕೋಟ ಶ್ರೀನಿವಾಸ ಪೂಜಾರಿ

ಮೂಲ್ಕಿ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಿಷಯಗಳಲ್ಲಿ ಅಸಮತೋಲನ ಕಂಡುಕೊಳ್ಳಲಾಗುತ್ತಿದ್ದು, ಸಾಮಾಜಿಕ ಅಸಮತೋಲನ ನಿವಾರಿಸದಿದ್ದಲ್ಲಿ ಭೀಕರ ಗಂಡಾಂತರ ಕಾದಿದೆ ಎಂದು ಮುಜರಾಯಿ, ಬಂದರು, ಮೀನುಗಾರಿಕೆ, ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮೂಲ್ಕಿ ವಿಜಯಾ ಕಾಲೇಜಿನ ಅರ್ಪಣಾ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಸೇವಾ ಯೋಜನಾ ಘಟಕದ 3 ದಿನಗಳ “ಸುವರ್ಣ ವೈಭವ-2019″ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಎನ್‍ಎಸ್‍ಎಸ್‍ನಲ್ಲಿ ಭಾಗವಹಿಸುವುದರಿಂದ ಸಮಾಜದ ಹೊರ ಪ್ರಪಂಚ ಅರಿವು ಮೂಡಲು ಸಾಧ್ಯ. ಟಿ.ಎ.ಪೈಯಂತಹ ನಾಯಕರು ಐವತ್ತು ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಭದ್ರ ಬುನಾದಿಯನ್ನು ಹಾಕಿದ್ದು ಅದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಅವರು ಹೇಳಿದರು.

ಎಳೆಯ ಮನಸ್ಸು ಎನ್‍ಎಸ್‍ಎಸ್ ಮೂಲಕ ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಂಡಾಗ 4 ಗೋಡೆಗಳ ಆಚೆಗಿನ ಸತ್ಯ ವಿಷಯ ತಿಳಿಯುತ್ತದೆ. ರಾಷ್ಟ್ರೀಯತೆ ಬಗ್ಗೆ ಎದ್ದು ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದ ಅವರು ಅವಿಭಜಿತ ದಕ ಜಿಲ್ಲೆಯಲ್ಲಿ ಶೇ.99ರಷ್ಟು ಅಸ್ಪ್ರಶ್ಯತೆ ಇಲ್ಲ ಎಂಬುದನ್ನು ರಾಜ್ಯದಾದ್ಯಂತ ಸುತ್ತಾಡಿದ ಬಳಿಕ ಕಂಡುಕೊಂಡೆ. ಅಲ್ಲದೆ ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ನಮ್ಮ ಕರಾವಳಿ ಜಿಲ್ಲೆ ರಾಷ್ಟ್ರಕ್ಕೇ ಮಾದರಿಯಾಗಿದೆ ಎಂದರು.

ಕಾಲೇಜಿನ ವಾರ್ಷಿಕ ಸಂಚಿಕೆ “ವಿಜಯಾ”ವನ್ನು ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಕಾಲೇಜಿನ ಸುವರ್ಣ ವೈಭವ ಸಮಿತಿಯ ಗೌರವಾಧ್ಯಕ್ಷ ಸುಹಾಸ್ ಹೆಗ್ಡೆ ವಹಿಸಿದ್ದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭಾಶಂಸನೆಗೈದರು.

ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕಾಲೇಜಿನ ಸುವರ್ಣ ವೈಭವ ಸಮಿತಿಯ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಾರ್ಯಾಧ್ಯಕ್ಷ ಪ್ರಾಚಾರ್ಯ ಡಾ. ಕೆ. ನಾರಾಯಣ ಪೂಜಾರಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ವಿಜಯಾ ಕುಮಾರಿ, ಎನ್‍ಎಸ್‍ಎಸ್ ಯೋಜನಾಧಿಕಾರಿ ಜಿತೇಂದ್ರ ವಿ ರಾವ್, ಕಾರ್ಯದಶಿಗಳಾದ ಪ್ರಜ್ಞೇಶ್ ಭಟ್, ಅನುಷಾ ದಿವಾಣ ಮುಖ್ಯ ಅತಿಥಿಗಳಾಗಿದ್ದರು.
ಜಿತೇಂದ್ರ ವಿ ರಾವ್ ಸ್ವಾಗತಿಸಿ ಪ್ರಸ್ತಾವಿಸಿದರು. ಡಾ.ವಿಜಯಾ ಕುಮಾರಿ ವಂದಿಸಿದರು. ಉಪನ್ಯಾಸಕಿ ಅರುಣಾ ನಿರೂಪಿಸಿದರು.
ಈ ಸಂದರ್ಭ ವಿವಿಧ ಕಾಲೇಜುಗಳ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗಾಗಿ ನಡೆದ ನಾಯಕತ್ವ ತರಬೇತಿ ಶಿಬಿರವನ್ನು ಕರ್ನಾಟಕ ಬ್ಯಾಂಕ್ ಶಾಖಾ ಪ್ರಬಂಧಕ ಮಂಜುನಾಥ್ ಉದ್ಘಾಟಿಸಿದರು.

ರಾಷ್ಟ್ರೀಯ ಏಕತೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ, ನಿಮ್ಮೊಳಗಿನ ನಾಯಕತ್ವ ಕುರಿತು ಜೇಸಿಐ ರಾಷ್ಟ್ರೀಯ ತರಬೇತುದಾರ ಧೀರೇಂದ್ರ ಜೈನ್, ಸಂವಹನ ಕೌಶಲ್ಯ ಕುರಿತು ಜೇಸಿಐ ರಾಷ್ಟ್ರೀಯ ತರಬೇತುದಾರರಾದ ರಾಜೇಶ್ವರೀ ಡಿ.ಶೆಟ್ಟಿ ತರಬೇತಿ ನೀಡಿದರು.

ಕ್ಯಾ: ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸುವರ್ಣ ವೈಭವ-2019ನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.