ಸಹಕಾರಿ ಕ್ಷೇತ್ರದಿಂದ ಮಹಿಳೆಯರಿಗೆ ರೂ.5 ಲಕ್ಷದವರೆಗೆ ಬಡ್ಡಿರಹಿತ ಸಾಲ-ಡಾ.ಎಮ್.ಎನ್.ರಾಜೇಂದ್ರ ಕುಮಾರ್

ಪಡುಬಿದ್ರಿಯಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ 2ನೇ ದಿನದ ಕಾರ್ಯಕ್ರಮ ಉದ್ಘಾಟನೆ

ಪಡುಬಿದ್ರಿ: ಸಹಕಾರಿ ಕ್ಷೇತ್ರದ ವತಿಯಿಂದ ಮಹಿಳಾ ಸಬಲೀಕರಣದ ಮಹತ್ವದ ಉದ್ದೇಶವಿಟ್ಟುಕೊಂಡು ಈ ಬಾರಿ ಮಹಿಳೆಯರಿಗೆ ರೂ.5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲು ನಿರ್ಧರಿಸಲಾಗಿದೆ.ಜತೆಗೆ ಮಹಿಳೆ ಮತ್ತು ಪುರುಷರಿಗೆ 5 ಲಕ್ಷಕ್ಕಿಂತ ಮೇಲ್ಪಟ್ಟ ಸಾಲವನ್ನು ಅತೀ ಕಡಿಮೆ( ಶೇ.4) ದರದಲ್ಲಿ ನೀಡಲು ನಿರ್ಧರಿಸಲಾಗಿದೆ ಎಂದು ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಪಡುಬಿದ್ರಿ ಬಂಟರ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ,ಉಡುಪಿ ಜಿಲ್ಲಾ ಸಹಕಾರ ಯೂನಿಯನ್,ಪಡುಬಿದ್ರಿ ಮತ್ತು ಬೆಳಪು ಸಹಕಾರಿ ವ್ಯವಸಾಯಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ 2ನೇ ದಿನದ ಕಾರ್ಯಕ್ರಮದಲ್ಲಿ ಪಂಡಿತ್ ಜವಾಹರಲಾಲ್ ನೆಹ್ರೂ ಮತ್ತು ಸಹಕಾರಿ ಪಿತಾಮಹ ಮೊಲಹಳ್ಳಿ ಶಿವರಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಸನ್ಮಾನ: ಇದೇ ಸಂದರ್ಭ ಸಹಕಾರಿ ಕ್ಷೇತ್ರಕ್ಕೆ ನೀಡಿದ ಅಭೂತಪೂರ್ವ ಸೇವೆಯನ್ನು ಪರಿಗಣಿಸಿ ಪಡುಬಿದ್ರಿ ಮತ್ತು ಬೆಳಪು ಸಿಎ ಬ್ಯಾಂಕ್ ವತಿಯಿಂದ ಸಹಕಾರಿ ರಂಗದ ಭೀಷ್ಮ ಡಾ.ಎಮ್.ಎನ್.ರಾಜೇಂದ್ರಕುಮಾರ್‍ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ,ಸರಕಾರಕ್ಕಿಂತ ಸಹಕಾರಿ ಸಂಸ್ಥೆಗಳಿಂದ ಸಾಮಾಜಿಕ ಅಭಿವೃದ್ಧಿಯಾಗಿದೆ.ಇಲ್ಲಿ ವಾಣಿಜ್ಯ ಬ್ಯಾಂಕ್‍ಗಳಿಗಿಂತ ಸಹಕಾರಿ ಬ್ಯಾಂಕ್‍ಗಳೇ ಪ್ರಬಲವಾಗಿದೆ.ದೇಶದ ಸ್ವಚ್ಛತಾ ಅಭಿಯಾನಕ್ಕೆ ಪಡುಬಿದ್ರಿ ಸಿಎ ಬ್ಯಾಂಕ್ ಕೊಡುಗೆ ನೀಡುವ ಮೂಲಕ ಮಾದರಿಯಾಗಿದೆ ಎಂದರು.

4 ಗ್ರಾಪಂಗಳಿಗೆ ಪಡುಬಿದ್ರಿ ಸಿಎ ಬ್ಯಾಂಕ್‍ನಿಂದ ಕಸ ವಿಲೇವಾರಿ ವಾಹನ ಕೊಡುಗೆ: ಪಡುಬಿದ್ರಿ ಸಿಎ ಬ್ಯಾಂಕ್ ವತಿಯಿಂದ ಆಸುಪಾಸಿನ ಗ್ರಾಮಗಳಾದ ಪಡುಬಿದ್ರಿ,ಹೆಜಮಾಡಿ,ಪಲಿಮಾರು ಮತ್ತು ತೆಂಕ ಎರ್ಮಾಳು ಗ್ರಾಪಂಗಳಿಗೆ ಸುಮಾರು 21 ಲಕ್ಷ ರೂ.ವೆಚ್ಚದ ನಾಲ್ಕು ಕಸ ವಿಲೇವಾರಿ ವಾಹನಗಳನ್ನು ಕೊಡುಗೆಯಾಗಿ ನೀಡಲಾಯಿತು.

ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಾಸೆಯವರು ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್,ಪಲಿಮಾರು ಅಧ್ಯಕ್ಷ ಜಿತೇಂದ್ರ ಫುರ್ಟಾಡೋ,ಹೆಜಮಾಡಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಮತ್ತು ತೆಂ ಗ್ರಾಪಂ ಅಧ್ಯಕ್ಷೆ ಅರುಣಾಕುಮಾರಿಯವರಿಗೆ ವಾಹನದ ಕೀಲಿಕೈ ಹಸ್ತಾಂತರಿಸಿದರು.

ರೈತರಿಗೆ ಸನ್ಮಾನ: ಪರಿಸರದ ಸಾಧಕ ರೈತರಾದ ರಮೇಶ್ ಶೆಟ್ಟಿ ಪಾದೆಬೆಟ್ಟು,ಯು.ಎಸ್.ರಘುನಾಥ್ ಪಡುಬಿದ್ರಿ, ಥೋಮಸ್ ಡಿಸೋಜಾ ಮತ್ತು ಗೌರಿ ಶೆಡ್ತಿಯವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.
ಸಾಂತ್ವನ ನಿಧಿ ವಿತರಣೆ: ಉದಯ ಪೂಜಾರಿಯವರ ಪತ್ನಿ ಜಯಂತಿ ಪೂಜಾರಿಯವರಿಗೆ ಸಾಂತ್ವನ ವಿಮಾ ನಿಧಿ ರೂ.ಒಂದು ಲಕ್ಷದ ಚೆಕ್ ವಿತರಿಸಲಾಯಿತು.

ನವೋದಯ ಸ್ವಸಹಾಯ ಸಂಘ ಉದ್ಘಾಟನೆ: ಇದೇ ವೇಳೆ ಡಾ.ಎಮ್.ಎನ್.ರಾಜೇಂದ್ರಕುಮಾರ್‍ರವರು ಶ್ರೀ ವಿಷ್ಣುಮೂರ್ತಿ ನವೋದಯ ಸ್ವಸಹಾಯ ಸಂಘ ಮತ್ತು ಶ್ರೀ ಪಾಂಡುರಂಗ ನವೋದಯ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಇದೇ ಸಂದರ್ಭ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಪ್ರೇರಕಿಯರನ್ನು ಗೌರವಿಸಲಾಯಿತು.

ಬೆಂಗಳೂರು ಆರ್‍ಐಸಿಎಮ್ ನಿವೃತ್ತ ನಿರ್ದೇಶಕ ಡಾ.ಎಸ್‍ಎ ವೇದಾಂತಿ ದಿಕ್ಸೂಚಿ ಭಾಷಣಗೈದರು.ಜಿಲ್ಲಾ ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಎಮ್‍ಜೆ,ಕಾಪು ದಿವಾಕರ ಶೆಟ್ಟಿ,ವಿವಿಧ ಸಹಕಾರಿ ಸಂಘಗಳ ಮುಖ್ಯಸ್ಥರಾದ ಬಡಗುಬೆಟ್ಟು ಜಯಕರ ಶೆಟ್ಟಿ ಇಂದ್ರಾಳಿ,ಶಿವಾಜಿ ಸುವರ್ಣ ಬೆಳ್ಳೆ,ಕಟಪಾಡಿ ಶಂಕರ ಪೂಜಾರಿ,ರಾಜೇಶ್ ರಾವ್ ಪಾಂಗಾಳ,ರಮೇಶ್ ಶೆಟ್ಟಿ,ತಿಮ್ಮಪ್ಪ ಶೆಟ್ಟಿ ಬ್ರಹ್ಮಾವರ,ಶ್ರೀವತ್ಸ ರಾವ್,ತಾಪಂ ಸದಸ್ಯ ಯುಸಿ ಶೇಖಬ್ಬ,ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್ ವೇದಿಕೆಯಲ್ಲಿದ್ದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ.ಸುಧೀರ್‍ಕುಮಾರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಬೆಳಪು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ ಶೆಟ್ಟಿ ಪ್ರಸ್ತಾವಿಸಿದರು.ಯಶೋದಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.ಗಿರೀಶ್ ಪಲಿಮಾರು ವಂದಿಸಿದರು.