ಸರ್ವಧರ್ಮೀಯನ್ನು ಒಂದೇ ವೇದಿಕೆಗೆ ತರುವ ದೀಪಾವಳಿ ಸಾರ್ಥಕ

ಮೂಲ್ಕಿ ದೀಪಾವಳಿ ಕೊಡುಗೆಗಳ ಹಾಗೂ ಸಾಮರಸ್ಯ ಬೀರುವ ಬೆಳಕಿನ ಹಬ್ಬವಾಗಿದೆ. ಯುವವಾಹಿನಿ ಎಲ್ಲಾ ಧರ್ಮದವರನ್ನು ಒಂದೇ ವೇದಿಕೆಯಲ್ಲಿ ತಂದು ಕಾರ್ಯಕ್ರಮ ನಡೆಸುವ ಮೂಲಕ ದೀಪಾವಳಿಯ ಸಾರ್ಥಕತೆ ಮೆರೆದಿದೆ ಎಂದು ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಲಿಯಾಖತ್ ಆಲಿ ಹೇಳಿದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ ನಡೆದ ತುಳುವೆರೆ ತುಡರ ಪರ್ಬ ವಿಶೇಷ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ಮಾತನಾಡಿ, ಕತ್ತಲನ್ನು ಹೋಗಲಾಡಿಸುವ ದೀಪಾವಳಿಯ ಬೆಳಕಿನಂತೆ ಯುವವಾಹಿನಿ ಮೂಲ್ಕಿ ಘಟಕವು ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಯುವ ಜನರಿಗೆ ಮಾದರಿಯಾಗಿ ನಿರೂಪಿಸುವ ಮೂಲಕ ಉತ್ತಮ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ತೋಕೂರು ತಪೋವನದ ಎಂ.ರಾಮಕೃಷ್ಣ ಪೂಂಜಾ ತಾಂತ್ರಿಕ ತರಬೇತಿ ಕೇಂದ್ರದ ಉಪನ್ಯಾಸಕರಾದ ಹರಿ.ಎಚ್. ದೀಪಾವಳಿಯ ಸಂದೇಶ ನೀಡಿ, ದೀಪಾವಳಿಯ ಹಬ್ಬಗಳಲ್ಲಿ ಮುಖ್ಯವಾಗಿರುವ ಗಟ್ಟಿ ಮತ್ತು ಅವಲಕ್ಕಿ(ಬಜಿಲ್) ಶಕ್ತಿದಾಯಕ ಹಾಗೂ ಆರೋಗ್ಯಪೂರ್ಣವಾಗಿ ನಮ್ಮ ಸಂಬಂಧಗಳನ್ನು ಗಟ್ಟಿ ಮಾಡುತ್ತದೆ ಎಂದರು.
ಸನ್ಮಾನ: ಈ ಸಂದರ್ಭ ಹಿರಿಯ ಸಮಾಜ ಸೇವಕ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಆಡಳಿತ ಕಛೇರಿ ಪ್ರಭಂದಕ ಸದಾನಂದ ಪೂಜಾರಿಯವರನ್ನು ದೀಪಾವಳಿಯ ತಮ್ಮನದೊಂದಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಸತೀಶ್ ಕಿಲ್ಪಾಡಿ ವಹಿಸಿದ್ದರು.
ಅತಿಥಿಗಳಾಗಿ ಮುಚ್ಚೂರು-ನೀರುಡೆ ಲಯನ್ಸ್ ಸ್ಥಾಪಕ ಅಧ್ಯಕ್ಷ ಲಾಸರಸ್ ಡಿಕೋಸ್ಟಾ, ಮೂಲ್ಕಿ ಬಿಲ್ಲವ ಸಮಾಜದ ಅಧ್ಯಕ್ಷ ಗೋಪಿನಾಥ ಪಡಂಗ, ಯುವವಾಹಿನಿ ಮೂಲ್ಕಿ ಘಟಕದ ಕಾರ್ಯದರ್ಶಿ ಭರತೇಶ್ ಅಮೀನ್ ಮಟ್ಟು, ಕೋಶಾಧಿಕಾರಿ ಪ್ರವೀಣ್ ವಿ.ಕೋಟ್ಯಾನ್, ಕಾರ್ಯಕ್ರಮ ಸಂಯೋಜಕರಾದ ರಿತೇಶ್ ಅಂಚನ್, ಸರೋಜಿನಿ ಕರ್ಕೇರ, ರಮೇಶ್ ಬಂಗೇರ ಅತಿಥಿಗಳಾಗಿದ್ದರು.

ವರುಣ್ ಚಿತ್ರಾಪು ಪ್ರಾರ್ಥಿಸಿದರು. ಸತೀಶ್ ಕಿಲ್ಪಾಡಿ ಸ್ವಾಗತಿಸಿದರು. ಜಯಕುಮಾರ್ ಕುಬೆವೂರು ಸನ್ಮಾನ ಪತ್ರ ವಾಚಿಸಿದರು. ಉದಯ ಅಮೀನ್ ಮಟ್ಟು ಮತ್ತು ಮೋಹನ್ ಸುವರ್ಣ ನಿರೂಪಿಸಿದರು. ಭರತೇಶ್ ಅಮೀನ್ ವಂದಿಸಿದರು.

ಫೋಟೋ: ಹಿರಿಯ ಸಮಾಜ ಸೇವಕ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಆಡಳಿತ ಕಛೇರಿ ಪ್ರಭಂದಕ ಸದಾನಂದ ಪೂಜಾರಿಯವರನ್ನು ದೀಪಾವಳಿಯ ತಮ್ಮನದೊಂದಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.