ಸರ್ವಜ್ಞ ಪೀಠವೇರಲಿರುವ ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅದಮಾರು ಮೂಲ ಮಠದಲ್ಲಿ ಹಿರಿಯ-ಕಿರಿಯ ಶ್ರೀಗಳಿಂದ ಸುದ್ದಿಗೋಷ್ಠಿ ಮೂಲಕ ಸ್ಪಷ್ಟನೆ

ಪಡುಬಿದ್ರಿ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಶ್ರೀಪಾದರೇ ಸರ್ವಜ್ಞ ಪೀಠವನ್ನೇರಲಿದ್ದು ಶ್ರೀಕೃಷ್ಣ ಪೂಜೆ ಸಹಿತ ಮಠದ ಆಡಳಿತ ನಿರ್ವಹಿಸಲಿದ್ದಾರೆ ಎಂದು ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಅವರು ಅದಮಾರು ಮೂಲಮಠದಲ್ಲಿ ಸೋಮವಾರ ಸುದ್ದಿಗೋಷ್ಟಿ ಮೂಲಕ ಅದಮಾರು ಪರ್ಯಾಯದಲ್ಲಿ ಯಾರು ಸರ್ವಜ್ಞ ಪೀಠವೇರಲಿದ್ದಾರೆನ್ನುವ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಅದಮಾರು ಮಠದ ಶ್ರೀವಿಬುಧೇಶತೀರ್ಥ ಶ್ರೀಪಾದರು ಹಾಕಿಕೊಟ್ಟ ಪರಂಪರೆಯಂತೆ ತಾನು ಕಿರಿಯ ಶ್ರೀಗಳಿಗೆ ಸರ್ವಜ್ಞಪೀಠವೇರಲು ಅನುವು ಮಾಡುತ್ತಿರುವೆ. ತಾನು 2 ಬಾರಿ ಪರ್ಯಾಯ ಪೀಠವೇರಿದ್ದು, ಸಂಪ್ರದಾಯದಂತೆ 3ನೇ ಪರ್ಯಾಯವನ್ನು ಶಿಷ್ಯರಿಗೆ ಒಪ್ಪಿಸುತ್ತಿದ್ದೇನೆ.

ಕಿರಿಯ ಶ್ರೀಗಳನ್ನು ಈ ನಿಟ್ಟಿನಲ್ಲಿ ಒಪ್ಪಿಸಲು ತಾವು ಹರಸಾಹಸ ಪಡಬೇಕಾಯಿತು. ಕೊನೆಗೆ ಆಜ್ಞೆ ರೂಪದಲ್ಲಿ ಒಪ್ಪಿಸಬೇಕಾಯಿತು, ಅದನ್ನು ಅಪ್ಪಣೆಯಾಗಿ ಸ್ವೀಕರಿಸಿದ್ದಾರೆ ಎಂದರು.

ಮೇಧಾವಿಗಳಾದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ನನಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು ಎಂಬ ದೃಢ ವಿಶ್ವಾಸವಿದೆ. ಕಳೆದ ಹಲವಾರು ದಿನಗಳಿಂದ ಇದ್ದ ಗೊಂದಲಗಳಿಗೆ ಈ ಮೂಲಕ ಉತ್ತರ ನೀಡುತ್ತಿದ್ದೇನೆ. ನಾನಾ ಊಹಾಪೋಹಗಳಿಂದ ಮನಸ್ಸಿಗೆ ತೀವ್ರ ಘಾಸಿಯಾಗಿದೆ. ಆಚಾರವಿಲ್ಲದ ನಾಲಿಗೆ ಹಲವಾರು ಗಾಸಿಪ್‍ಗಳನ್ನು ಹುಟ್ಟುಹಾಕಿತ್ತು. ಇದರಿಂದ ತೀವ್ರ ನೊಂದಿದ್ದೇನೆ. ತಮಗೆ ಸಂಬಂಧ ಪಡದ ವಿಷಯಗಳನ್ನು ಯಾರೂ ಮಾತಾಡಬಾರದು. ಹಿಂದು ಮುಂದು ವಿಮರ್ಶಿಸಿ ಮಾತಾಡಬೇಕು. ಇಂತಹ ಗಾಸಿಪ್‍ಗಳಿಂದ ದೇಶಕ್ಕೆ ಅನಾಹುತವಾಗುತ್ತದೆ. ಪೀಠದ ಬಗ್ಗೆ ಮಾತನಾಡುವಾಗ ವಿಮರ್ಶೆ ಮಾಡಿ ಮಾತಾಡಬೇಕೆಂದು ಎಚ್ಚರಿಸಿದರು.

ಪರ್ಯಾಯದ ಸಂದರ್ಭ ತಮ್ಮ ಪಾತ್ರವೇನು ಎಂಬ ಪ್ರಶ್ನೆಗೆ ಮಠಕ್ಕೆ ಬರುತ್ತಾ ಹೋಗುತ್ತಾ ಇರುತ್ತೇನೆ. ಅದಮಾರು ಮಠದ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಇರುವ ಕಾರಣ ಸಮಯ ಸಿಕ್ಕಾಗ ಶ್ರೀಕೃಷ್ಣ ದೇವರ ಪೂಜೆಗೆ ಬರುವುದಾಗಿ ಹೇಳಿದರು. ಮೂರು ಪ್ರಮುಖ ಪೂಜೆಗಳಾದ ಅವಸರ ಸನಕಾದಿ ಪೂಜೆ, ಮಹಾ ಪೂಜೆ ಮತ್ತು ರಾತ್ರಿ ಚಾಮರ ಸೇವೆ…ಈ ಮೂರು ಪೂಜೆಗಳನ್ನು ಪರ್ಯಾಯ ಸರ್ವಜ್ಞ ಪೀಠಸ್ಥರೇ ಮಾಡಬೇಕು. ಉಳಿದ ಪೂಜೆಗಳನ್ನು ಅವಕಾಶ ಸಿಕ್ಕಾಗ ನಾನೂ ಮಾಡುತ್ತೇನೆ ಎಂದರು.

ಪರ್ಯಾಯ ಮಹೋತ್ಸವದಲ್ಲಿ ತಾವು ಬಾಗವಹಿಸುತ್ತೀರಾ ಎಂಬ ಪ್ರಶ್ನೆಗೆ ಇಲ್ಲ ಎಂದುತ್ತರಿಸಿದ ಹಿರಿಯ ಶ್ರೀಪಾದರು, ತಾನು ಉಡುಪಿ ಮಠದಲ್ಲಿ ಇರುತ್ತೇನೆ. ಆದರೆ ಪರ್ಯಾಯದ ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ 2006ರಿಂದಲೂ ಬಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲ ಬಾರಿಗೆ ಸರ್ವಜ್ಞ ಪೀಠವೇರಲಿರುವ ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಹಿರಿಯ ಶ್ರೀಪಾದರ ಆಜ್ಞೆಯಂತೆ ನಡೆದುಕೊಳ್ಳುವೆ. ಅವರ ಮಾರ್ಗದರ್ಶನದಂತೆಯೇ ಕಾರ್ಯನಿರ್ವಹಿಸುವೆ. ಸಂಪ್ರದಾಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸುವೆ ಎಂದರು. ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ನೂತನ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಭಕ್ತರಿಗೆ ಹಾಗೂ ಶ್ರೀಪಾದರ ಅನುಕೂಲಕ್ಕಾಗಿ ಈ ಬಾರಿ ದರ್ಬಾರ್ ಸಮಯ ಬದಲಿಸಲಾಗಿದೆ.(ಜ. 18,ಮಧ್ಯಾಹ್ನ 3) ಇದರಿಂದ ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಇಲ್ಲ. ಎಲ್ಲಾ ಶ್ರೀಪಾದರುಗಳ ಜತೆ ಸಮಾಲೋಚಿಸಿಯೇ ನಿರ್ಧರಿಸಲಾಗಿದೆ. ಭಕ್ತರು ಪಲ್ಲಕ್ಕಿ ಹೊರುವ ಬಗ್ಗೆ ಕೇಳಿದ ಪ್ರಶ್ನೆಗೆ ಪಲ್ಲಕ್ಕಿ ಹೊರುವುದು ಸಂಪ್ರದಾಯ. ಪಲ್ಲಕ್ಕಿಯಲ್ಲಿ ಶ್ರೀಗಳ ರೂಪದಲ್ಲಿ ಭಗವಂತ ಪವಡಿಸುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಅದನ್ನು ಮುಂದುವರಿಸುವುದು ಭಕ್ತರಿಗೆ ಬಿಟ್ಟದ್ದು ಎಂದರು. ಈ ಬಾರಿಯ ಪುರ ಪ್ರವೇಶ ಸಂದರ್ಭ ಟ್ಯಾಬ್ಲೋ ಬಳಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಕಾಲ್ನಡಿಗೆ ತನ್ನಿಚ್ಚೆ. ಟ್ಯಾಬ್ಲೋ ಜನರಿಚ್ಛೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಪರ್ಯಾಯ ಸರಳ ರೀತಿಯಲ್ಲಿ ನಡೆಯಲಿದೆಯೇ ಎಂಬ ಪ್ರಶ್ನೆಗೆ ಮುಂಬೈ ರೈಲು ನಿಲ್ದಾಣದಲ್ಲಿ ನಿಂತರೆ ಸಾಕು. ಜನರೇ ರೈಲು ಡಬ್ಬಿಗೆ ಕೊಂಡೊಯ್ಯುತ್ತಾರೆ. ಅದೇ ರೀತಿ ಈ ಬಾರಿಯ ಪರ್ಯಾಯ. ಭಕ್ತರ ಇಚ್ಛೆಯಂತೆ ಪರ್ಯಾಯ ನಡೆಯಲಿದೆ ಎಂದವರು ಹೇಳಿದರು. ಅದಮಾರು ಮಠದ ಗೋವಿಂದರಾಜ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.