ಸರಕಾರ ನೀಡಿದ್ದನ್ನು ಅಭಿವೃದ್ಧಿಪಡಿಸದ ಸ್ಥಳೀಯಾಡಳಿತ-ಮೂಡ್ರಬೆಟ್ಟು ಸಂಜೀವ ಶೆಟ್ಟಿ

ಮೂಲ್ಕಿ: ಸರಕಾರಗಳು ನಿರಂತರ ನೀಡುವ ಅನುದಾನಗಳನ್ನು ಸರಿಯಾಗಿ ಬಳಸದೆ ಸ್ಥಳೀಯಾಡಳಿತಗಳು ಜನರನ್ನು ವಂಚಿಸುತ್ತಿದೆ. ಈ ಬಗ್ಗೆ ಜನಜಾಗೃತಿಯ ಅಗತ್ಯವಿದೆ ಎಂದು ಪರಿಸರ ಪ್ರೇಮಿ ಹಾಗೂ ಸಾಮಾಜಿಕ ಹೋರಾಟಗಾರ ಮೂಡ್ರಗುತ್ತು ಸಂಜೀವ ಶೆಟ್ಟಿ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ನಿವೃತ್ತಿ ಬಳಿಕದ ತಮ್ಮ ಸಾಮಾಜಿಕ ಹೋರಾಟ ಮತ್ತು ಪರಿಸರ ಪ್ರೇಮಿಯಾಗಿರುವ ಶಿಮಂತೂರಿನ ಮೂಡ್ರಗುತ್ತು ಸಂಜೀವ ಶೆಟ್ಟಿಯವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನೀರಾವರಿ ಜಾಗಗಳನ್ನು ಅಕ್ರಮ-ಸಕ್ರಮಗೊಳಿಸಬಾರದು ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದ್ದರೂ ಅಧಿಕಾರಿಗಳು ಕಾನೂನು ಪರಿಪಾಲನೆಗೆ ಹಿಂದೇಟು ಹಾಕುತ್ತಿರುವುದು ದುರದೃಷ್ಟಕರ ಎಂದ ಅವರು ಈ ಬಗ್ಗೆ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಅರ್ಹರಿಗೆ ಸನ್ಮಾನ ಸ್ತುತ್ಯರ್ಹವಾದುದು. ಅವರ ಕಾನೂನಾತ್ಮಕ ಹೋರಾಟಕ್ಕೆ ಸರ್ವರ ಬೆಂಬಲದ ಅಗತ್ಯವಿದೆ ಎಂದರು.

ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ತೋಕೂರು ತಪೋವನ ಐಟಿಐ ಪ್ರಾಚಾರ್ಯ ವೈ.ಎನ್.ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ಹೊಸ ಅಂಗಣದ ಸಂಪಾದಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವಿಸಿದರು.

ರವಿಚಂದ್ರ ನಿರ್ವಹಿಸಿದ ಕಾರ್ಯಕ್ರಮದಲ್ಲಿ ವಿಜಯಕುಮಾರ್ ಕುಬೆವೂರು ಅಭಿನಂದನಾ ಭಾಷಣಗೈದರು. ಹೆಜಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ವಂದಿಸಿದರು.