ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಹಳೇ ವಿದ್ಯಾರ್ಥಿ ಸಂಘಗಳ ಪಾತ್ರ ಮಹತ್ತರವಾದುದು-ಲಾಲಾಜಿ ಮೆಂಡನ್

ಪಡುಬಿದ್ರಿ: ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸರಕಾರವನ್ನು ಮಾತ್ರ ನೆಚ್ಚಿಕೊಳ್ಳದೆ ಶಾಲಾ ಹಳೆ ವಿದ್ಯಾರ್ಥಿಗಳ ಸಂಘಟನೆ ಎಲ್ಲಿ ಉತ್ತಮವಾಗಿರುತ್ತದೋ ಅಲ್ಲಿ ಶಾಲಾ, ಕಾಲೇಜು ಅಭಿವೃದ್ಧಿಗಳೂ ಉತ್ತಮವಾಗಿರುತ್ತವೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಅವರು ಹೆಜಮಾಡಿಯ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜುಗಳ `ಶೈಕ್ಷಣಿಕ ಉತ್ಸವ’ ಹಾಗೂ ಹಳೆ ವಿದ್ಯಾರ್ಥಿ ಸಂಘದ ದ್ವಿತೀಯ ವರ್ಷದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮುಖ್ಯ ಅತಿಥಿಯಾಗಿ ಮಾತನಾಡಿ,ಶಾಲೆ ನಮ್ಮ ಅರಿವಿನ ಅರಮನೆಯಾಗಿದೆ. ಇಲ್ಲಿ ನಮ್ಮನ್ನು ತಿದ್ದಿ ತೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡುವ ಅಧ್ಯಾಪಕ ಶ್ರಮವನ್ನು ಗುರುತಿಸಲೇ ಬೇಕು. ಇಂದಿನ ಆಯೋಮಯ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಅವರದ್ದಾಗಿದೆ ಎಂದು ಉದ್ಯಮಿ ಹೇಳಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಲಾ ಹಳೆ ವಿದ್ಯಾರ್ಥಿ ಹಾಗೂ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ| ಮೊಹಮ್ಮದ್ ಇಸ್ಮಾಯಿಲ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾಪು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪೆÇ್ರ.ಗಣೇಶ್ ಬಿಜೈ ಮುಖ್ಯ ಶೈಕ್ಷಣಿಕ ಭಾಷಣವನ್ನು ಗೈದರು.
ವೇದಿಕೆಯಲ್ಲಿ ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಗುಲಾಂ ಮಹಮ್ಮದ್, ವಾಸು ಪೂಜಾರಿ ಚಿತ್ರಾಪು, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮಲ್ಲಿಕಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧೀರ್ ಕರ್ಕೇರ, ಸುಧಾಕರ ಕರ್ಕೇರ, ಪಾಂಡುರಂಗ ಕರ್ಕೇರ ಮತ್ತಿತರರು ವೇದಿಕೆಯಲ್ಲಿದ್ದರು.
ಉದ್ಯಮಿ, ಶಾಲಾ ಹಳೆ ವಿದ್ಯಾರ್ಥಿ ರವೀಂದ್ರನಾಥ ಜಿ. ಹೆಗ್ಡೆ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ವಿನ್ಸೆಂಟ್ ವಿನೋದ್ ಡಿಸೋಜ ಸ್ವಾಗತಿಸಿದರು. ಸುಜಾತಾ ಬೇಕಲ್ ಕಾರ್ಯಕ್ರಮ ನಿರ್ವಹಿಸಿದರು. ಶೇಖರ್ ಹೆಜಮಾಡಿ ಪ್ರಸ್ತಾವಿಸಿದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಸವಿತಾ ಆರ್. ನಾಯಕ್ ವಂದಿಸಿದರು.