ಸರಕಾರಿ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಕಳಪೆ ಗುಣಮಟ್ಟದ ಅಕ್ಕಿ ರವಾನೆ: ಪಲಿಮಾರು ಮಕ್ಕಳ ಗ್ರಾಮಸಭೆಯಲ್ಲಿ ದೂರು

ಪಡುಬಿದ್ರಿ: ಗ್ರಾಮೀಣ ಪ್ರದೇಶದ ನಂದಿಕೂರು ಜಿಪಂ ಸರಕಾರಿ ಪ್ರಾಥಮಿಕ ಶಾಲೆಗೆ ಕಳಪೆ ಗುಣಮಟ್ಟದ ಅಕ್ಕಿಯನ್ನು ಪೂರೈಸಲಾಗಿದೆ. ಶಾಲೆಯವರು ತಿರಸ್ಕರಿಸಿದರೂ ಸರಬರಾಜು ಮಾಡುವವರು ತಮಗೇನೂ ತಿಳಿಯದು. ನೀವು ಮೇಲಧಿಕಾರಿಗೆ ದೂರು ನೀಡಿರೆಂದು ಉದ್ಧಟತನದ ಮಾತನ್ನಾಡಿ ತೆರಳುತ್ತಾರೆ ಎಂದು ಶಾಲಾ ಶಿಕ್ಷಕಿ ಸುನೀತಾರವರು ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಆರೋಪಿಸಿದ ಘಟನೆ ಶುಕ್ರವಾರ ನಡೆಯಿತು.

ಪಲಿಮಾರು ಗ್ರಾಪಂನಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಕುರಿತಾದ ವಿವಿಧ ಪ್ರಶ್ನೆಗಳು ಹರಿದು ಬಂದಾಗ ವಿದ್ಯಾರ್ಥಿಗಳ ಪ್ರಶ್ನೆಗೆ ಪೂರಕವಾಗಿ ಶಿಕ್ಷಕಿ ಈ ವಿಚಾರ ಪ್ರಸ್ತಾವಿಸಿದರು.

ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಕಳಪೆ ಗುಣಮಟ್ಟದ ಅಕ್ಕಿ ಮತ್ತು ಬೇಳೆ ಕಾಳುಗಳು ರವಾನೆಯಾಗುತ್ತಿರುವ ದೂರುಗಳು ಈಗಾಗಲೇ ಜಿಪಂ ಸಭೆಯಲ್ಲೂ ಪ್ರಸ್ತಾವವಾಗಿವೆ. ಆಯಾಯ ಶಾಲಾ ಮುಖ್ಯೋಪಾಧ್ಯಾಯರು ಅಂತಹ ಅಕ್ಕಿ ಬೇಳೆ ಕಾಳುಗಳನ್ನು ಹಿಂದಕ್ಕೆ ಆ ಕೂಡಲೇ ರವಾನಿಸಿ ಅಕ್ಷರ ದಾಸೋಹ ಅಧಿಕಾರಿಗೆ ದೂರು ನೀಡಬೇಕೆಂದು ಉತ್ತರಿಸಿದರು.

ಇದಕ್ಕೆ ಧ್ವನಿಗೂಡಿಸಿ ತಾಪಂ ಸದಸ್ಯ ದಿನೇಶ್ ಕೋಟ್ಯಾನ್ ಅವರೂ ಹಿಂದೊಮ್ಮೆ ದೂರು ನೀಡಿದ್ದಾಗ ತ್ವರಿತವಾಗಿ ಇಲಾಖೆಯು ತನ್ನ ತಪ್ಪನ್ನು ತಿದ್ದಿಕೊಂಡಿತ್ತು. ಮತ್ತೆ ಪುನಾವರ್ತನೆಯಾಗುತ್ತಿರುವುದಾಗಿ ಹೇಳಿ,ತಕ್ಷಣ ಕ್ರಮಕ್ಕೆ ಆಗ್ರಹಿಸಿದರು.
ಪಲಿಮಾರು ಭಾಗದ ವಿದ್ಯಾರ್ಥಿಗಳು ತಮಗೆ ಶಾಲಾ ವೇಳೆಯಲ್ಲಿ ಬಸ್ಸುಗಳು ಕಡಿಮೆ ಸಂಖ್ಯೆಯಲ್ಲಿದ್ದು ಹೆಚ್ಚಿಸಬೇಕೆಂದು ಬೇಡಿಕೆ ಇಟ್ಟರು.

ಈ ಕುರಿತಾದ ದೂರನ್ನು ಸಾರಿಗೆ ಅಧಿಕಾರಿಗಳಿಗೆ ರವಾನಿಸಿ ಹೊಸ ಬಸ್ಸುಗಳನ್ನು ಪಲಿಮಾರು-ಅಡ್ವೆ ರೂಟಿಗೆ ಹಾಕುವಂತೆ ಮನವಿ ಮಾಡಿಕೊಳ್ಳಲಾಗುವುದೆಂದು ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಹೇಳಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರ್ಥಿನಿ ಮೇಘನಾ ಪಲಿಮಾರು, ಹಾಳಾಗಿ ಮುರಿದು ಬಿದ್ದಿರುವ ಶಾಲಾ ಆವರಣಗೋಡೆಯನ್ನು ಮತ್ತೆ ಕಟ್ಟಿಕೊಡಬೇಕೆಂದು ಕೇಳಿದರೆ ಇನ್ನೋರ್ವ ನಂದಿಕೂರು ಶಾಲಾ ವಿದ್ಯಾರ್ಥಿನಿ ಹರ್ಷಿತಾ ತಮ್ಮ ಶಾಲೆಯಲ್ಲಿ ವಿಂಗಡಿಸಿಡಲಾದ ಪ್ಲಾಸ್ಕಿಕ್ ತ್ಯಾಜ್ಯವನ್ನು ಕೊಂಡೊಯ್ಯುವವರಿಲ್ಲ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕಿಟಕಿ ಹೊರಗಡೆಯೇ ಹೊತ್ತಿಸಲಾಗುತ್ತದೆ. ವಾಸನೆಯಿಂದಾಗಿ ಪಾಠದ ಮೇಲೆ ಗಮನಹರಿಸಲಾಗುತ್ತಿಲ್ಲ ಎಂದೂ ಆರೋಪಿಸಿದಳು.

ವಿವಿಧ ಶಾಲಾ ಮಕ್ಕಳು ತಮ್ಮ ಕ್ಲಾಸ್ ಬದಿಯಲ್ಲಿನ ಹುಲ್ಲನ್ನೂ ಕೀಳುವವರಿಲ್ಲ ಎಂಬುದಾಗಿಯೂ, ಪಲಿಮಾರು ಶಾಲಾ ಆವರಣದಲ್ಲಿ ಕುಡುಕರ ಕಾಟ ಹೆಚ್ಚಾಗಿರುವುದಾಗಿಯೂ, ಬೆಳಿಗ್ಗಿನ ತನಕ ಅಕ್ಷರ ದಾಸೋಹ ಕೊಠಡಿಯಲ್ಲೇ ಮಲಗುತ್ತಿರುವುದಾಗಿಯೂ ದೂರಿತ್ತರು.

ಸಭೆಯನ್ನು ಉದ್ದೇಶಿಸಿ ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ವಿವಿಧ ಇಲಾಖಾ ಪ್ರತಿನಿಧಿಗಳು ಮಾತನಾಡಿದರು. ಸಭೆಯಲ್ಲಿ ಪೆÇಲೀಸ್ ಇಲಾಖೆಯ ಸುಧಾ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಸುಷ್ಮಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ನಾಗರತ್ನಾ, ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಬ್ರಹ್ಮಣ್ಯ, ಆರೋಗ್ಯ ಸಹಾಯಕಿ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

ಪಲಿಮಾರು ಗ್ರಾಪಂ ಪಿಡಿಒ ಸತೀಶ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.