ಸಮಾಜ ಸೇವೆಯೊಂದಿಗೆ ಯುವ ಪ್ರತಿಭೆಗೆ ಪ್ರೋತ್ಸಾಹ ಅನುಕರಣೀಯ-ಮುಂಬೈ ಉದ್ಯಮಿ ಜಯರಾಮ್ ಎನ್.ಶೆಟ್ಟಿ

ಮೂಲ್ಕಿ: ಕಳೆದ ಹಲವಾರು ವರ್ಷಗಳಿಂದ ಮೂಲ್ಕಿ ಹಾಗೂ ಆಸುಪಾಸಿನಲ್ಲಿ ಸಾಮಾಜಿಕ,ಶೈಕ್ಷಣಿಕ,ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆಗೈಯುತ್ತಾ ಬಂದಿರುವ ಮಯೂರಿ ಫೌಂಡೇಶನ್ ಈ ಬಾಯಿ ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಮೂಲಕ ಇತರರಿಗೆ ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಮುಂಬೈ ಹೋಟೆಲ್ ಸಿಲ್ವರ್ ಇನ್ ಆಡಳಿತ ನಿರ್ದೇಶಕ ಜಯರಾಮ್ ಎನ್.ಶೆಟ್ಟಿ ಹೇಳಿದರು.

ಮೂಲ್ಕಿ ವಿಜಯಾ ಕಾಲೇಜು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮಯೂರಿ ಫೌಂಡೇಶನ್ ಪ್ರಾಯೋಜಿತ ಮಯೂರಿ ಕಪ್-2019 ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಜೀವನದಲ್ಲಿ ಅತೀ ಬೇಗ ಯಶಸ್ಸು ಗಳಿಸಲು ಸಾಧ್ಯವಿದೆ.ಮಯೂರಿ ಫೌಂಡೇಶನ್ ಆಶಯಕ್ಕೆ ಅನುಗುಣವಾಗಿ ದೇಶದ ಸತ್ಪ್ರಜೆಗಳಾಗಿ ಮೂಡಿಬರಬೇಕು ಎಂದರು.
ದೀಪ ಬೆಳಗಿಸಿ ಹಾಗೂ ಕ್ರೀಡಾಂಗಣದಲ್ಲಿ ಬ್ಯಾಟ್ ಬೀಸುವ ಮೂಲಕ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದರು.
ರಾಜ್ಯ ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಯಾಗಿ ಮಾತನಾಡಿ,ಸಂಘಟಕರ ಆಶಯದಂತೆ ಕ್ರೀಡಾ ಚಟುವಟಿಕೆಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡು ಕ್ರೀಡಾಸ್ಪೂರ್ತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಬಪ್ಪನಾಡು ದೇವಳದ ಅನುವಂಶಿಕ ಹಾಗೂ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ,ಬಪ್ಪನಾಡು ದೇವಳದ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಯುವ ಜನತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿರುವುದು ಔಚಿತ್ಯಪೂರ್ಣವಾದುದು ಎಂದರು.

ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ.ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಸ್ತಾವಿಸಿದರು.ಈಗಾಗಲೇ ಮೂಲ್ಕಿ ಪರಿಸರದಲ್ಲಿ ಸಾಮಾಜಿಕ,ಶೈಕ್ಷಣಿಕ,ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ಸಮಾಜ ಸೇವೆಗೈಯ್ಯುತ್ತಿರುವ ಮಯೂರಿ ಫೌಂಡೇಶನ್ ಯುವ ಜನತೆಯಲ್ಲಿ ದೇಶಭಕ್ತಿ ಹುಟ್ಟಿಸುವ ಸಲುವಾಗಿ ಯುವ ಪ್ರತಿಭಾನ್ವೇಷಣೆ ಹಮ್ಮಿಕೊಂಡಿದೆ.ಈ ನಿಟ್ಟಿನಲ್ಲಿ ಆರಂಭಿಕವಾಗಿ ಕ್ರಿಕೆಟ್ ಪಂದ್ಯಾಟ ನಡೆಸಿದ್ದು,ಮುಂದೆ ನಿರಂತರ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುವುದು.ಜತೆಗೆ ಮೂಲ್ಕಿಯ ಸಮಗ್ರ ಕ್ರೀಡಾ ಚಟುವಟಿಕೆಗಳಿಗೆ ಪೂರಕ ಪರಿಕರಗಳನ್ನು ನೀಡಲಾಗುವುದು ಎಂದರು.

ಮೂಲ್ಕಿ ವಿಶ್ವ ಬ್ರಾಹ್ಮಣ ಸಮಾಜದ ಅಧ್ಯಕ್ಷ ಮಧು ಆಚಾರ್ಯ,ಮೂಲ್ಕಿ ವಿಜಯಾ ಕಾಲೇಜು ಪ್ರಿನ್ಸಿಪಾಲ್ ಡಾ.ನಾರಾಯಣ ಪೂಜಾರಿ,ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಸ್ಯಾಮ್ ಮಾಬೆನ್,ಉದ್ಯಮಿಗಳಾದ ದಿನೇಶ್ ಹೆಗ್ಡೆ ಮತ್ತು ಗಣೇಶ್ ಕಾಮತ್,ಮಯೂರಿ ಫೌಂಡೇಶನ್ ಟ್ರಸ್ಟಿಗಳಾದ ಪ್ರಬೋದ್ ಕುಡ್ವ,ದೇವಪ್ರಸಾದ್ ಪುನರೂರು,ನವೀನ್ ಶೆಟ್ಟಿ ಮತ್ತು ಜೀವನ್ ಕೆ.ಶೆಟ್ಟಿ,ಸುಜಿತ್ ಎಸ್.ಸಾಲ್ಯಾನ್,ಬಬಿತಾ ಶೆಟ್ಟಿ,ಸತ್ಯೇಂದ್ರ ಶೆಣೈ,ಸುನಿಲ್ ಕಾಮತ್,ಉದಯ ಅಮೀನ್,ರವೀಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.