ಸಮರೋಪಾದಿ ತಡೆಗೋಡೆ ನಿರ್ಮಾಣಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆದೇಶ

ಕಾಪು ಕ್ಷೇತ್ರ ವ್ಯಾಪ್ತಿಯ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ


ಪಡುಬಿದ್ರಿ: ಟೆಂಡರು, ಗುತ್ತಿಗೆದಾರರನ್ನು ಕಾಯದೆ ಕಡಲ್ಕೊರೆತ ಉಂಟಾದ ಕಡೆ ಸಮರೋಪಾದಿಯಾಗಿ ತಡೆಗೋಡೆ ಕಾಮಗಾರಿ ನಡೆಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ಕಾಪು ಕ್ಷೇತ್ರದ ಮೂಳೂರು, ಬಡಾ ಎರ್ಮಾಳು, ತೆಂಕ ಎರ್ಮಾಳು, ಪಡುಬಿದ್ರಿಯ ಕಾಡಿಪಟ್ಣ-ನಡಿಪಟ್ಣ ಭಾಗಳಲ್ಲಿನ ಕಡಲ್ಕೊರೆತ ಸ್ಥಳಗಳಿಗೆ ಶುಕ್ರವಾರ ಸಂಜೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.


ಕಾಪು ಕ್ಷೇತ್ರದ ಐದಾರು ಕಡೆ ಕಡಲ್ಕೊರೆತ ತೀವ್ರವಾಗಿದೆ. ಮೂಳೂರು ಹಾಗೂ ಬಡಾ ವ್ಯಾಪ್ತಿಯಲ್ಲಿ ಎ.ಡಿ.ಬಿ.ಯಿಂದ ತಡೆಗೋಡೆ ಕಾಮಗಾರಿ ನಡೆಯಲಿದ್ದು, ಯೋಜನೆಯ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಲಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿಯೇ ಜಿಲ್ಲಾಧಿಕಾರಿಗಳು ಕರ್ತವ್ಯದಲ್ಲಿರುವಂತೆ ಮುಖ್ಯ ಮಂತ್ರಿಗಳು ಸೂಚನೆ ನೀಡಿದ್ದಾರೆ. ಪ್ರಾಕೃತಿಕ ವಿಕೋಪದಿಂದ ಜೀವ ಹಾನಿಯಾದಲ್ಲಿ ತುರ್ತಾಗಿ ಪರಿಹಾರ ನೀಡಲು ಕ್ರಮವಹಿಸಲಾಗಿದೆ. ನೆರೆ ಹಾವಳಿಯಿಂದ ಸಂಕಷ್ಟಗೊಳಗಾದವರ ರಕ್ಷಣೆಗಾಗಿ ಎನ್‍ಡಿಆರ್‍ಎಫ್ ತಂಡವನ್ನು ಸನ್ನದ್ಧವಾಗಿರಿಸಲಾಗಿದೆ ಎಂದು ಕರಂದ್ಲಾಜೆ ಹೇಳಿದರು.


ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜಿಪಂ ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಸದಸ್ಯ ಕೇಶವ ಮೊಯ್ಲಿ, ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ರೂಪೇಶ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಉದಯಕುಮಾರ್, ಕಂದಾಯ ಪರಿವೀಕ್ಷಕ ರವಿಶಂಕರ್, ಬಡಾ ಗ್ರಾಪಂ ಉಪಾಧ್ಯಕ್ಷೆ ಇಂದಿರಾ ಶೆಟ್ಟಿ, ಪಿಡಿಒ ಕುಶಾಲಿನಿ, ಬಿಜೆಪಿ ಪ್ರಮುಖರಾದ ಕೆ. ಉದಯಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಕೆ.ಸುರೇಶ್ ನಾಯಕ್, ಕುತ್ಯಾರು ನವೀನ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸಂಧ್ಯಾ ರಮೇಶ್, ಕೇಸರಿ ಎಂ. ಮತ್ತಿತರರು ಉಪಸ್ಥಿತರಿದ್ದರು.


ಫೋಟೋ: 
ಕ್ಯಾ: ಬಡಾ ಎರ್ಮಾಳಿನ ಕಡಲ್ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲಿಸಿದರು.