ಸಪ್ಲಿಮೆಂಟರಿ ಬಜೆಟ್‍ನಲ್ಲಿ ಮೂಲ್ಕಿ ತಾಲೂಕು ರಚನೆಗೆ ಮುಖ್ಯಮಂತ್ರಿ ಭರವಸೆ

ಮೂಲ್ಕಿ: ಮೂಲ್ಕಿ ಜನತೆಯ ಬಹುಕಾಲದ ಬೇಡಿಕೆಯಾದ ಮೂಲ್ಕಿ ತಾಲೂಕು ರಚನೆಗೆ ಕೊನೆಗೂ ಚಾಲನೆ ದೊರಕಿದೆ.

ಶನಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾದ ಸಂದರ್ಭ ಅವರು ಸಪ್ಲಿಮೆಂಟರಿ ಬಜೆಟ್‍ನಲ್ಲಿ ಖಚಿತವಾಗಿ ಮೂಲ್ಕಿ ತಾಲೂಕು ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ,ಮೂಲ್ಕಿ-ಮೂಡಬಿದಿರೆ ಜೆಡಿಎಸ್ ಅಧ್ಯಕ್ಷ ಜೀವನ್ ಕೆ.ಶೆಟ್ಟಿ ಮತ್ತು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಅಹಮದ್‍ರವರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅವರು ಈ ಹಿಂದೆ ನೀಡಿದ್ದ ಭರವಸೆಯ ಪತ್ರಿಕಾ ಪ್ರಕಟಣೆಗಳನ್ನು ತೋರಿಸಿ ಮೂಲ್ಕಿ ತಾಲೂಕು ರಚನೆಗೆ ಆಗ್ರಹಿಸಿದ್ದರು.

ಮುಖ್ಯಮಂತ್ರಿ ಆಗುವ ಮುನ್ನ 2017ರ ಎಪ್ರಿಲ್ 17ರಂದು ಎಚ್.ಡಿ.ಕುಮಾರಸ್ವಾಮಿಯವರು ಶ್ರೀ ಕ್ಷೇತ್ರ ಬಪ್ಪನಾಡುವಿಗೆ ಭೇಟಿ ನೀಡಿದ್ದ ಸಂದರ್ಭ ಮೂಲ್ಕಿ ತಾಲೂಕು ರಚನೆ ನೆನೆಗುದಿಗೆ ಬಿದ್ದಿರುವ ಬಗ್ಗೆ ಗಮನ ಸೆಳೆಯಲಾಗಿತ್ತು.ಈ ಸಂದರ್ಭ ತಾನು ಮುಖ್ಯಮಂತ್ರಿಯಾದರೆ ತಿಂಗಳೊಳಗೆ ಮೂಲ್ಕಿ ತಾಲೂಕು ರಚನೆ ಮಾಡುವುದಾಗಿ ಭರವಸೆ ನೀಡಿದ್ದರು.
ಮುಖ್ಯಮಂತ್ರಿಯಾದ ಬಳಿಕ 2018 ಸೆಪ್ಟೆಂಬರ್ 7ರಂದು ಉಡುಪಿ ಜಿಲ್ಲಾ ಭೇಟಿಗಾಗಿ ಬಂದಿದ್ದಾಗ ಬಪ್ಪನಾಡು ಬಳಿ ಹೆದ್ದಾರಿಯಲ್ಲಿ ಮೂಲ್ಕಿ ನಾಗರಿಕರ ಪರವಾಗಿ ಜೀವನ್ ಕೆ.ಶೆಟ್ಟಿ,ಇಕ್ಬಾಲ್ ಅಹಮದ್,ಹರೀಶ್ ಎನ್.ಪುತ್ರನ್ ಸಹಿತ ಸ್ಥಳೀಯರು ಮಗದೊಮ್ಮೆ ಮೂಲ್ಕಿ ತಾಲೂಕು ರಚನೆ ಬಗ್ಗೆ ಅವರಿಗೆ ಮನವಿ ಸಲ್ಲಿಸಿದ್ದರು.ಇದಕ್ಕೆ ಪತ್ರ ಮೂಲಕ ಸಕಾರಾತ್ಮಕ ಪ್ರತಿಕ್ರಿಯೆಯನ್ನೂ ನೀಡಿದ್ದರು.

ಶನಿವಾರ ವಿಮಾನ ನಿಲ್ದಾಣದಲ್ಲಿ ಇವೆಲ್ಲಾ ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ತೋರಿಸಿ ಮೂಲ್ಕಿ ತಾಲೂಕು ಬಗ್ಗೆ ಆಗ್ರಹಿಸಲಾಗಿದ್ದು,ಸಪ್ಲಿಮೆಂಟರಿ ಬಜೆಟ್‍ನಲ್ಲಿ ಖಂಡಿತವಾಗಿ ಮೂಲ್ಕಿ ತಾಲೂಕು ಘೋಷಣೆ ಮಾಡುವ ಭರವಸೆ ನೀಡಿದ್ದಾರೆ.