ಸಂಪ್ರದಾಯಬದ್ಧವಾಗಿ ಪಡುಬಿದ್ರಿ ರಥ ಕಟ್ಟುವ ಮೊಗವೀರರು

ಪಡುಬಿದ್ರಿ: ಸಾಂಘಿಕವಾಗಿ ಅನಾದಿ ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯಕ್ಕೆ ಒಂದಿನಿತೂ ಚ್ಯುತಿ ಬಾರದಂತೆ ಮೊಗವೀರ ಸಮಾಜವು ಗ್ರಾಮ ದೇಗುಲದ ರಥ ಕಟ್ಟು ಕಾರ್ಯ ನಡೆಸುತ್ತಾ ಬಂದಿದ್ದಾರೆ.ತಮ್ಮ ಕಡಲ ಕಾಯಕಕ್ಕೆ ರಜಾ ಸಾರಿ ಊರಿನ ನಡೆದೇಗುಲವನ್ನು ಕಟ್ಟುವ ಕಾಯಕವು ನೂರಾರು ವರ್ಷಗಳಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆದು ಬಂದಿದೆ.

ಪಡುಬಿದ್ರಿಯ ಮೊಗವೀರ ಬಂಧುಗಳ ಕಾಡಿಪಟ್ಣ ಹಾಗೂ ನಡಿಪಟ್ಣ ಎಂಬ ಎರಡು ಊರುಗಳ ಜನತೆ ಸಾಂಘಿಕವಾಗಿ ಪಡುಬಿದ್ರಿ ದೇಗುಲದ ನಡೆ ದೇಗುಲವನ್ನು ಆಯ ಪ್ರಮಾಣ ಬದ್ಧವಾಗಿ ಕಟ್ಟಿಕೊಡುತ್ತಾರೆ.ದೊಡ್ಡ ವ್ಯಾಸದ ಸುತ್ತಳತೆಯ ಈ ಬ್ರಹ್ಮರಥವನ್ನು ಆಯನದ ಬಲಿ ನಡೆದ ಬಳಿಕ ಬೆಳಿಗ್ಗಿನ 7 ಗಂಟೆಗೆ ಹೊರತರುತ್ತಾರೆ.ನಾಲ್ಕು ಘನಮರಗಳನ್ನು ನೆಟ್ಟು,6 ಅಡ್ಡ ಹಲಗೆಗೆಳ ಆಖಾಡಗಳನ್ನು ನಿರ್ಮಿಸಿ,ಬೆತ್ತ ಹಾಗೂ ಅಡಕೆ ರೀಪುಗಳನ್ನು ಸುತ್ತಲೂ ಕಟ್ಟಿ ಮಧ್ಯಾಹ್ನದ 1-30ರ ಸುಮಾರಿಗೆ ಪೂರ್ಣಗೊಳಿಸಿ,ರಥದ ತುತ್ತತುದಿಯ ಮುಕುಟವನ್ನೂ ಪೇರಿಸಿ ರಥವನ್ನು ಸಿದ್ಧಗೊಳಿಸುತ್ತಾರೆ.
ಕೇವಲ ವ್ಯಕ್ತಿಯೋರ್ವರಿಗೆ 1-2 ರೂಪಾಯಿಗಳಲ್ಲಿ ಆರಂಭಿಸಿದ ಈ ಸಂಪ್ರದಾಯ ಇಂದು ವ್ಯಕ್ತಿಗೆ 90 ರೂ. ಭಂಡಾರದ ಪಾವತಿಯೊಂದಿಗೆ ಮುಂದುವರಿದು ಬಂದಿದೆ.ರಥ ಕಟ್ಟುವ ಕಾಯಕದ ಬಳಿಕ ದೇವಸ್ಥಾನದಲ್ಲಿ ಈ ಶ್ರದ್ಧಾಳು ಮೊಗವೀರ ಬಾಂಧವರಿಗೆ ಅನ್ನ ಪ್ರಸಾದವನ್ನೂ ಬಡಿಸಿ ಮನಃತೃಪ್ತಿಗೊಳಿಸಲಾಗುತ್ತದೆ.

ತೇರಿನ ಜಿಡ್ಡೆಯನ್ನು ಹೊರಕ್ಕೆಳೆಯುವ ಮೊದಲು ಗ್ರಾಮ ದೇವರು,ಶ್ರೀ ಕುಲಮಹಾಸ್ತ್ರಿ,ಶ್ರೀ ಮಹಾಲಕ್ಷ್ಮೀ ದೇವರನ್ನು ಪ್ರಾರ್ಥಿಸಿ ತಮ್ಮ ಸಾಂಪ್ರದಾಯಿಕ ಕೆಲಸವನ್ನು ಆರಂಭಿಸುವ ಮೊಗವೀರರು ತೇರಿನ ಕಟ್ಟಿದ ಬಳಿಕ ದೇವಸ್ಥಾನದ ಎದುರು ಎಳೆದು ತಂದು ನಿಲ್ಲಿಸುತ್ತಾರೆ.ಅಲ್ಲಿಂದ ತೆರಳಿ ಶ್ರೀ ದೇವಸ್ಥಾನದ ಧ್ವಜಸ್ಥಂಭದ ಮುಂದೆ ಶ್ರೀ ದೇಗುಲದ ಅರ್ಚಕರಿದ್ದು ಮೊಗವೀರ ಜನಾಂಗದ ಉನ್ನತಿಗಾಗಿ ಪ್ರಾರ್ಥನೆಯನ್ನು ನಡೆಸಿ ಮೊಗವೀರರ ಸಮುದಾಯದ ಗುರಿಕಾರರಿಗೆ ಪ್ರಸಾದವನ್ನು ನೀಡಲಾಗುತ್ತದೆ.

ಪಡುಬಿದ್ರಿಯ ನಡಿಪಟ್ಣ,ಕಾಡಿಪಟ್ಣ ಸಂಯುಕ್ತ ಸಭೆಯ ಅಧ್ಯಕ್ಷ ಸುಕುಮಾರ್ ಶ್ರೀಯಾನ್,ಕಾಡಿಪಟ್ಣ ಮೊಗವೀರ ಸಭೆಯ ಅಧ್ಯಕ್ಷ ಲೀಲಾಧರ ಸಾಲ್ಯಾನ್,ನಡಿಪಟ್ಣ ಸಭೆಯ ಅಧ್ಯಕ್ಷ ಶೇಖರ ಸಾಲ್ಯಾನ್ ತಮ್ಮ ಗ್ರಾಮದ ಎಲ್ಲಾ ಯುವಕರ,ಹಿರಿಯರ ದಂಡಿನೊಂದಿಗೆ ಶ್ರೀ ದೇವಸ್ಥಾನಕ್ಕೆ ಆಗಮಿಸಿ ಈ ಬಾರಿ ನಡೆ ದೇಗುಲವನ್ನು ಕಟ್ಟುವ ಕಾಯಕವನ್ನು ನಡೆಸಿದ್ದಾರೆ. ಮೊಗವೀರ ಗ್ರಾಮದ ಎಲ್ಲಾ ಜನಪ್ರತಿನಿಧಿಗಳು,ಕಿರಿಯರು ಈ ಕಾಯಕದಲ್ಲಿ ಭಾಗವಹಿಸುವುದೂ ಸ್ತುತ್ಯಾರ್ಹವಾಗಿದ್ದು ಈ ಕಿರಿಯರೇ ಮುಂದೆ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುವಂತಾದ್ದೂ ಉತ್ತಮ ಗ್ರಾಮಜೀವನದ ಸೊಬಗಿನ ನೋಟವಾಗಿದೆ.