ಶಿಸ್ತು ಮತ್ತು ಸಮಯ ಪ್ರಜ್ಞೆ ಅಳವಡಿಕೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಅಗತ್ಯ-ಶಶಿಕಾಂತ್ ಪಡುಬಿದ್ರಿ

ಪಡುಬಿದ್ರಿ: ಸತತ ಪರಿಶ್ರಮ ಮತ್ತು ಆತ್ಮ ವಿಶ್ವಾಸದಿಂದ ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯವಿದೆ. ಜೀವನದಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಅಳವಡಸಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಅಗತ್ಯವಾದುದು ಎಂದು ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು.

ಗುರುವಾರ ಹೆಜಮಾಡಿ ಕೋಡಿಯ ವಿದ್ಯಾಪ್ರಸಾರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಡುಪಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ವಿದ್ಯಾಪ್ರಸಾರ ವಿದ್ಯಾಮಂದಿರ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ವಲಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಕರಾಟೆ ಪಂದ್ಯಾಟ-2019ನ್ನು ಉದ್ಘಾಟಿಸಿ ಶಶಿಕಾಂತ್ ಮಾತನಾಡಿದರು.

ಹಿರಿಯರ ಸಾಧನೆ ಕಿರಿಯರಿಗೆ ಸ್ಪೂರ್ತಿ. ಕ್ರೀಡಾ ಸಾಧಕರ ಯಶೋಗಾಥೆಯನ್ನು ಮನನ ಮಾಡಿಕೊಂಡು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉನ್ನತ ಸಾಧಕರಾಗಬೇಕು ಎಂದವರು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದಿನ ಕರಾಟೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿ 10, ಪ್ರೌಢ ಶಾಲಾ ಹಂತದಲ್ಲಿ 20 ವಿಜೇತರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದು, ಜುಲೈ 23ರಂದು ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಳಿಸಲಿದ್ದಾರೆ. ಅಲ್ಲಿ ಆಯ್ಕೆಯಾದ 30 ವಿಜೇತರು ಗುಲ್ಬರ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಲಿದ್ದು, ಅಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ನಡೆಯಲಿದೆ. ಈ ಬಾರಿ ವಿವಿಧ ಹಂತಗಳ ವಿಜೇತರಿಗೆ ಸರಕಾರದ ವಿವಿಧ ಇಲಾಖೆಗಳ ಮೂಲಕ ನಗದು ಪುರಸ್ಕಾರವನ್ನೂ ನೀಡಲಾಗುವುದು ಎಂದವರು ಹೇಳಿದರು.

ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ರೋಹಿತಾಕ್ಷ, ರಾಜ್ಯ ಕಾರ್ಯದರ್ಶಿ ಸತೀಶ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಹೆಜಮಾಡಿ ಕೋಡಿ ವಿದ್ಯಾಪ್ರಸಾರ ಫೌಂಡೇಶನ್ ಅಧ್ಯಕ್ಷ ವಿನೋದ್ ಕೋಟ್ಯಾನ್, ಉಪಾಧ್ಯಕ್ಷ ದಯಾನಂದ ಹೆಜಮಾಡಿ, ದೈಹಿಕ ಶಿಕ್ಷಕ ರವೀಂದ್ರ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.

ಶಾಲಾ ಪ್ರಿನ್ಸಿಪಾಲ್ ರಾಜೇಶ್ವರೀ ಎಸ್.ಕರ್ಕೇರ ಸ್ವಾಗತಿಸಿದರು. ನಿಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. ವಿನೋದ್ ಕೋಟ್ಯಾನ್ ವಂದಿಸಿದರು.