ಶಿರೂರು ಶ್ರೀಗಳ ಪರವಾಗಿ ಶಿಮಂತೂರು ದೇವಳದಲ್ಲಿ ವಾರ್ಷಿಕ ಪುಣ್ಯ ಸ್ಮರಣೆ

ಮೂಲ್ಕಿ: ಕಳೆದ ವರ್ಷ ನಿಧನರಾದ ಶಿರೂರು ಮಠದ ಶ್ರೀಗಳಾದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಪ್ರಥಮ ವಾರ್ಷಿಕ ಪುಣ್ಯ ಸ್ಮರಣೆಯ ಪ್ರಯುಕ್ತ ಬುಧವಾರ ಪೂರ್ವಾಶ್ರಮ ಕುಟುಂಬಿಕರಿಂದ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಪವಮಾನ ಸೂಕ್ತ ಹೋಮ ಹಾಗೂ ಶ್ರೀಗಳ ಮೃತ್ತಿಕಾರಾಧನೆಯು ನಡೆಯಿತು.


ಈ ಸಂದರ್ಭ ಮಾಧ್ಯಮೊಂದಿಗೆ ಮಾತನಾಡಿದ ಕೇಮಾರು ಸಾಧನಾಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ, ಶಿರೂರು ಶ್ರೀಗಳ ಆಸ್ವಾಭಾವಿಕ ಸಾವಿನ ಬಗ್ಗೆ ಈಗಾಗಲೇ ಸುಮಾರು 1115 ಪುಟಗಳ ಪೋಲೀಸ್ ತನಿಖಾ ವರದಿಯನ್ನು ಪಡೆಯಲಾಗಿದ್ದು ವೈದ್ಯರ ವರದಿ ಹಾಗೂ ಮುಂದೆ ನಡೆದ ತನಿಖೆಗಳು ಶ್ರೀಗಳ ಸಾವಿನ ಅಸ್ವಾಭಾವಿಕತೆಯನ್ನು ಸೂಚಿಸುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮದ ಬಗ್ಗೆ ಜನ ಮತ್ತು ಜನಾರ್ದನನಲ್ಲಿ ಇಟ್ಟಿದ್ದೇವೆ. ಮುಂದೆ ಶ್ರೀಗಳ ಭಕ್ತ ವೃಂದ ಹಾಗೂ ಆತ್ಮೀಯರು ಸಂಘಟಿತರಾಗಿ ಮುಂದಿನ ಕ್ರಮದ ಬಗ್ಗೆ ಯೋಚಿಸಬೇಕಾಗಿದೆ ಎಂದರು.

ಶಿರೂರು ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮಾತನಾಡಿ, ಶ್ರೀಗಳು ಕೌಟುಂಬಿಕ ಬಂಧನ ತ್ಯಜಿಸಿ ಸ್ವಾಮೀಜಿಯಾಗಿದ್ದವರು. ಆದರೆ ಅವರ ಪೂರ್ವಾಶ್ರಮದ ಕುಟುಂಬ ಅವರ ಮೇಲಿನ ಪ್ರೀತಿಯಿಂದ ನಡೆಸುವ ವಾರ್ಷಿಕ ಕಾರ್ಯಕ್ರಮವನ್ನು ಪ್ರೀತಿ ಶ್ರಾದ್ಧ ಎನ್ನುತ್ತಾರೆ. ಈ ದಿನ ಮೂಲ್ಕಿ ಸೇರಿ ರಾಜ್ಯದಲ್ಲಿ ಐದು ಕಡೆ ಕಾರ್ಯಕ್ರಮಗಳು ನಡೆಯುತ್ತದೆ ಎಂದರು.

ಈ ಸಂದರ್ಭ ದೇವಳದ ಹೊರ ಪ್ರಾಂಗಣದಲ್ಲಿ ನಡೆದ ಪವಮಾನ ಸೂಕ್ತ ಹೋಮದ ಪೂರ್ಣಾಹುತಿಯಲ್ಲಿ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಭಾಗವಹಿಸಿ ಶ್ರೀ ಕ್ಷೇತ್ರದ ಆದಿಜನಾರ್ದನ ದೇವರ ಪ್ರಸಾದ ಸ್ವೀಕರಿಸಿದರು.

ಕಸಾಪ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ರಾಮಮೂರ್ತಿ ರಾವ್, ಪಟೇಲ್ ವಾಸುದೇವ ರಾವ್ ಪುನರೂರು, ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್ ಹಾಗೂ ಶ್ರೀಗಳ ಕುಟುಂಬಸ್ಥರು ಮತ್ತಿತರರಿದ್ದರು.

ಫೋಟೋ: ಕ್ಯಾ: ಶಿರೂರು ಮಠದ ಶ್ರೀಗಳಾದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಪ್ರಥಮ ವಾರ್ಷಿಕ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಪೂರ್ವಾಶ್ರಮ ಕುಟುಂಬಿಕರು ಶಿಮಂತೂರು ಶ್ರೀ ಆದಿಜನಾರ್ದನ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.