ವ್ಯಾಯಾಮ ಶಾಲೆಯಿದ್ದರೆ ಗ್ರಾಮ ನೆಮ್ಮದಿ-ಶ್ರೀ ರಾಜಶೇಖರಾನಂದ ಸ್ವಾಮೀಜಿ

ಗ್ರಾಮಕ್ಕೊಂದು ಪಾಠಶಾಲೆಯೊಂದಿಗೆ ವ್ಯಾಯಾಮ ಶಾಲೆಯಿದ್ದರೆ ಗ್ರಾಮ ನೆಮ್ಮದಿ-ಶ್ರೀ ರಾಜಶೇಖರಾನಂದ ಸ್ವಾಮೀಜಿ

ಪಡುಬಿದ್ರಿ: ಗ್ರಾಮಕ್ಕೊಂದು ಪಾಠಶಾಲೆಯೊಂದಿಗೆ ವ್ಯಾಯಾಮ ಶಾಲೆ ಇದ್ದರೆ ನಮ್ಮ ಸಂಸ್ಕಾರ,ಸಂಸ್ಕøತಿ ಉಳಿಯುವ ಜತೆಗೆ ಗ್ರಾಮ ನೆಮ್ಮದಿಯಾಗಿರಲು ಸಾಧ್ಯವಿದೆ ಎಂದು ಗುರುಪುರ ಉಪ್ಪುಗೋಡು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಸುಮಾರು 50 ಲಕ್ಷ.ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೆಜಮಾಡಿ ಕೋಡಿ ವಿದ್ಯಾಪ್ರಸಾರ ಹಳೆ ವಿದ್ಯಾರ್ಥಿ ಸಂಘದ ಅಂಗ ಸಂಸ್ಥೆಯಾದ ಜನಹಿತ ವ್ಯಾಯಾಮ ಶಾಲೆಗೆ ಹೆಜಮಾಡಿ ಕೋಡಿ ಶಾಲಾ ಆವರಣದಲ್ಲಿ ಶನಿವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚಿಸಿದರು.


ಊರಿಗೆಲ್ಲ ಗಟ್ಟಿಗರು ಪೈಲ್ವಾನರು ಬೇಕೆಂಬ ಉದ್ದೇಶದಿಂದ ಹಿಂದೆ ಊರಿನಲ್ಲೆಲ್ಲ ಹಿಂದೆ ಗರಡಿಗಳನ್ನು ನಿರ್ಮಿಸಿದ್ದರು. ಶಾರೀರಿಕವಾದ ಬಲ ಹೊಂದಿರಬೇಕಾದರೆ ವ್ಯಾಯಾಮ ಶಾಲೆಗಳು ಬೇಕು. ಇಂದೆಲ್ಲ ಜಿಮ್‍ಗಳಿಗೆ ಹೋಗುತ್ತಾರೆ. ಅವರ ಶರೀರ ಸೊಂಟದಿಂದ ಮೇಲೆ ಸದೃಢವಾಗುತ್ತದೆ. ಆದರೆ ವ್ಯಾಯಾಮದಿಂದ ಸರ್ವಾಂಗಗಳ ಬೆಳವಣಿಗೆಯಾಗುತ್ತದೆ ಎಂದವರು ಹೇಳಿದರಲ್ಲದೆ ಕಟ್ಟುಮಸ್ತಿನ ಶರೀರದ ಮೊಗವೀರ ಬಂಧುಗಳು ಕರಾವಳಿ ಭಾಗದ ದೊಡ್ಡ ಆಸ್ತಿ. ಕರಾವಳಿ ತಟ ರಕ್ಷಣೆಯ ದೊಡ್ಡ ಸೌಭಾಗ್ಯದ ಕುಟುಂಬವೆಂದರೆ ಮೊಗವೀರ ಬಂಧುಗಳು. ಅವರಿಂದಾಗಿ ಹಿಂದೂ ಸಮಾಜ ಸುದೃಢವಾಗಿದೆ. ಅಂತಹ ಮೊಗವೀರ ಸಮಾಜದವರು ಸೇರಿ ಮಾಡುವ ಈ ಕಾರ್ಯ ಯಶಸ್ಸಾಗಲಿ ಎಂದು ಹಾರೈಸಿದರು.

ಕಠಿಣ ಆರ್ಥಿಕ ನೀತಿಯಿಂದ ಮೋದಿ ದುಡ್ಡು ಬರದಂತೆ ಮಾಡಿರಬಹುದು. ಎಲ್ಲ ದೇಶಗಳಂತೆ ನಮ್ಮಲ್ಲಿಯೂ ಶಿಸ್ತು ಇರಲಿಲ್ಲ. ಅ ದೇಶಗಳಲ್ಲಿ ಸ್ವಲ್ಪ ಮಟ್ಟಿನ ಶಿಸ್ತು ಬಂದಂತೆ ನಮಗೂ ಶಿಸ್ತು ಕಲಿಸುವ ಕೆಲಸವನ್ನು ಮೋದಿ ಮಾಡಿದರು. ಭಾರತ ಉದ್ಧಾರದ ಕಡೆ ಹೋಗುತ್ತಿದೆ. ಇನ್ನೂ ಹೆಚ್ಚು ಅಭಿವೃದ್ಧಿ ಕಡೆ ಸಾಗಬೇಕು ಅದರ ಸೌಭಾಗ್ಯ ನಮಗೂ ಇರಬೇಕು ಎಂದು ಶ್ರೀಗಳು ಅಭಿಪ್ರಾಯಿಸಿದರು.

ಜನಹಿತ ವ್ಯಾಯಾಮ ಶಾಲೆಯ ಮನವಿ ಪತ್ರವನ್ನು ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ವೇದಮೂರ್ತಿ ರಂಗಣ್ಣ ಭಟ್ ಮತ್ತು ಹರಿ ಭಟ್ ನೇತೃತ್ವದಲ್ಲಿ ಶಿಲಾನ್ಯಾಸ ಧಾರ್ಮಿಕ ವಿಧಿ ನೆರವೇರಿತು.
ಜನಹಿತ ವ್ಯಾಯಾಮ ಶಾಲೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಕೆ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಬಿಜೆಪಿ ಸಹಕಾರಿ ಪ್ರಕೋಷ್ಠದ ಮಿಥುನ್ ಹೆಗ್ಡೆ, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹೆಜಮಾಡಿ ಕೋಡಿ ವಿದ್ಯಾಪ್ರಸಾರ ವಿದ್ಯಾಮಂದಿರದ ಸಂಚಾಲಕ ವಿಜಯ ಎನ್.ಉಚ್ಚಿಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಪಾಲ್ ಸುವರ್ಣ, ಕೋಡಿ ಕ್ರಿಕೆಟರ್ಸ್ ಅಧ್ಯಕ್ಷ ಕಿರಣ್ ಪುತ್ರನ್, ಜನಹಿತ ವ್ಯಾಯಾಮ ಶಾಲೆ ಅಧ್ಯಕ್ಷ ಸುಧಾಕರ ಡಿ ಕೋಟ್ಯಾನ್,ಉಪಾಧ್ಯಕ್ಷ ಸುರೇಶ್ ಕಾಂಚನ್,ವ್ಯಾಯಾಮ ಶಾಲಾ ಶಿಕ್ಷಕ ಬಾಲಕೃಷ್ಣ ಪುತ್ರನ್,ಹಿರಿಯರಾದ ವೈ.ಡಿ. ಸುವರ್ಣ ಉಪಸ್ಥಿತರಿದ್ದರು.

ಸುಜಿತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.ಸುಧಾಕರ ಕೋಟ್ಯಾನ್ ವಂದಿಸಿದರು.