ವಿಶ್ವಕರ್ಮ ಸಮಾಜ ಸರಕಾರದ ಸವಲತ್ತು ಪಡೆಯುವಲ್ಲಿ ವಿಫಲ-ವಿಕ್ರಮ್ ಬಿ.ಆಚಾರ್ಯ

ಪಡುಬಿದ್ರಿ: ಇತರೆಲ್ಲ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಶ್ವಕರ್ಮ ಸಮಾಜ ಸರ್ಕಾರದ ಸವಲತ್ತು ಪಡೆಯುವಲ್ಲಿ ವಿಫಲವಾಗಿದೆ ಎಂದು ಕರ್ನಾಟಕ ವಿಶ್ವಕರ್ಮ ಯುವ ಮಿಲನ್ ರಾಜ್ಯಾಧ್ಯಕ್ಷ ವಿಕ್ರಮ್ ಬಿ.ಆಚಾರ್ಯ ಹೇಳಿದರು.
ಪಡುಬಿದ್ರಿ ಶ್ರೀ ದುರ್ಗಾದೇವಿ ಭಜನಾ ಮಂದಿರದಲ್ಲಿ ಭಾನುವಾರ ನಡೆದ ರಾಜ್ಯ ವಿಶ್ವಕರ್ಮ ಯುವ ಮಿಲನ್ ಸಂಘಟನೆಯ ಕಾಪು ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಹುಟ್ಟಿನಿಂದಲೇ ಕೌಶಲಭರಿತರಾಗಿರುವ ವಿಶ್ವಕರ್ಮ ಸಮುದಾಯ ರಾಜ್ಯದಲ್ಲಿ ಸುಮಾರು 43 ಲಕ್ಷ ಜನ ಸಂಖ್ಯೆ ಹೊಂದಿದ್ದರೂ, ಸಮಾಜದ ಶೇಕಡಾ 20ರಷ್ಷು ಮಂದಿ ಮಾತ್ರ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಹಲವಾರು ಯೋಜನೆಗಳಿದ್ದರೂ ಸಮರ್ಪಕವಾದ ಮಾಹಿತಿ ಇಲ್ಲದೆ ಅದರಿಂದ ವಂಚಿತರಾಗುತ್ತಿದ್ದೇವೆ ಎಂzವÀರು ವಿಷಾಧಿಸಿದರು.

ರಾಜ್ಯದ 13 ಜಿಲ್ಲೆಗಳಿಗೆ ವ್ಯಾಪಿಸಿರುವ ವಿಶ್ವಕರ್ಮ ಯುವ ಮಿಲನ್ ಸಂಘಟನೆ ಸಮಾಜದ ಶೇಯೋಭಿವೃದ್ಧಿ ದೃಷ್ಟಿಯಿಂದ ಸ್ವಂತ ತಂತ್ರಾಂಶವನ್ನು ಸಿದ್ದಪಡಿಸಲಿದೆ. ಈ ತಂತ್ರಾಂಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಮಾಹಿತಿಯನ್ನು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ ಆಮೀನ್ ಸಂಘಟನೆಗೆ ಶುಭ ಹಾರೈಸಿದರು.

ಸನ್ಮಾನ: ಸಂಘಟನೆಯ ರಾಜ್ಯಾಧ್ಯಕ್ಷ ವಿಕ್ರಮ್ ವಿ ಆಚಾರ್ಯ, ಮಂಗಳೂರು ಶ್ರೀ ವೈಷ್ಣವಿ ಎಜುಕೇಶನ್ ಸೆಂಟರ್‍ನ ಆಡಳಿತ ನಿರ್ದೇಶಕ ವಿವೇಕ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ ನೀಡಿ ಶುಭ ಹಾರೈಸಿದರು.
ಸಂಘಟನೆಯ ಕಾಪು ತಾಲೂಕು ಘಟಕದ ಅಧ್ಯಕ್ಷ ಗಂಗಾಧರ ಆಚಾರ್ಯ, ಕಾರ್ಯದರ್ಶಿ ಸತೀಶ್ ಆಚಾರ್ಯ, ಉಪಾಧ್ಯಕ್ಷ ಹರೀಶ್ ಆಚಾರ್ಯ ರಾಯರಕೆರೆ, ಕೋಶಾಧಿಕಾರಿ ಪ್ರಕಾಶ್ ಆಚಾರ್ಯ ಹೆಜಮಾಡಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು.