ವಿಭಜಿತ ದಕ ಜಿಲ್ಲೆಯನ್ನು ಟೆಂಪಲ್ ಸಿಟಿ ಎಂದು ಘೋಷಿಸಿ- ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಹೆಜಮಾಡಿ

ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರದ ವಿಜ್ಞಾಪನ ಪತ್ರ ಬಿಡುಗಡೆ

ಪಡುಬಿದ್ರಿ: ದೇಶದಲ್ಲಿಯೇ ಅತೀ ಹೆಚ್ಚು ದೇವಸ್ಥಾನ, ದೈವಸ್ಥಾನ, ನಾಗಬನಗಳಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯ ಸರಕಾರ ಟೆಂಪಲ್ ಸಿಟಿ ಎಂದು ಘೋಷಿಸಬೇಕೆಂದು ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಹೆಜಮಾಡಿ ಹೇಳಿದ್ದಾರೆ.

ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಭಾನುವಾರ ದೇವಳದ ಸಮಗ್ರ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕರಾವಳಿಯ ಸಮಗ್ರ ಅಭಿವೃದ್ಧಿಗಾಗಿ ಅವಿಭಜಿತ ದಕ ಜಿಲ್ಲೆಯ ಯಾರೊಬ್ಬರನ್ನಾದರೂ ಉಪಮುಖ್ಯಮಂತ್ರಿ ಮಾಡಬೇಕೆಂದೂ ಅವರು ಆಗ್ರಹಿಸಿ, ಹೆಜಮಾಡಿ ಗ್ರಾಮದವನಾಗಿ ದೇವಳದ ಸಮಗ್ರ ಅಭಿವೃದ್ಧಿಗೆ ತಾನು ಹಾಗೂ ತನ್ನ ಸ್ನೇಹಿತರಿಂದ ಸಾಕಷ್ಟು ಸಹಾಯ ಒದಗಿಸುವುದಾಗಿ ಘೋಷಿಸಿದರು.

ದೇವಳದ ಸಮಗ್ರ ಜೀರ್ಣೋದ್ಧಾರದ ನೀಲನಕಶೆಯನ್ನು ಎಮ್‍ಆರ್‍ಜಿ ಗ್ರೂಪ್ಸ್‍ನ ಸಿಎಮ್‍ಡಿ ಹಾಗೂ ಚೇರ್‍ಮೆನ್ ಕೆ.ಪ್ರಕಾಶ್ ಶೆಟ್ಟಿ ಅನಾವರಣಗೊಳಿಸಿ ಮಾತನಾಡಿ, ಸಾವಿರಾರು ದೈವ ದೇವಸ್ಥಾನಗಳ ನೆಲೆವೀಡಿನಲ್ಲಿ ನಾವು ಹುಟ್ಟಿದ್ದೇ ಪುಣ್ಯ. ಅದರ ಋಣಮುಕ್ತರಾಗಲು ಪ್ರತಿಯೊಬ್ಬರೂ ದೇವಳದ ಅಭಿವೃದ್ಧಿಗೆ ಸಹಕರಿಸಬೇಕು. ಗಳಿಕೆಯ ಒಂದಂಶವನ್ನು ತಾನು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಿಗೆ ಸಲ್ಲಿಸುತ್ತಿದ್ದು ಹೆಜಮಾಡಿ ದೇವಳಕ್ಕೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅದೇ ರೀತಿ ಪಡುಬಿದ್ರಿ ದೇವಳದ ಪುನರ್‍ನಿರ್ಮಾಣವೂ ಶೀಘ್ರ ನೆರವೇರಲಿದೆ ಎಂದು ಭರವಸೆ ನೀಡಿದರು.

ಸನ್ಮಾನ: ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ಪ್ರಕಾಶ್ ಶೆಟ್ಟಿಯರನ್ನು ದೇವಳದ ಹಾಗೂ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಉಡುಪಿ ಜಿಲ್ಲೆಯ ಹೆಬ್ಬಾಗಿಲು ಹೆಜಮಾಡಿ. ಇಲ್ಲಿನ ಗ್ರಾಮ ದೇಗುಲದ ಜೀರ್ಣೋದ್ಧಾರ ಹಾಗೂ ಹೆಜಮಾಡಿ ಬಂದರು ಯೋಜನೆ ಶೀಘ್ರ ಜಾರಿಗೊಳ್ಳುವಂತಾಗಲಿ ಎಂದರು.

ದೇವಳದ ತಂತ್ರಿಯವರಾದ ವೇದಮೂರ್ತಿ ಎಡಪದವು ರಾಧಾಕೃಷ್ಣ ತಂತ್ರಿ ಆಶೀರ್ವಚನಗೈದು, ಆದಷ್ಟು ಶೀಘ್ರ ದೇವಳ ಪುನರ್‍ನಿರ್ಮಾಣಗೊಳ್ಳಲಿ ಎಂದರು.
ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉದ್ಯಮಿ ಜಯಂತ್ ಶೆಟ್ಟಿ ಪುಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಂಗಳೂರು ಜಯಶ್ರೀ ಆಸ್ಪತ್ರೆಯ ಡಾ.ಜಯಪ್ರಕಾಶ್ ರಾವ್, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‍ಬೆಟ್ಟು, ಭಾರತ್ ಬ್ಯಾಂಕ್ ಮಾಜಿ ಚೇರ್‍ಮೆನ್ ವಾಸುದೇವ ಆರ್.ಕೋಟ್ಯಾನ್ ಹೆಜಮಾಡಿ, ಜಿಪಂ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ ಮತ್ತು ಗೀತಾಂಜಲಿ ಸುವರ್ಣ, ತಾಪಂ ಸದಸ್ಯೆ ರೇಣುಕಾ ಪುತ್ರನ್, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಪಠೇಲರಮನೆ ಶಂಕರ ಶೆಟ್ಟಿ, ಅರ್ಚಕ ರಾಮಚಂದ್ರ ಭಟ್, ರತ್ನಾಕರ ಶೆಟ್ಟಿ ಮುಂಬೈ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕೊಂಡೆಟ್ಟು ರಘುಪತಿ ರಾವ್, ಮುಂಬೈ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎಸ್.ಶೆಟ್ಟಿ, ಬೆಂಗಳೂರು ಸಮಿತಿಯ ಕೋಶಾಧಿಕಾರಿ ಪುರುಷೋತ್ತಮ ಗುರಿಕಾರ, ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ ಮುಖ್ಯ ಅತಿಥಿಗಳಾಗಿದ್ದರು.

ಸಮಿತಿಯ ಉಪಾಧ್ಯಕ್ಷ ಸುಧಾಕರ ಕರ್ಕೇರ ಸ್ವಾಗತಿಸಿದರು. ಮುಂಬೈ ಸಮಿತಿಯ ಕೋಶಾಧಿಕಾರಿ ಹರೀಶ್ ಹೆಜ್ಮಾಡಿ ಪ್ರಸ್ತಾವಿಸಿದರು. ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಮತ್ತು ದಿವಾಕರ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಮುಂಬೈ ಸಮಿತಿಯ ಕಾರ್ಯದರ್ಶಿ ಓಂದಾಸ್ ಕನ್ನಂಗಾರ್ ವಂದಿಸಿದರು.ಕಾರ್ಯಕ್ರಮ ಆರಂಭಕ್ಕೆ ಮುನ್ನ ಭಾನುವಾರ ಶ್ರೀಕೃಷ್ಣೈಕ್ಯರಾದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರವರಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.