ವಿನೂತನ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ

ಪಡುಬಿದ್ರಿ: ಫಲಿಮಾರಿನ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ನಿವೃತ್ತ ಉದ್ಯೋಗಿಯ ಕನ್ನಡ ಪ್ರೇಮದಿಂದ ವಿನೂತನ ರೀತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿರುವುದು ಕಾರ್ಕಳ ತಾಲೂಕಿನ ಹೆಬ್ರಿಯ ಹಿರಿಯ ನಾಗರಿಕ ಹಾಗೂ ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಥಮ ದರ್ಜೆ ಸಹಾಯಕ ಕೆ. ಗಂಗಾಧರ ರಾವ್. ಅವರಿಗೆ ಬಾಲ್ಯದಿಂದಲೂ ಕನ್ನಡದ ಒಲವು ವಿಶೇಷ. ನಾಡಗೀತೆ, ಭಾವಗೀತೆ ಹಾಗೂ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವ ಇವರದು ಮೇರು ವ್ಯಕ್ತಿತ್ವ.

????????????????????????????????????

38 ವರ್ಷಗಳ ಸುದೀರ್ಘ ಸರಕಾರಿ ಸೇವೆಯಲ್ಲಿ ಅವರು ಅಗಾಧ ಅನುಭವವನ್ನು ಪಡೆದಿದ್ದು, ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಯಾವುದೇ ವಿಷಯದ ಗೊಂದಲ ಅಥವಾ ಸಂಶಯವಿದ್ದರೆ ಕ್ಷಣಮಾತ್ರದಲ್ಲಿ ಅದಕ್ಕೆ ಪರಿಹಾರ ಸೂಚಿಸುವ ಜಾಣ್ಮೆ ಹಾಗೂ ಕೌಶಲ ಅವರಲ್ಲಿದೆ. ವೃತ್ತಿಯಲ್ಲಿ ನಿವೃತ್ತರಾದರೂ ಪ್ರವೃತ್ತಿಯನ್ನು ಮುಂದುವರೆಸಲು ನಿರ್ಧರಿಸಿದ ಅವರು, ನಿವೃತ್ತಿಯ ಬಳಿಕ ಉತ್ತಮ ಫಲಿತಾಂಶವನ್ನು ಗಳಿಸಿದ ಶಾಲಾ ಕಾಲೇಜುಗಳಿಗೆ ಹೋಗಿ, ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಈ ವರ್ಷ ಅವರು ಆರಿಸಿದ್ದು ಸತತ ಎರಡು ಸಲ ದ್ವಿತೀಯ ಪಿಯುಸಿಯಲ್ಲಿ ಶೇಕಡಾ 100 ಫಲಿತಾಂಶ ಗಳಿಸಿದ ಫಲಿಮಾರಿನ ಸರಕಾರಿ ಪದವಿ ಪೂರ್ವ ಕಾಲೇಜನ್ನು. ವಿದ್ಯಾರ್ಥಿಗಳಿಗೆ ರಾಜ್ಯೋತ್ಸವ ಸಂಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ತಮ್ಮದೇ ಸ್ವಂತ ಖರ್ಚಿನಲ್ಲಿ ಬಹುಮಾನಗಳನ್ನು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದ ಅವರು ತಮ್ಮ ಇಳಿ ವಯಸ್ಸಿನಲ್ಲೂ ಹೆಬ್ರಿಯಿಂದ ಫಲಿಮಾರಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡದ್ದು ವಿಶೇಷ.

ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಗಾಯತ್ರಿ ಡಿ ಪ್ರಭು, ಫಲಿಮಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಂಗಲಾ ದೇವಾಡಿಗ, ಪ್ರೌಢಶಾಲಾ ಹಿರಿಯ ಸಹಶಿಕ್ಷಕಿ ಆಶಾ ಕೆ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಸುಜಾತ ನಾಯಕ್ ವಂದಿಸಿದರು. ಸಮಾಜ ವಿಜ್ಞಾನ ಜಯಂತಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿ, ಆಂಗ್ಲಭಾಷಾ ಶಿಕ್ಷಕಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.