ವಿಜಯಾ ಬ್ಯಾಂಕ್ ವಿಲೀನ ಪ್ರಕ್ರಿಯೆಯನ್ನು ಕರಾವಳಿ ಜನತೆ ವಿರೋಧಿಸಬೇಕು-ಐಕಳ ಹರೀಶ್ ಶೆಟ್ಟಿ

ಮೂಲ್ಕಿ: ಮೂಲ್ಕಿ ದಿ.ಸುಂದರ್‍ರಾಮ್ ಶೆಟ್ಟಿಯವರ ಸಾಧನೆಯಿಂದ ಬೆಳೆದು ಗ್ರಾಮೀಣ ಪ್ರದೇಶದ ಜನರ ಜೀವನಾಡಿಯಾಗಿ ದೇಶದಲ್ಲಿಯೇ ಹೆಸರು ಮಾಡಿದ ವಿಜಯಾ ಬ್ಯಾಂಕನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕರಾವಳಿಯ ಜನತೆ ವಿರೋಧಿಸಬೇಕು ಎಂದು ವಿಶ್ವ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

ಮೂಲ್ಕಿ ಬಪ್ಪನಾಡು ಕ್ಷೇತ್ರದ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮೂಲ್ಕಿ ಸುಂದರ್‍ರಾಮ್ ಶೆಟ್ಟಿಯವರ ಸಮಾಧಿ ಸ್ಥಳದಲ್ಲಿ ಫೆಬ್ರವರಿ 2ರಂದು ಅಪರಾಹ್ನ 3 ಗಂಟೆಗೆ ನಡೆಯಲಿರುವ ದ.ಕ-ಉಡುಪಿ ಜಿಲ್ಲಾ ನಾಗರಿಕರಿಂದ ನಡೆಯಲಿರುವ ಪ್ರತಿಭಟನೆಗೆ ಪೂರ್ವಭಾವಿಯಾಗಿ ಬ್ಯಾನರ್ ಮತ್ತು ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರತಿಭಟನಾ ಸಮಿತಿಯ ಗೌರವ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಉತ್ತಮ ವ್ಯವಹಾರದಿಂದ ಜನಮನ್ನಣೆಗೆ ಕಾರಣವಾಗಿದ್ದು ಲಾಭದಾಯಕವಾಗಿರುವ ಸಂಸ್ಥೆಯ ಹೆಸರನ್ನು ಅಳಿಸುವ ಪ್ರಕ್ರಿಯೆಯನ್ನು ಪ್ರತಿಯೋಬ್ಬರು ವಿರೋಧಿಸಬೇಕು. ಕೇಂದ್ರ ಸರಕಾರ ಈ ಬಗ್ಗೆ ಚಿಂತನೆ ನಡೆಸಿ ವಿಜಯಾ ಬ್ಯಾಂಕ್ ಹೆಸರು ಉಳಿಸುವ ಕಾರ್ಯ ನಡೆಯುವಂತೆ ನಮ್ಮ ಆಗ್ರಹವಿರಬೇಕು ಎಂದರು.

ವಿಜಯಾ ಬ್ಯಾಂಕ್ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೆಪಾಡಿ ಪ್ರಸ್ತಾವಿಸಿ, ಫೆ.2ರಂದು 3ಗಂಟೆಗೆ ಬಪ್ಪನಾಡು ಕ್ಷೇತ್ರದ ಬಳಿಯ ದಿ.ಸುಂದರರಾಮ್ ಶೆಟ್ಟಿಯವರ ಸಮಾಧಿ ಸ್ಥಳದಿಂದ ಪ್ರತಿಭಟನಾ ಜಾಥಾವು ಪ್ರಾರಂಭಗೊಂಡು ಕಾರ್ನಾಡು ಗಾಂಧಿ ಮೈದಾನಕ್ಕೆ ತೆರಳಿ ಅಲ್ಲಿ ಸಂಜೆ ಗಂಟೆ 5ರ ವರೆಗೆ ಪ್ರತ್ರಿಭಟನೆ ನಡೆಯಲಿದೆ. ಅವಿಭಜಿತ ಜಿಲ್ಲೆಯ ಎಲ್ಲಾ ನಾಗರೀಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದರು.

ಈ ಸಂದರ್ಭ ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ,ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‍ಕುಮಾರ್ ಹೆಗ್ಡೆ,ಸುರೇಶ್ ಶೆಟ್ಟಿ ಸೂರಿಂಜೆ,ಉದಯ ಕುಮಾರ್,ರತ್ನಾಕರ ಶೆಟ್ಟಿ ಮುಂಡ್ಕೂರು,ರಂಗನಾಥ ಶೆಟ್ಟಿ,ದೇವ ಪ್ರಸಾದ್ ಪುನರೂರು,ಪ್ರಕಾಶ್ ರಾವ್,ಡಾ. ಎಂ.ಎ.ಆರ್.ಕುಡ್ವಾ,ಚಂದ್ರಹಾಸ ಆಳ್ವಾ,ರೋಹನ್,ಶ್ರೀಷಾ ಐಕಳ,ಆಪತ್ಭಾಂದವ ಆಶ್ರಪ್,ದೇವಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.