ವಾರದೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಉಗ್ರ ಪ್ರತಿಭಟನೆ-ನವೀನ್‍ಚಂದ್ರ ಜೆ.ಶೆಟ್ಟಿ

ವಾರದೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಉಗ್ರ ಪ್ರತಿಭಟನೆ-ನವೀನ್‍ಚಂದ್ರ ಜೆ.ಶೆಟ್ಟಿ

ಹೆಜಮಾಡಿ ಟೋಲ್ ವಿರುದ್ಧ ಪಡುಬಿದ್ರಿಯಲ್ಲಿ ಕರವೇ ವತಿಯಿಂದ ಧರಣಿ 5 ನೇ ದಿನಕ್ಕೆ

ಪಡುಬಿದ್ರಿ:  ಕಳೆದ ಹಲವು ದಿನಗಳಿಂದ ಸ್ಥಳಿಯರಿಗೆ ಟೋಲ್‍ನಲ್ಲಿ ವಿನಾಯಿತಿ ನೀಡಿವಂತೆ ಹೆಜಮಾಡಿಯ ನವಯುಗ್ ಟೋಲ್ ಬಳಿ ಕೇಳುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ ನವಯುಗ್ ವಿರುದ್ಧ ಉಗ್ರ ಹೋರಾಟಕ್ಕೆ ಇಳಿಯಬೇಕಾದೀತು ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಪೂರ್ವಾಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ ಎಚ್ಚರಿಸಿದ್ದಾರೆ.

ಪಡುಬಿದ್ರಿಯ ಕಾರ್ಕಳ ಕ್ರಾಸ್‍ನಲ್ಲಿ ಕಳೆದ 4 ದಿನಗಳಿಂದ ಕರವೇ ವತಿಯಿಂದ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ಮತ್ತು ಹೆದ್ದಾರಿ ಕಾಮಗಾರಿ ತ್ವರಿತಕ್ಕೆ ಒತ್ತಾಯಿಸಿ ನಡೆಯುತ್ತಿರುವ ಧರಣಿ ಮುಷ್ಕರದಲ್ಲಿ ಪಾಲ್ಗೊಂಡ ಅವರು,ಸಾಸ್ತಾನದಲ್ಲಿ ನೀಡಿದಂತೆ ಹೆಜಮಾಡಿ ಟೋಲ್‍ನಲ್ಲಿ ಪಡುಬಿದ್ರಿ ಜಿಪಂ ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲೇಬೇಕೆಂದು ಆಗ್ರಹಿಸಿದರು.

ತಪ್ಪಿದಲ್ಲಿ ಮುಂದಿನ ಹತ್ತು ದಿನದೊಳಗೆ ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಸ್‍ಡಿಪಿಐ ಸಾಥ್: ಶುಕ್ರವಾರದ ಧರಣಿಗೆ ಎಸ್‍ಡಿಪಿಐ ಸಾಥ್ ನೀಡಿದ್ದು,ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ,ಟೋಲ್ ವಿನಾಯಿತಿಗೆ ಎಸ್ಡಿಪಿಐ ಸಂಪೂರ್ಣ ಬೆಂಬಲ ನೀಡಲಿದ್ದು,ಶೀಘ್ರ ಟೋಲ್ ವಿನಾಯಿತಿ ನೀಡಬೇಕು.ಜತೆಗೆ ಸುರತ್ಕಲ್ ಟೋಲ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಎಸ್‍ಡಿಪಿಐ ನಾಯಕ ಅಶ್ರಫ್ ಮಾಚಾರ್ ಮಾತನಾಡಿ,ನಮ್ಮ ನ್ಯಾಯಯುತ,ಕಾನೂನಾತ್ಮಕ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕು.ನಾವು ಯಾವುದೇ ಆಸೆ ಆಮಿಷಗಳಿಗೆ ಬಗ್ಗಲಾರೆವು.ಸುರತ್ಕಲ್,ಹೆಜಮಾಡಿ,ಸಾಸ್ತಾನ ಟೋಲ್‍ಗಳಿಂದಾಗಿ ಕೌಟಂಬಿಕ ಸಾಮರಸ್ಯಕ್ಕೆ ತೊಡಕಾಗಿದೆ.ಯಾವಾಗಲೂ ಕುಟುಂಬ ಸದಸ್ಯರ ಸಮ್ಮಿಲನವು ಟೋಲ್ ಸಮಸ್ಯೆಯಿಂದ ಕಡಿತಗೊಳ್ಳುತ್ತಿದೆ.ನಮ್ಮ ಬೇಡಕೆ ಈಡೇರದಿದ್ದಲ್ಲಿ ಉಗ್ರ ಪ್ರತಿಭಟನೆಗೆ ಸಾಥ್ ನೀಡಲಿದ್ದೇವೆ ಎಂದರು.

ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್,ಕಾಪು ಘಟಕಾಧ್ಯಕ್ಷ ನಿಝಾಮುದ್ದೀನ್,ಆಸಿಫ್ ಆಪತ್ಬಾಂಧವ,ಹನೀಫ್ ಮೂಳೂರು,ಫಿರೋಝ್ ಕಂಚಿನಡ್ಕ ಮತ್ತಿತರರು ಉಪಸ್ಥಿತರಿದ್ದರು.