ಲಾರಿ ಮಾಲಕರ ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ

ಲಾರಿ ಮಾಲಕರ ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ-ಕಿನ್ನಿಗೋಳಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಹೆಗ್ಡೆ ಎಚ್ಚರಿಕೆ

ಮೂರುಕಾವೇರಿಯಿಂದ ಮೂಲ್ಕಿ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಪಾದಯಾತ್ರೆ

ಮೂಲ್ಕಿ: ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಸಾಗಿಸುವ ಲಾರಿಗಳ ವಿರುದ್ಧ ಸರಕಾರವು ವಿಧಿಸಿದ ಕಠಿಣ ಕಾನೂನುಗಳಿಂದ ಲಾರಿಗಳನ್ನು ರಸ್ತೆಗಿಳಿಸುವುದೇ ಅಸಾಧ್ಯವಾಗಿದ್ದು ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ನಡೆಸಬೇಕಾದೀತು ಎಂದು ಕಿನ್ನಿಗೋಳಿ ಲಾರಿ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್‍ಕುಮಾರ್ ಹೆಗ್ಡೆ ಎಚ್ಚರಿಸಿದ್ದಾರೆ.

ಕಿನ್ನಿಗೋಳಿ ಲಾರಿ ಮಾಲಕರ ಸಂಘವು ಬುಧವಾರ ಬೃಹತ್ ಪಾದಯಾತ್ರೆಯ ಬಳಿಕ ಮೂಲ್ಕಿ ಗಾಂಧಿ ಮೈದಾನದಲ್ಲಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು,ಸರಕಾರದ ಕಠಿಣ ಕಾನೂನುಗಳಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಮನೆ ಕಟ್ಟುವುದೇ ಅಸಾಧ್ಯವಾಗಿದೆ.ಜನಸಾಮಾನ್ಯರಿಗೆ ರಿಯಾಯತಿ ದರದಲ್ಲಿ ಹಾಗೂ ಕ್ಲಪ್ತ ಸಮಯದಲ್ಲಿ ಸಾಮಾಗ್ರಿಗಳು ಸುಲಭವಾಗಿ ದೊರಕುವಂತಾಗಲು ಸರಕಾರವು ಕಠಿಣ ಕಾನೂನನ್ನು ಸುಲಭಗೊಳಿಸಬೇಕು.ನಿರ್ಮಾಣ ಹಂತದಲ್ಲಿ ಸಾಮಾಗ್ರಿಗಳ ಸಾಗಣಿಕೆ ಸಮಯದಲ್ಲಿ ಕಾನೂನು ಹೆಸರಲ್ಲಿ ಸರಕಾರ ನಡೆಸುವ ಅನ್ಯಾಯಗಳನ್ನು ತಕ್ಷಣ ನಿಲ್ಲಿಸಬೇಕು.ಈಗಾಗಲೇ ಹಲವಾರು ಲಾರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು ಅವುಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು.ಪ್ರಸ್ತುತ ಲಾರಿಗಳ ಇನ್ಸೂರೆನ್ಸ್ ಮೊತ್ತದ ದುಪ್ಪಟ್ಟು ದಂಡವನ್ನು ಕಡಿತಗೊಳಿಸಬೇಕು.ಮರಳು ಹಾಗೂ ನಿರ್ಮಾಣ ಸಾಮಾಗ್ರಿಗಳನ್ನು ಸಾಗಿಸುವ ಲಾರಿಗಳಿಗೆ ಅತಿ ಸರಳ ನಿಯಮಗಳನ್ನು ಜಾರಿಗೊಳಿಸಿ ರಿಯಾಯತಿ ದರದಲ್ಲಿ ಪರ್ಮಿಟ್ ವ್ಯವಸ್ಥೆ ಕಲ್ಪಿಸಬೇಕು ಎಂದವರು ಒತ್ತಾಯಿಸಿದರು.

ಸಾಗಣಿಕಾ ಉದ್ಯಮವು ಪುನಶ್ಚೇತನಗೊಳಿಸಲು ಅಗತ್ಯವಾಗಿರುವ ನಿಯಮಗಳನ್ನು ರೂಪಿಸಲು ಸೂಕ್ತ ಕ್ರಮ ಕೈಗೊಂಡು ಇದೇ ಉದ್ಯಮವನ್ನು ನಂಬಿ ಬದುಕು ಸಾಗಿಸುತ್ತಿರುವ ಲಾರಿ ಮಾಲಕರು,ಚಾಲಕರು ಮತ್ತು ಕಾರ್ಮಿಕರಿಗೆ ನೆಮ್ಮದಿಯ ಜೀವನ ನಡೆಸಲು ಸರಕಾರ ಅನುವು ಮಾಡಿಕೊಡಬೇಕೆಂದು ಅವರು ವಿನಂತಿಸಿದರು.

ಮನವಿ ಸಲ್ಲಿಕೆ: ಇದೇ ಸಂದರ್ಭ ಲಾರಿ ಮಾಲಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗೆ ನೀಡಲಾದ ಮನವಿಯನ್ನು ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯರವರಿಗೆ ಸಂತೋಷ್ ಕುಮಾರ್ ಹೆಗ್ಡೆ ನೀಡಿ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ವಿನಂತಿಸಿದರು.ಮನವಿ ಸ್ವೀಕರಿಸಿದ ಮಾಣಿಕ್ಯರವರು ಮನವಿಯನ್ನು ತಕ್ಷಣ ಜಿಲ್ಲಾಧಿಕಾರಿಗಳಿಗೆ ತಲುಪಿಸಿ ಸಮಸ್ಯೆಯ ಶೀಘ್ರ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಕಂದಾಯ ನಿರೀಕ್ಷಕ ದಿಲೀಪ್ ರೋಡ್ಕರ್,ತಾಪಂ ಸದಸ್ಯರಾದ ಶರತ್‍ಕುಮಾರ್ ಕುಬೆವೂರು ಮತ್ತು ದಿವಾಕರ ಕರ್ಕೇರ, ಕಿನ್ನಿಗೋಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ,ಉದ್ಯಮಿ ಸ್ವರಾಜ್ ಶೆಟ್ಟಿ, ಮೂಲ್ಕಿ ನಪಂ ಸದಸ್ಯ ಪುತ್ತುಬಾವ,ಮಾಜಿ ಸದಸ್ಯ ಅಬ್ದುಲ್ ರಜಾಕ್,ಬಳ್ಕುಂಜೆ ಗ್ರಾಪಂ ಅಧ್ಯಕ್ಷ ದಿನೇಶ್ ಪುತ್ರನ್,ಕೆಮ್ರಾಲ್ ಗ್ರಾಂಪಂ ಸದಸ್ಯ ಮೈಯದ್ದಿ,ಶರತ್ ಶೆಟ್ಟಿ ಕಿನ್ನಿಗೋಳಿ,ಲಕ್ಷ್ಮಣ ಪುನರೂರು,ರಿಯಾಜ್ ಕೈಕಂಬ,ಪ್ರವೀಣ್ ಕೈಕಂಬ,ನೆಲ್ಸನ್,ಲಾರಿ ಮಾಲಕರ ಸಂಘದ ಗೌರವಾಧ್ಯಕ್ಷ ಕುಪ್ಪುಸ್ವಾಮಿ,ಉಪಾಧ್ಯಕ್ಷ ಮೂಸಬ್ಬ ಪಕ್ಷಿಕೆರೆ,ಪ್ರಧಾನ ಕಾರ್ಯದರ್ಶಿ ಬರ್ಟನ್ ಸ್ವೀಕ್ವೆರಾ,ಕಾರ್ಯದರ್ಶಿ ಅಬೂಬಕ್ಕರ್ ಗುತ್ತಕಾಡು,ಕೋಶಾಧಿಕಾರಿ ರಘುರಾಮ ಪುನರೂರು,ಪ್ರಸಾದ್ ಬಳ್ಕುಂಜೆ,ಪಕ್ಷಿಕೆರೆ ಫ್ರೆಂಡ್ಸ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಪಾದಯಾತ್ರೆ: ಕಿನ್ನಿಗೋಳಿ ಸಮೀಪದ ಮೂರುಕಾವೇರಿಯಿಂದ ಸುಮಾರು 300ಕ್ಕೂ ಅಧಿಕ ಲಾರಿ ಮಾಲೀಕರು,ಚಾಲಕರು,ಕಟ್ಟಡ ಕಾರ್ಮಿಕರು ಪಾದಯಾತ್ರೆಯೊಂದಿಗೆ ಕಿನ್ನಿಗೋಳಿ,ಪದ್ಮನ್ನೂರು,ಪುನರೂರು,ಗೇರುಕಟ್ಟೆ ಮೂಲಕ ಮೂಲ್ಕಿಯ ಕಾರ್ನಾಡು ಗಾಂಧಿ ಮೈದಾನದವರೆಗೆ ಬಂದು ಪ್ರತಿಭಟನೆ ನಡೆಸಿದರು.ಈ ಸಂದರ್ಭ ಕಾನೂನು ನೆಪದಲ್ಲಿ ಸತಾಯಿಸಬೇಡಿ,ನಮಗೆ ನ್ಯಾಯ ಕೊಡಿ,ಜನವಿರೋಧೀ ಕಾನೂನು ರದ್ದುಪಡಿಸಿ,ಜನಸ್ನೇಹಿ ಕಾನೂನು ರೂಪಿಸಿ-ಇತ್ಯಾದಿ ನಾಮಫಲಕಗಳನ್ನು ಪ್ರದರ್ಶಿಸಿದರು.