ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯಿಂದ 175 ಸಾವಿರ ಡಾಲರ್-ಡಾ.ತಲ್ಲೂರು ಶಿವರಾಮ ಶೆಟ್ಟಿ

ಪಡುಬಿದ್ರಿ: ಲಯನ್ಸ್ ವತಿಯಿಂದ ಹಮ್ಮಿಕೊಂಡ ಸಾಮಾಜಿಕ ಜವಾಬ್ದಾರಿಯ ಕಾರ್ಯಚಟುವಟಿಕೆಗಳಿಗೆ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ಈ ಬಾರಿ 175 ಸಾವಿರ ಡಾಲರ್ ಸಹಾಯಧನ ದೊರಕಿದೆ ಎಂದು ಲಯನ್ಸ್ ಜಿಲ್ಲೆ 317-ಸಿ ಯ ಜಿಲ್ಲಾ ಗವರ್ನರ್ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಪಡುಬಿದ್ರಿಯ ಹೋಟೆಲ್ ಅಮರ್ ಕಂಪಟ್ರ್ಸ್‍ನ ಆಮಂತ್ರಣ ಸಭಾಂಗಣದಲ್ಲಿ ಪಡುಬಿದ್ರಿ ಲಯನ್ಸ್ ಕ್ಲಬ್ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಪೈಕಿ ಶಿಕಾರಿಪುರ ಶಾಲಾ ಕಟ್ಟಡ ನಿರ್ಮಾಣಕ್ಕೆ 85 ಸಾವಿರ ಡಾಲರ್ ಮತ್ತು ಹೊಳೆಹೊನ್ನೂರು ಶಾಲೆಗೆ 80 ಸಾವಿರ ಡಾಲರ್ ದೊರಕಿದೆ.10ಸಾವಿರ ಡಾಲರ್ ಉಡುಪಿ ಜಿಲ್ಲೆಗೆ ದೊರಕಿದೆ ಎಂದವರು ಹೇಳಿದರು.

ಈ ಮೂಲಕ ಸುಮಾರು 45 ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಲ್ಲೂರು ಹೇಳಿದರು.

ಈ ಬಾರಿ 9 ಕಡೆಗಳಲ್ಲಿ ಸುಮಾರು 750 ಅರ್ಹರಿಗೆ ಜೀವನಾವಶ್ಯಕ ಸಾಮಾಗ್ರಿಗಳನ್ನು ವಿತರಿಸಲಾಗಿದ್ದು,ಸುಮಾರು 20 ಸಾವಿರ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಗಿಡಗಳನ್ನು ವಿತರಿಸಲಾಗಿದೆ ಎಂದವರು ಹೇಳಿದರು.

ಈ ಬಾರಿ ಲಯನ್ಸ್ ಜಿಲ್ಲೆಯಿಂದ ಸುಮಾರು 32 ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ರಕ್ತದಾನ ಜಾಗೃತಿ ನಡೆಸಲಾಗಿದೆ.ಹಾಗೂ ಸಹಸ್ರಾರು ಅರ್ಹರಿಗೆ ಡಾ.ಆರ್.ಎನ್.ಭಟ್‍ರವರು ಲಯನ್ಸ್ ವತಿಯಿಂದ ಉಚಿತ ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸಿದ್ದಾರೆ.ಯುವ ಜನತೆಯನ್ನು ಸಕಾರಾತ್ಮಕವಾಗಿ ಚಿಂತಿಸುವ ಸಲುವಾಗಿ ತರಬೇತಿ ಶಿಬಿರಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ.

ಈ ಬಾರಿ ಈಗಾಗಲೇ 10 ಹೊಸ ಲಯನ್ಸ್ ಕ್ಲಬ್‍ಗಳನ್ನು ಆರಂಭಿಸಲಾಗಿದ್ದು ಮತ್ತೆರಡು ಲಯನ್ಸ್ ಕ್ಲಬ್‍ಗಳು ಶೀಘ್ರ ಆರಂಭಗೊಳ್ಳಲಿದೆ.ಈ ಬಾರಿ 20 ಲಯನ್ಸ್ ಸಂಸ್ಥೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.ಈ ಮೂಲಕ ಲಯನ್ಸ್ ಸೇವೆಗೆ ಮತ್ತಷ್ಟು ಸೇವಾಕರ್ತರನ್ನು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ತಲ್ಲೂರು ಹೇಳಿದರು.
ಕಣ್ಣಿನ ರಕ್ಷಣೆ: ಲಯನ್ಸ್‍ನ ಅತೀ ಪ್ರಮುಖ ಸೇವೆಯಾದ ನೇತ್ರ ಚಿಕಿತ್ಸೆಗಾಗಿ ಲಯನ್ಸ್ ಜಿಲ್ಲೆ ಹಲವಾರು ಪರಿಣಾಮಕಾರೀ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದವರು ಹೇಳಿದರು.

ಶಾಶ್ವತ ಯೋಜನೆ: ವಸತಿರಹಿತರ ನೆರವಿಗಾಗಿ ವಿನೂತನ ಯೋಜನೆ ಹಮ್ಮಿಕೊಂಡಿದ್ದು ಈ ಬಾರಿ 4 ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲಾಗಿದೆ.ಕಲ್ಯಾಣಪುರ,ಅಂಬಲಪಾಡಿ,ಅಲೆವೂರು ಮತ್ತು ಭದ್ರಾವತಿಗಳಲ್ಲಿ ಈಗಾಗಲೇ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ ಎಂದವರು ಹೇಳಿದರು.
ಮಡಿಕೇರಿ ದುರಂತಕ್ಕೆ 5ಲಕ್ಷ ರೂ.ಪರಿಕರ: ಇತ್ತೀಚಿಗೆ ಮಡಿಕೇರಿಯಲ್ಲಿ ನಡೆದ ನೆರೆ ಮತ್ತು ಭೂಕುಸಿತ ಸಂದರ್ಭ ಲಯನ್ಸ್ ಜಿಲ್ಲೆಯ ವತಿಯಿಂದ ಸುಮಾರು 5 ಲಕ್ಷ ರೂ.ವೆಚ್ಚದ ಪರಿಕರಗಳನ್ನು ವಿತರಿಸಲಾಗಿದೆ ಒಂದು ವಾರ ಕಾಲ ಲಯನ್ಸ್ ತಂಡ ಅಲ್ಲೇ ಇದ್ದು ಸುಮಾರು 3 ಲೋಡ್‍ಗಳಷ್ಟು ಸಾಮಾಗ್ರಿಗಳನ್ನು ವ್ಯವಸ್ಥಿತವಾಗಿ ಹಂಚಲಾಗಿದೆ ಎಂದವರು ಹೇಳಿದರು.

ಪಡುಬಿದ್ರಿ ಲಯನ್ಸ್ ಅಧ್ಯಕ್ಷ ಮಿಥುನ್ ಆರ್.ಹೆಗ್ಡೆ ಮಾತನಾಡಿ,ಪಡುಬಿದ್ರಿ ಲಯನ್ಸ್ ವತಿಯಿಂದ ಈ ಬಾರಿ ಬಡಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ.ಮನೆ ನಿರ್ಮಾಣಕ್ಕೆ,ಮದುವೆ ಖರ್ಚಿಗಾಗಿ,ಮನೆಯ ವಿದ್ಯುತ್ ಸಂಪರ್ಕಕ್ಕಾಗಿ ಪಡುಬಿದ್ರಿ ಲಯನ್ಸ್ ನಿರಂತರ ಸಹಾಯ ನೀಡುತ್ತಾ ಬಂದಿದೆ ಎಂದರು.ಸ್ಥಳೀಯ ಅಂಗನವಾಡಿಗಳ ವಿದ್ಯುತ್ ಸಂಪರ್ಕಕ್ಕಾಗಿ ಈಗಾಗಲೇ ಸಹಾಯಹಸ್ತ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಸಂಜೀವ ಟಿ.ಕರ್ಕೇರ,ಪಡುಬಿದ್ರಿ ಲಯನ್ಸ್ ಅಧ್ಯಕ್ಷ ಮಿಥುನ್ ಆರ್.ಹೆಗ್ಡೆ,ಕಾರ್ಯದರ್ಶಿ ಲಕ್ಷ್ಮಣ ಡಿ.ಪೂಜಾರಿ,ಕೋಶಾಧಿಕಾರಿ ಪಿ.ಸದಾಶಿವ ಆಚಾರ್,ಲಯನ್ಸ್ ಜಿಲ್ಲಾ ಸಹಾಯಕ ಗವರ್ನರ್ ಎನ್.ಎಮ್.ಹೆಗ್ಡೆ ಉಪಸ್ಥಿತರಿದ್ದರು.