ರಾಹೆ 66ರ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗುವ ತನಕ ಉಡುಪಿ,ದಕ ಜಿಲ್ಲೆಗಳ ವಾಹನಗಳಿಗೆ ಟೋಲ್ ಇಲ್ಲ-ನಿತಿನ್ ಗಡ್ಕರಿಯಿಂದ ಸಂಸದ ನಳಿನ್‍ಗೆ ಭರವಸೆ

ಪಡುಬಿದ್ರಿ; ರಾಷ್ಟ್ರೀಯ ಹೆದ್ದಾರಿ 66ರರಲ್ಲಿ ಎಲ್ಲಾ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳವವರೆಗೆ ಕೆಎ10 ಮತ್ತು ಕೆಎ20 ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗುವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆಂದು ಮಂಗಳೂರು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.

ಹೆಜಮಾಡಿಯಲ್ಲಿ ಟೋಲ್ ವಿರುದ್ಧ ಅವಿಭಜಿತ ದಕ ಜಿಲ್ಲೆಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ನಡೆದ ಸಾಂಕೇತಿಕ ಪ್ರತಿಭಟನೆ ಸಂದರ್ಭ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಜತೆಗೆ ದೂರವಾಣಿ ಮೂಲಕ ಮಾತನಾಡಿದ ಕಟೀಲ್‍ರವರು ಈ ಭರವಸೆ ನೀಡಿದರು.ಇದಕ್ಕೆ ಮುನ್ನ ಅವರು ನಿತಿನ್ ಗಡ್ಕರಿ ಜತೆ ದೂರವಾಣಿ ಸಂಭಾಷಣೆ ನಡೆಸಿದರು.

ಅದಕ್ಕೆ ಮುನ್ನ ಸೆ.24ರಂದು ಬೆಂಗಳೂರಿನಲ್ಲಿ ಹೆದ್ದಾರಿ ಪ್ರಾಧಿಕಾರ,ನವಯುಗ್ ಕಂಪನಿ,ಜನಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ ನಡೆಸಿ ದಕ ಉಡುಪಿ ಜಿಲ್ಲೆಯ ಎಲ್ಲಾ ವಾಹನಗಳಿಗೆ ಜಿಲ್ಲೆಯ ಟೋಲ್‍ಗಳಲ್ಲಿ ಸಂಪೂರ್ಣ ಟೋಲ್ ವಿನಾಯಿತಿಗೆ ಕ್ರಮಕೈಗೊಳ್ಳಲಾಗುವುದು ಎಂದು ನಳಿನ್ ಹೇಳಿದರು.

ಅರಣ್ಯ ಸಚಿವರ ಭರವಸೆ: ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದ ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಹೆಜಮಾಡಿ ಟೋಲ್ ಬಳಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ,ಸಮಸ್ಯೆಯ ಪರಿಹಾರಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಸಮಾಲೋಚಿಸಿ ಶೀಘ್ರ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಕೋಟ,ಸೊರಕೆ ಉಪಸ್ಥಿತಿಯಲ್ಲಿ ತಹಶೀಲ್ದಾರ್‍ರಿಗೆ ಮನವಿ: ಹೋರಾಟ ಸಮಿತಿಯ ವತಿಯಿಂದ ಕೇಂದ್ರ ಹಾಗೂ ರಾಜ್ಯ ಭೂಸಾರಿಗೆ ಸಚಿವಾಲಯ,ಉಭಯ ಸಂಸದರು,ಜನಪ್ರತಿನಿಧಿಗಳು ಮತ್ತು ಉಭಯ ಜಿಲ್ಲಾಡಳಿತಕ್ಕೆ ಸಲ್ಲಿಸಲಾದ ಮನವಿಯನ್ನು ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಾಜಿ ಸಚಿವ ವಿನಯಕುಮಾರ್ ಸೊರಕೆ ಉಪಸ್ಥಿತಿಯಲ್ಲಿ ಕಾಪು ತಹಶೀಲ್ದಾರ್ ಗುರುಸಿದ್ಧಯ್ಯ ಹಿರೇಮಠರವರಿಗೆ ಸಲ್ಲಿಸಲಾಯಿತು.ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ,ಉಪಾಧ್ಯಕ್ಷ ಗುಲಾಂ ಮೊಹಮ್ಮದ್,ಗೌರವ ಸಲಹೆಗಾರ ಕಾಪು ದಿವಾಕರ ಶೆಟ್ಟಿ ಮನವಿ ಸಲ್ಲಿಸಿದರು.

ಮನವಿಯಲ್ಲಿ ಕುಂದಾಪುರದಿಂದ ತಲಪಾಡಿವರೆಗೆ ಬಾಕಿ ಇರುವ ಕಾಮಗಾರಿಗಳನ್ನು ತುರ್ತಾಗಿ ಪೂರೈಸುವುದು.ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ,ಅಪಘಾತ ವಲಯಗಳ ಗುರುತಿಸುವಿಕೆ,ವಿದ್ಯಾಸಂಸ್ಥೆ,ಧಾರ್ಮಿಕ ಕೇಂದ್ರಗಳಿರುವಲ್ಲಿ ಮೇಲ್ಸೇತುವೆ ಅಥವಾ ಅಂಡರ್‍ಪಾಸ್,ಟೋಲ್ ಪ್ಲಾಝಾಗಳಲ್ಲಿ ಪಾದಾಚಾರಿಗಳಿಗೆ ಕಾಲುದಾರಿ,ಪ್ರಮುಖ ಸ್ಥಳಗಳಲ್ಲಿ ಬಸ್ಸು ತಂಗುದಾಣ,ಎಲ್ಲೆಡೆ ದಾರಿದೀಪ ಮತ್ತು ಚರಂಡಿ ವ್ಯವಸ್ಥೆ,ಕೆಎ-20 ಮತ್ತು ಕೆಎ-19 ವಾಹನಗಳಿಗೆ ಸಂಪೂರ್ಣ ಸುಂಕ ವಿನಾಯಿತಿ,ಕನ್ನಂಗಾರ್ ಬಳಿ ತುರ್ತಾಗಿ ಸರ್ವಿಸ್ ರಸ್ತೆ,ಶಿವನಗರ ಬಳಿ ಸ್ಕೈವಾಕ್,ರಾಹೆಗಳು ರಾಜ್ಯ ಹೆದ್ದಾರಿ ಸಂಪರ್ಕಿಸುವಲ್ಲಿ ಮೇಲ್ಸೇತುವೆ,ನದಿಗಳಿರುವಲ್ಲಿ ದ್ವಿಮುಖ ಸೇತುವೆ,ಸುರತ್ಕಲ್ ಟೋಲ್ ತಕ್ಷಣ ನಿಲುಗಡೆ ಇತ್ಯಾದಿ ವಿಷಯಗಳ ಬಗ್ಗೆ ಗಮನ ಸೆಳೆಯಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ,ದರೋಡೆ ರೀತಿಯಲ್ಲಿ ಮಾಡುವ ಸುಂಕ ವಸೂಲಾತಿಯನ್ನು ತಕ್ಷಣ ನಿಲ್ಲಿಸಬೇಕು.ಜನರ ಸಮಸ್ಯೆ ಬಂದಾಗ ಕರಾವಳಿಯಲ್ಲಿ ಪಕ್ಷಬೇಧ ಮರೆತು ಒಂದಾಗುತ್ತಾರೆನ್ನುವುದನ್ನು ನೆನಪಿಡಿ.ಕರಾವಳಿಗರಿಗೆ ಸಂಪೂರ್ಣ ಸುಂಕ ವಿನಾಯಿತಿ ನೀಡಲೇಬೇಕು.ಸೆ.30ಕ್ಕೆ ಸಭೆ ಕರೆಯಲೇಬೇಕು.ಜನರು ಬೀದಿಗಿಳಿಯುವ ಮುನ್ನ ಬೇಡಿಕೆ ಈಡೇರಿಸಿ ಎಂದು ಆಗ್ರಹಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ,ಸುಂಕ ವಸೂಲಾತಿಗೆ ಇರುವ ಕಂಡೀಶನ್‍ಗಳನ್ನು ಮರೆಮಾಚಿ ಸುಂಕ ವಸೂಲಾತಿ ಕಾನೂನುಬಾಹಿರ.ಕರಾವಳಿಗರಿಗೆ ಸಂಪೂರ್ಣ ಸುಂಕ ವಿನಾಯಿತಿ ನೀಡಲೇಬೇಕು.ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಲೋಕೋಪಯೋಗಿ ಸಚಿವರನ್ನು ಶೀಘ್ರ ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುತ್ತೇನೆ.ಸಂಸದರ ಮೂಲಕ ನಿತಿನ್ ಗಡ್ಕರಿ ಭೇಟಿಗೂ ಕ್ರಮಕೈಗೊಳ್ಳಲಾಗುವುದು.ನಮ್ಮ ಬೇಡಿಕೆ ದೆಹಲಿ ತನಕವೂ ಮುಟ್ಟಬೇಕು ಎಂದರು.
ಪ್ರಮುಖ ನಾಯಕರುಗಳಾದ ನವೀನ್‍ಚಂದ್ರ ಜೆ.ಶೆಟ್ಟಿ,ಯೋಗೀಶ್ ಶೆಟ್ಟಿ ಬಾಲಾಜಿ,ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಕಟಪಾಡಿ ಶಂಕರ ಪೂಜಾರಿ,ಸುಧಾಕರ ಶೆಟ್ಟಿ,ಶಶಿಕಾಂತ್ ಪಡುಬಿದ್ರಿ ವಿಶಾಲಾಕ್ಷಿ ಪುತ್ರನ್,ಸುಧಾಕರ ಕರ್ಕೇರ,ದಮಯಂತಿ ವಿ.ಅಮೀನ್,ವೈ.ಸುಕುಮಾರ್,ಜಿತೇಂದ್ರ ಫುರ್ಟಾಡೋ,ರೇಣುಕಾ ಪುತ್ರನ್,ದಿನೇಶ್ ಕೋಟ್ಯಾನ್,ಮಧು ಆಚಾರ್ಯ,ದೇವಣ್ಣ ನಾಯಕ್,ರಮೇಶ್ ಕೋಟ್ಯಾನ್,ಅನ್ಸಾರ್ ಅಹಮದ್,ದುರ್ಗಾಪ್ರಸಾದ್ ಹೆಗ್ಡೆ,ಧನಂಜಯ ಮಟ್ಟು,ಶಶಿಕಾಂತ್ ಶೆಟ್ಟಿ,ಯು.ಸಿ.ಶೇಖಬ್ಬ,ಭಾಸ್ಕರ ಪಡುಬಿದ್ರಿ,ಮನ್ಸೂರ್ ಸಾಗ್,ಹರೀಶ್ ಶೆಟ್ಟಿ,ರವಿ ಶೆಟ್ಟಿ,ವಾಸುದೇವ ರಾವ್,ಉದಯ ಶೆಟ್ಟಿ,ಡೇವಿಡ್ ಡಿಸೋಜಾ,ಪ್ರಕಾಶ್ ಶೆಟ್ಟಿ ಪಡುಹಿತ್ಲು,ವಾಮನ ಕೋಟ್ಯಾನ್,ವೆಂಕಟೇಶ್ ಎಮ್.,ಹರೀಶ್ ನಾಯಕ್ ಕಾಪು,ಪ್ರಸನ್ನ ಶೆಟ್ಟಿ,ಸುಧೀರ್ ಕರ್ಕೇರ,ನವೀನ್‍ಚಂದ್ರ ಸುವರ್ಣ,ವಿನಯ್ ಬಲ್ಲಾಳ್,ಪಾಂಡುರಂಗ ಕರ್ಕೇರ,ಸಂದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು,ಪರಿಸರದ ಗ್ರಾಪಂಗಳು,ಕಿನ್ನಿಗೋಳಿ,ಪಡುಬಿದ್ರಿ,ಮೂಲ್ಕಿ,ಉಡುಪಿಯ ಬಸ್ಸು,ಕಾರು,ಟೆಂಪೋ,ಲಾರಿ ಯೂನಿಯನ್‍ಗಳು,ರಕ್ಷಣಾ ವೇದಿಕೆ,ಜಯಕರ್ನಾಟಕ ಸಹಿತ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.