ರಾಷ್ಟ್ರೀಯ ಯುವ ಸಮ್ಮಾನ್ ಪುರಸ್ಕಾರಕ್ಕೆ ಶರಣ್ ಕುಮಾರ್ ಮಟ್ಟು ಆಯ್ಕೆ

ಪಡುಬಿದ್ರಿ: ಸಮೀಪದ ಹೆಜಮಾಡಿ ಕರಾವಳಿ ಯುವಕ ವೃಂದದ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ಸಾಧಕ ಶರಣ್ ಕುಮಾರ್ ಮಟ್ಟುರವರು ರಾಷ್ಟ್ರೀಯ ಯುವ ಪ್ರಶಸ್ತಿ ಫೆಡರೇಶನ್ ವತಿಯಿಂದ ನೀಡುವ ಈ ಬಾರಿಯ ರಾಷ್ಟ್ರೀಯ ಯುವ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಕ್ಟೋಬರ್ 13ರಂದು ನವದೆಹಲಿಯ ಇಂಡಿಯಾ ಗೇಟ್ ಬಳಿಯ ಆಂಧ್ರ ಭವನದ ಡಾ.ಬಿಆರ್.ಅಂಬೇಡ್ಕರ್ ಅಡಿಟೋರಿಯಮ್‍ನಲ್ಲಿ ನಡೆಯುವ ಅಂತರಾಷ್ಟ್ರೀಯ ಯುವ ಸಮ್ಮೇಳನ-2019 ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಮ್‍ದಾಸ್ ಅಟಾವಳೆ, ಜಿ.ಕೃಷ್ಣ ರೆಡ್ಡಿ, ಪ್ರತಾಪ್‍ಚಂದ್ರ ಸಾರಂಗಿ ಮತ್ತು ಕಿರಣ್ ರಿಜಿಲು, ಅಂತರಾಷ್ಟ್ರೀಯ ಶಾಂತಿ ಪ್ರತಿಪಾದಕ ನೇಪಾಳದ ಆಚಾರ್ಯ ತನ್ಪಾಲ್, ರಾಷ್ಟ್ರೀಯ ಯುವ ನೀತಿಯ ಸ್ಥಾಪಕ ಡಾ.ಎಸ್.ಎನ್.ಸುಬ್ಬಾ ರಾವ್, ರಾಜ್ಯ ಸಭಾ ಸದಸ್ಯ ಡಾ.ನರೇಂದ್ರ ಜಾದವ್, ರಾಷ್ಟ್ರೀಯ ಮಾನ ಹಕ್ಕು ಆಯೋಗದ ಸದಸ್ಯ ಜ್ಞಾನೇಶ್ವರ ಮೂಳೆ, ಸಂಸದ ಮನೋಜ್ ತಿವಾರಿ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಹೆಜಮಾಡಿ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ನಿರಂತರ ಸ್ವಚ್ಛ ಭಾರತ್ ಯೋಜನೆಯ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಶರಣ್ ಕುಮಾರ್ ಮಟ್ಟುರವರು ಸಾಮಾಜಿಕ, ಯುವ ಜನ, ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪರಿಸರದಲ್ಲಿ ಯುವ ಮಾಹಿತಿ ಶಿಬಿರಗಳನ್ನು ನಡೆಸುತ್ತಾ ಬಂದಿದ್ದರು. ಯುವಜನ ಮೇಳಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಅರ್ಹವಾಗಿ ಜಿಲ್ಲಾ ಮತ್ತು ರಾಜ್ಯ ಯುವ ಪ್ರಶಸ್ತಿ ಗಳಿಸಿದ್ದರು. ಇದೀಗ ಅವರ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ.