ರಾಮಾಂಜನೇಯ ಗುಡ್ಡೆಕೊಪ್ಲ ತಂಡಕ್ಕೆ ಮೂಲ್ಕಿ ಮಯೂರಿ ಯೂತ್ ಕಪ್-2019

ಮೂಲ್ಕಿ: ಮೂಲ್ಕಿಯ ವಿಜಯಾ ಕಾಲೇಜು ಕ್ರೀಡಾಂಗಣದಲ್ಲಿ ಮಯೂರಿ ಫೌಂಡೇಶನ್ ವತಿಯಿಂದ ಯೂತ್ ಫೆಸ್ಟ್ ಅಂಗವಾಗಿ 2 ದಿನಗಳ ಕಾಲ ನಡೆದ ಅವಿಭಜಿತ ದಕ ಜಿಲ್ಲಾ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ರಾಮಾಂಜನೇಯ ಕ್ರಿಕೆಟರ್ಸ್ ಗುಡ್ಡೆಕೊಪ್ಲ ತಂಡವು ಮಯೂರಿ ಯೂತ್ ಕಪ್-2019 ಪಡೆಯಿತು.

ರಾಮಾಂಜನೇಯ ತಂಡವು ಫೈನಲ್‍ನಲ್ಲಿ ಮೂಲ್ಕಿಯ ಬಲಿಷ್ಠ ಎಸ್.ಎಸ್.ಫ್ರೆಂಡ್ಸ್ ತಂಡವನ್ನು ನಿರಾಯಾಸವಾಗಿ ಸೋಲಿಸಿ ಪ್ರಸಸ್ತಿ ಜತೆಗೆ ನಗದು ರೂ.33,333 ನ್ನು ಪಡೆಯಿತು.ಫೈನಲ್‍ನಲ್ಲಿ ಸೋತ ಎಸ್.ಎಸ್.ಫ್ರೆಂಡ್ಸ್ ಮೂಲ್ಕಿ ತಂಡವು ದ್ವಿತೀಯ ಪ್ರಶಸ್ತಿ ಜತೆಗೆ ನಗದು ರೂ.22,222ನ್ನು ತನ್ನದಾಗಿಸಿಕೊಂಡಿತು.

ಸೆಮಿಫೈನಲ್‍ಗಳಲ್ಲಿ ರಾಮಾಜನೇಯ ಗುಡ್ಡೆಕೊಪ್ಲ ತಂಡವು ಬಿ.ಜಿ.ಅಲೆವೂರು ತಂಡವನ್ನೂ,ಎಸ್.ಎಸ್.ಫ್ರೆಂಡ್ಸ್ ತಂಡವು ಬಿ.ಎಲ್.ಸಿ.ಬಪ್ಪನಾಡು ತಂಡವನ್ನೂ ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ವೈಯಕ್ತಿಕ ಪ್ರಶಸ್ತಿ: ಟೂರ್ನಿಯುದ್ದಕ್ಕೂ ಸರ್ವಾಂಗೀಣ ಪ್ರದರ್ಶನಗೈದ ರಾಮಾಂಜನೇಯ ಗುಡ್ಡೆಕೊಪ್ಲ ತಂಡದ ಸವ್ಯಸಾಚಿ ಸಚಿನ್ ಸರಣಿ ಪುರುಷೊತ್ತಮ ಪ್ರಶಸ್ತಿ,ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಗುಡ್ಡೆಕೊಪ್ಲ ತಂಡದ ವಿತೇಶ್,ಅತ್ಯುತ್ತಮ ಬ್ಯಾಟ್ಸ್‍ಮೆನ್ ಆಗಿ ಬಿಎಲ್‍ಸಿ ಬಪ್ಪನಾಡು ತಂಡದ ರೋಹಿತ್ ಮತ್ತು ಅತ್ಯುತ್ತಮ ಬೌಲರ್ ಆಗಿ ಎಸ್‍ಎಸ್ ಫ್ರೆಂಡ್ಸ್ ತಂಡದ ಭರತ್ ವೈಯಕ್ತಿಕ ಪ್ರಶಸ್ತಿ ಪಡೆದರು.

ಸನ್ಮಾನ: ಇತ್ತೀಚೆಗೆ ಮಂಗಳೂರು ವಿವಿಯಿಂದ ತಮ್ಮ ಸಂಶೋಧನಾ ಮಹಾಪ್ರಬಂಧಕ್ಕೆ ಫಿಲಾಸಫಿ ಆಫ್ ಡಾಕ್ಟರೇಟ್ ಪಡೆದ ಮಯೂರಿ ಫೌಂಡೇಶನ್ ಸದಸ್ಯೆ ಡಾ.ಸುಪ್ರಭಾ ಹರೀಶ್‍ರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಪ್ರಶಸ್ತಿ ವಿತರಣೆ:ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೂಲ್ಕಿ ಶ್ರೀ ವೆಂಕಟರಮಣ ದೇವಳದ ಟ್ರಸ್ಟಿ ಎಮ್.ದಾಮೋದರ ಕುಡ್ವ,ಅಹಮದಾಬಾದ್ ಉದ್ಯಮಿ ಸುಧಾಕರ ಶೆಟ್ಟಿ,ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾ ಅಧ್ಯಕ್ಷ ಗುರುವಪ್ಪ ಕೋಟ್ಯಾನ್,ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ,ಮೂಲ್ಕಿ ವಿಜಯಾ ಕಾಲೇಜು ಪ್ರಿನ್ಸಿಪಾಲ್ ಡಾ.ನಾರಾಯಣ ಪೂಜಾರಿ,ಉದ್ಯಮಿಗಳಾದ ದಿನೇಶ್ ಹೆಗ್ಡೆ ಮತ್ತು ವಿನೋದ್ ಸಾಲ್ಯಾನ್,ಮಯೂರಿ ಫೌಂಡೇಶನ್ ಟ್ರಸ್ಟಿಗಳಾದ ರಾಜೇಶ್ ಶೆಟ್ಟಿ,ದೇವಪ್ರಸಾದ್ ಪುನರೂರು,ಜೀವನ್ ಕೆ.ಶೆಟ್ಟಿ,ಪ್ರಬೋಧ್ ಕುಡ್ವ ಮತ್ತು ನವೀನ್ ಶೆಟ್ಟಿ,ಸುಜಿತ್ ಎಸ್.ಸಾಲ್ಯಾನ್,ಉದಯ ಅಮೀನ್,ರವೀಂದ್ರ ಶೆಟ್ಟಿ,ಬಬಿತಾ ಶೆಟ್ಟಿ,ಸತ್ಯೇಂದ್ರ ಶೆಣೈ,ಸುನಿಲ್ ಕಾಮತ್,ಸುಭಾಸ್ ಕಾಮತ್,ಅತುಲ್ ಪೈ,ರಾಘವೇಂದ್ರ ಕಾಮತ್,ಗಿರೀಶ್ ಮೆಂಡನ್ ಮುಖ್ಯ ಅತಿಥಿಗಳಾಗಿದ್ದರು.

ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿದರು.ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿವ ನಿಟ್ಟಿನಲ್ಲಿ ಮಯೂರಿ ಫೌಂಡೇಶನ್ ಮುಂದೆ ನಿರಂತರ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದವರು ಘೋಷಿಸಿದರು.

ಹರೀಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.ಟ್ರಸ್ಟಿ ದೇವಪ್ರಸಾದ್ ಪುನರೂರು ವಂದಿಸಿದರು.