ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ

ಪಡುಬಿದ್ರಿ: ರಾಷ್ಟ್ರ ಮಟ್ಟದ ಬಾಲಕಿಯರ ಕಬಡ್ಡಿ ಸ್ಪರ್ಧೆಗಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿರುವ ಬಾಲಕಿಯರ ತಂಡಕ್ಕೆ ಪಡುಬಿದ್ರಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ನೇತೃತ್ವದಲ್ಲಿ ರಾಜ್ಯದ ವಿವಿದೆಡೆಗಳಿಂದ ಆಯ್ಕೆಯಾಗಿರುವ ವಿದ್ಯಾರ್ಥಿನಿಯರನ್ನು ಶುಭ ಹಾರೈಸಿ ಬೀಳ್ಕೊಡಲಾಯಿತು.

ಜ. 12ರಿಂದ 16ರವರೆಗೆ ಛತ್ತೀಸ್‍ಗಢದಲ್ಲಿ 65ನೇ ರಾಷ್ಟ್ರಮಟ್ಟದ 14ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟವು ನಡೆಯಲಿದೆ.

ಈ ಪಂದ್ಯಾಟದಲ್ಲಿ ಪಡುಬಿದ್ರಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯವನ್ನು ಶಾಲಾ ಬಾಲಕಿಯರಾದ ಸೃಜನ್ಯಾ ಅದಮಾರು, ದಿಶಾ ಪಲಿಮಾರು ಮತ್ತು ಪೂಜಾ ಪಡುಬಿದ್ರಿ ಪ್ರತಿನಿಧಿಸಲಿದ್ದಾರೆ. ಇವರೊಂದಿಗೆ ಕರ್ನಾಟಕ ರಾಜ್ಯ ತಂಡದ ಎಲ್ಲಾ ವಿದ್ಯಾರ್ಥಿನಿಯರಿದ್ದು ಪಡುಬಿದ್ರಿ ಸಾಗರ ವಿದ್ಯಾಮಂದಿರ ಶಾಲೆಯ ಸೃಜ್ಞಾ ಡಿ. ಕರ್ಕೇರ, ಗಣ್ಯಾ ಜಿ. ಸುವರ್ಣ, ಬೆಳಗಾವಿಯ ರಾಯಭಾಗ್ ಶಾಲೆಯ ಕಾವೇರಿ ಹುಕ್ಕೇರಿ, ಕಾವೇರಿ ವೀರಾಜನವರ, ವಿಜಯಲಕ್ಷ್ಮೀ ಪೂಜೇರಿ, ಚೈತ್ರಾ ವೀರಾಜನವರ, ಬೆಳಗಾವಿಯ ಮೊರಬಾ ಶಾಲೆಯ ಶ್ರೀದೇವಿ ಸಪ್ತಸಾಗರ, ವಗ್ಗ ಬಂಟ್ವಾಳದ ಮೊರಾರ್ಜಿ ಶಾಲೆಯ ಅನ್ನಪೂರ್ಣಾ, ಶ್ರಾವ್ಯಾ, ಸುಳ್ಯದ ಜ್ಞಾನದೀಪ ಶಾಲೆಯ ಸಾತ್ವಿ ಕೂಡಾ ಈ ತಂಡದ ಜತೆಗಿದ್ದಾರೆ.

ಜ. 9ರಂದು ರೈಲಿನ ಮೂಲಕ ಛತ್ತೀಸ್‍ಘಡ್‍ಗೆ ಪ್ರಯಾಣಿಸಲಿರುವ ಇವರನ್ನು ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ವತಿಯಿಂದ ಶುಭ ಹಾರೈಸಿ ಜ. 8ರಂದು ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಶಾಲಾ ಟ್ರಸ್ಟ್‍ನ ಅಧ್ಯಕ್ಷ ವೈ. ಗೋಪಾಲ್ ಶೆಟ್ಟಿ, ಸಂಚಾಲಕ ಪಿ. ಆರ್. ನಾವಡ, ಟ್ರಸ್ಟ್‍ನ ಸಲಹೆಗಾರದ ಜೇಮ್ಸ್ ಅಂದ್ರಾದೆ, ಮುಖ್ಯೋಪಾಧ್ಯಾಯಿನಿ ಉಷಾ ಎಂ., ದೈಹಿಕ ಶಿಕ್ಷಕ ಸತೀಶ್, ತಂಡದ ವ್ಯವಸ್ಥಾಪಕಿ, ಶಿಕ್ಷಕಿ ಸೀಮಾ ಮತ್ತು ಇತರರು ಉಪಸ್ಥಿತರಿದ್ದರು.