ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಢಿಕ್ಕಿ: ತಲೆಗೆ ತೀವ್ರ ಗಾಯ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ತೊಕ್ಕೊಟ್ಟುವಿನಿಂದ ಅತ್ತೂರು ಕಡೆಗೆ ಹೋಗುತ್ತಿದ್ದ ಬೈಕ್ ಢಿಕ್ಕಿಯಾಗಿ ಮಂಗಳವಾರ ಬೆಳಿಗ್ಗೆ 11ಗಂಟೆ ಸುಮಾರಿಗೆ ಎರ್ಮಾಳು ತೆಂಕ ಗ್ರಾಮದ ಸೌಮ್ಯಾ(28) ತಲೆಗೆ ತೀವ್ರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಸೌಮ್ಯಾ ತನಗಿದ್ದ ಅಸೌಖ್ಯದ ಹಿನ್ನೆಲೆಯಲ್ಲಿ ಪಡುಬಿದ್ರಿಯಲ್ಲಿ ರಕ್ತ ಪರೀಕ್ಷೆಗೆಂದು ಬಂದಿದ್ದು ಅದನ್ನು ಮುಗಿಸಿ ರಸ್ತೆಯನರ್ನು ದಾಟುತ್ತಿದ್ದ ವೇಳೆ ಈ ಅವಘಡವು ಸಂಭವಿಸಿದೆ. ಬೈಕ್ ಢಿಕ್ಕಿ ಪರಿಣಾಮವಾಗಿ ತಲೆಗೆ ಗಾಯಗಳಾಗಿದ್ದು ರಕ್ತಸ್ರಾವದೊಂದಿಗೆ ಹೆದ್ದಾರಿಯಲ್ಲಿ ಬಿದ್ದಿದ್ದ ಅವರನ್ನು ಸಾರ್ವಜನಿಕರ ಸಹಕಾರದೊಂದಿಗೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗಾಗಿ ಒಯ್ಯಲಾಗಿತ್ತು.ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಬೈಕ್ ಸವಾರರಾದ ತೊಕ್ಕೊಟ್ಟುವಿನ ಅಶ್ವಿನ್ ಮತ್ತು ರಿತೇಶ್ ರಸ್ತೆಗೆ ಎಸೆಯಲ್ಪಟ್ಟರೂ ಹೆಲ್ಮೆಟ್ ಧರಿಸಿದ್ದ ಕಾರಣ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.
ಪಡುಬಿದ್ರಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.