ಯುವ ಸಮಾಜಕ್ಕೆ ಜೇಸಿಐ ತರಬೇತಿಯಿಂದ ಲಾಭ-ಪ್ರಬೋಧ್ ಕುಡ್ವ

ಮೂಲ್ಕಿ: ಜೇಸಿಐ ಸಂಸ್ಥೆಯ ವ್ಯಕ್ತಿತ್ವ ವಿಕಸನ ತರಬೇತಿಗಳು ಯುವ ಸಮಾಜದ ಸಬಲೀಕರಣಕ್ಕೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ಮೂಲ್ಕಿ ಸ್ವಸ್ಥಿಕ್ ವುಡ್ ಇಂಡಸ್ಟ್ರೀಸ್ ಪ್ರವರ್ತಕ ಪ್ರಬೋಧ್ ಕುಡ್ವ ಹೇಳಿದರು.
ಮೂಲ್ಕಿ ಆದಿಧನ್ ಹೋಟೆಲ್ ಸಭಾಂಗಣದಲ್ಲಿ ಜೇಸಿಐ ಮೂಲ್ಕಿ ಶಾಂಭವಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಮಾರಂಭದ ಮುಖ್ಯ ಅತಿಥಿ ಜೇಸಿಐ ವಲಯ 15ರ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಮಾತನಾಡಿ, ಹಿರಿಯರ ಸಾಧನೆಗಳು ಕಿರಿಯರಿಗೆ ದಾರಿದೀಪವಾಗಿದೆ. ಕಿರಿಯರನ್ನು ಉತ್ತಮ ನಾಯರನ್ನಾಗಿ ರೂಪಿಸಲು ಹಿರಿಯರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ನೂತನ ಅಧ್ಯಕ್ಷ ಗಣೇಶ್ ಭಟ್ ಎಮ್.ರವರಿಗೆ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಪ್ರಮಾಣವಚನ ಬೋಧಿಸಿದರು. ನಿಕಟ ಪೂರ್ವಾಧ್ಯಕ್ಷ ನವೀನ್ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಗಣೇಶ್ ಭಟ್, ಮೂಲ್ಕಿ ಶಾಂಭವಿ ಜೇಸಿಐನ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು.

ನೂತನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜೇಸಿರೆಟ್ ಅಧ್ಯಕ್ಷೆ ಕಾತ್ಯಾಯಿನಿ ಭಟ್, ಜೆಜೆಸಿ ಅಧ್ಯಕ್ಷ ಅನುರಾಗ ಪಿ.ಕರ್ಕೇರ ಹಾಗೂ ನೂತನ ಪದಾಧಿಕಾರಿಗಳಿಗೆ ಗಣೇಶ್ ಭಟ್ ಪ್ರಮಾಣವಚನ ಬೋಧಿಸಿದರು.
ಸನ್ಮಾನ: ಇದೇ ಸಂದರ್ಭ ಜೇಸಿಐ ಮೂಲ್ಕಿ ಶಾಂಭವಿಯ ಸ್ಥಾಪಕಾಧ್ಯಕ್ಷ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಸುರೇಶ್ ರಾವ್, ನಿಕಟ ಪೂರ್ವಾಧ್ಯಕ್ಷ ನವೀನ್ ಶೆಟ್ಟಿ ಮತ್ತು ಮೂಲ್ಕಿ ಲಯನ್ಸ್ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್‍ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಪ್ರಬೋಧ್ ಕುಡ್ವ, ಜೇಸಿಐ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ನಿಕಟಪೂರ್ವ ವಲಯಾಧಿಕಾರಿ ಮಲ್ಲಿಕಾರ್ಜುನ ಆರ್.ಕೆ.ಯವರನ್ನು ಗೌರವಿಸಲಾಯಿತು.

ನೂತನ ಘಟಕದ ಆರಂಭಿಕ ಶುಲ್ಕ ಸಲ್ಲಿಕೆ: ಮೂಲ್ಕಿ ಶಾಂಭವಿ ಜೇಸಿಐ ಪ್ರವರ್ತಿಸಲಿರುವ ನೂತ ಜೇಸಿಐ ಘಟಕಗಳಾದ ಕಿನ್ನಿಗೋಳಿ ಜೇಸಿಐ ಮತ್ತು ಕಟೀಲು ನಂದಿನಿ ಜೇಸಿಐಗಳ ಆರಂಭಿಕ ಶುಲ್ಕವನ್ನು ಮಲ್ಕಿಕಾರ್ಜುನ ಆರ್‍ಕೆಯವರು ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥರಿಗೆ ಸಲ್ಲಿಸಿದರು.

ಜೇಸಿಐ ವಲಯ ಉಪಾಧ್ಯಕ್ಷ ಲೋಕೇಶ್ ರೈ ಕೆ., ನಿರ್ಗಮನ ಕಾರ್ಯದರ್ಶಿ ಕಲ್ಲಪ್ಪ ತಡವಾಲಗ, ನಿರ್ಗಮನ ಜೇಸಿರೆಟ್ ಅಧ್ಯಕ್ಷೆ ದೀಪಾ ಎನ್.ಶೆಟ್ಟಿ ಅತಿಥಿಗಳಾಗಿದ್ದರು.

ವಿಜಯಕುಮಾರ್ ಕುಬೆವೂರು ಕಾರ್ಯಕ್ರಮ ನಿರ್ವಹಿಸಿದರು. ನವೀನ್ ಶೆಟ್ಟಿ ಸ್ವಾಗತಿಸಿ ಗತ ವರ್ಷದ ವರದಿ ಮಂಡಿಸಿದರು. ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ವಂದಿಸಿದರು.